ವಿದ್ಯುತ್ ಸ್ಮಾರ್ಟ್ ಮೀಟರ್ ಕಡ್ಡಾಯ ಅಳವಡಿಕೆ ಸಂಬಂಧ ಬೆಂಗಳೂರು ವಿದ್ಯುಚ್ಛಕ್ತಿ ಪೂರೈಕೆ ಕಂಪೆನಿಯು (ಬೆಸ್ಕಾಂ) ಹೊರಡಿಸಿರುವ ಮಾರ್ಗಸೂಚಿಯನ್ನು ಅರ್ಜಿದಾರರೊಬ್ಬರಿಗೆ ಸೀಮಿತಗೊಳಿಸಿ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ. ಆದರೆ, ಈ ಕುರಿತು ಸರ್ವಾನವಯ ಆದೇಶ ನೀಡಲು ನಿರಾಕರಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಪಿ ಎಂ ಹರೀಶ್ ಅವರು ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಬೆಸ್ಕಾಂ 2025ರ ಫೆಬ್ರವರಿ 13ರಂದು ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿ ವಜಾ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
“ಬೇರೊಂದು ಪ್ರಕರಣದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಬೆಸ್ಕಾಂ ಒತ್ತಾಯ ಮಾಡಬಾರದು ಎಂದು ಆದೇಶಿಸಲಾಗಿದೆ. ಅಂತೆಯೇ, ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಅವರು ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸುವುದರಿಂದ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ ಎಂದು ವಾದಿಸಿದ್ದಾರೆ. ಹೀಗಾಗಿ, ಅರ್ಜಿದಾರರಿಗೆ ಸೀಮಿತವಾಗಿ ಬೆಸ್ಕಾಂ ಮಾರ್ಗಸೂಚಿಗೆ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿರುವುದಕ್ಕೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿ, ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ,ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಅವರು “ಸಾರ್ವಜನಿಕ ಬೊಕ್ಕಸಕ್ಕೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ. 900 ರೂಪಾಯಿ ಮೌಲ್ಯದ ಸ್ಮಾರ್ಟ್ ಮೀಟರ್‌ಗೆ 14 ಸಾವಿರ ರೂಪಾಯಿ ಪಾವತಿಸಬೇಕಿದೆ. ಮಾರ್ಗಸೂಚಿಯು ಸುತ್ತೋಲೆಗೆ ಅನುಗುಣವಾಗಿಲ್ಲ” ಎಂದರು.
ಆಗ ಪೀಠವು “ಅರ್ಜಿದಾರರಿಗೆ ಅನ್ವಯಿಸಿ ಸ್ಮಾರ್ಟ್ ಮೀಟರ್ ಅಳವಡಿಕೆ ಮತ್ತು ಮಾರ್ಗಸೂಚಿಗೆ ತಡೆ ನೀಡಲಾಗುವುದು. ಮಾರ್ಗಸೂಚಿಯನ್ನು ಸಂಪೂರ್ಣವಾಗಿ ತಡೆದರೆ ಎಲ್ಲರಿಗೂ ಅನ್ವಯಿಸುತ್ತದೆ. ಸರ್ವಾನವಯ ತಡೆ ನೀಡುವುದರಿಂದ ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ” ಎಂದರು.
ಆಗ ಲಕ್ಷ್ಮಿ ಅವರು “ಇಲ್ಲ, ಪಿಐಎಲ್‌ನಲ್ಲಿ ಟೆಂಡರ್‌ನಲ್ಲಿ ಆಗಿರುವ ವಂಚನೆ ವಿಚಾರ ಪ್ರಸ್ತಾಪಿಸಲಾಗಿದೆ” ಎಂದರು. ಇದಕ್ಕೆ ಒಪ್ಪದ ಪೀಠವು ಅರ್ಜಿದಾರರಿಗೆ ಸೀಮಿತವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆ ಮತ್ತು ಬೆಸ್ಕಾಂ ಮಾರ್ಗಸೂಚಿಗೆ ತಡೆ ನೀಡಿತು.
ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಮತ್ತಿಕೆರೆ ನಿವಾಸಿ ಎನ್ ಜಯಪಾಲ ಹಾಗೂ ಮುನಿಸ್ವಾಮಿ ಗೌಡ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಈಗಾಗಲೇ ಸಲ್ಲಿಕೆಯಾಗಿರುವ ಮತ್ತೊಂದು ಪಿಐಎಲ್ ಜೊತೆಗೂಡಿಸಿ ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರ ವಿಭಾಗೀಯ ಪೀಠ ಹೇಳಿದೆ.
ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಟೆಂಡರ್ ನೀಡಿರುವುದು ಕಾನೂನು ಬಾಹಿರವಾಗಿದ್ದು, ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಲಾಗಿದೆ.