
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 8, 9, 10, 16, 17 ಮತ್ತು 79ರಲ್ಲಿ ಸುಮಾರು 14 ಎಕರೆ ಸರ್ಕಾರಿ ಭೂಮಿಯ ಅನಧಿಕೃತ ಒತ್ತುವರಿ ತೆರವುಗೊಳಿಸುವ ಸಂಬಂಧ ರಾಜ್ಯ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ಅಮಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ಆದೇಶವನ್ನು ವಜಾಗೊಳಿಸುವಂತೆ ಕೋರಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ಎಸ್‌ಐಟಿ ರಚಿಸಿರುವ ಸರ್ಕಾರದ ಆದೇಶದ ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಅಕ್ರಮ ಎಂದು ಘೋಷಿಸಬೇಕು. ಈ ಸಂಬಂಧ ಮೇ ೨೯ರಂದು ನೀಡಿರುವ ಸಮನ್ಸ್ ರದ್ದುಪಡಿಸಬೇಕು ಎಂದು ಕುಮಾರಸ್ವಾಮಿ ಕೋರಿದ್ದಾರೆ. ಸರ್ಕಾರ ಎಸ್‌ಐಟಿ ರಚಿಸಿ ಆದೇಶಿಸಿದ ಬಳಿಕ ಅಧಿಸೂಚನೆ ಹೊರಡಿಸಲಾಗಿಲ್ಲ. ಹೀಗಾಗಿ, ಇದರ ಭಾಗವಾಗಿ ಕೈಗೊಂಡಿರುವ ಕ್ರಮಗಳು ಕಾನೂನಬಾಹಿರವಾಗಿವೆ ಎಂದು ವಕೀಲ ಎ ವಿ ನಿಶಾಂತ್ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಕುಮಾರಸ್ವಾಮಿ ಆಕ್ಷೇಪಿಸಿದ್ದಾರೆ.
ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್, ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ, ಬೆಂಗಳೂರಿನ ಕಂದಾಯ ಆಯುಕ್ತಾಲಯದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರನ್ನು ಸದಸ್ಯರಾಗಿ ನೇಮಿಸಿ, ಪ್ರಾದೇಶಿಕ ಆಯುಕ್ತರ ಕಚೇರಿಯ ಗ್ರೇಡ್-2 ತಹಶೀಲ್ದಾರ್ ಶೀತಲ್ ಅವರನ್ನು ಎಸ್‌ಐಟಿಯ ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಿ ರಾಜ್ಯ ಸರ್ಕಾರವು ಜನವರಿ 28ರಂದು ಆದೇಶಿಸಿತ್ತು.
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 8, 9, 10, 16, 17 ಮತ್ತು 79ರ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಒತ್ತುವರಿ ತೆರವುಗೊಳಿಸುವ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ ಸೆಕ್ಷನ್ 195 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ ಸೆಕ್ಷನ್ 8ರ ಅಡಿ ಎಸ್‌ಐಟಿಯ ಅಧಿಕಾರಿಗಳಿಗೆ ಅಧಿಕಾರ ನೀಡಿ ಆದೇಶಿಸಲಾಗಿತ್ತು.
ಕರ್ನಾಟಕ ಭೂ ಕಂದಾಯ ಕಾಯಿದೆ, ಕರ್ನಾಟಕ ಭೂ ಕಂದಾಯ ನಿಯಮಗಳು, ಕರ್ನಾಟಕ ಭೂ ಮಂಜೂರಾತಿ ನಿಯಮ ಮತ್ತು ಕರ್ನಾಟಕ ಪರಿಶೀಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವೊಂದು ಜಮೀನುಗಳ ಪರಭಾರೆ ನಿಷೇಧ) ಕಾಯಿದೆ ಉಲ್ಲಂಘನೆ ಮತ್ತು ಜಲಕಾಯ, ಜಲಮೂಲ ಪ್ರದೇಶಗಳು, ಸರ್ಕಾರಿ ಖರಾಬು/ಗೋಮಾಳ ಒತ್ತುವರಿಯಾಗಿರುವ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಲು ಎಸ್‌ಐಟಿ ರಚಿಸಲಾಗಿದೆ.
ಪ್ರಕರಣದ ಹಿನ್ನೆಲೆ: ರಾಮನಗರ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿಯ ಸಂಬಂಧ ಕರ್ನಾಟಕ ಲೋಕಾಯುಕ್ತ ವರದಿಯ ಅನುಸಾರ ಕ್ರಮಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ 2020ರಲ್ಲಿ ಆದೇಶಿಸಿತ್ತು. ಇದನ್ನು ಜಾರಿಗೊಳಿಸಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯವು ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಪತ್ತೆ ಮಾಡಲು ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದೆ. ಇದು ಕಾನೂನಿಗೆ ಅನುಗುಣವಾಗಿಲ್ಲ. ಆದ್ದರಿಂದ ಅದನ್ನು ಬದಿಗೆ ಸರಿಸಬೇಕು ಎಂದು ಕುಮಾರಸ್ವಾಮಿ ಕೋರಿದ್ದಾರೆ.