High Court of Karnataka
High Court of Karnataka 
ಸುದ್ದಿಗಳು

ಉಡುಪಿಯ ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಜಿಲ್ಲಾ ಧಾರ್ಮಿಕ್‌ ಪರಿಷತ್‌ ಆದೇಶಕ್ಕೆ ಹೈಕೋರ್ಟ್‌ ತಡೆ

Bar & Bench

ಉಡುಪಿಯ ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿ ನೇಮಿಸಿ ಜಿಲ್ಲಾ ಧಾರ್ಮಿಕ ಪರಿಷತ್ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.

ಜಿಲ್ಲಾ ಧಾರ್ಮಿಕ ಪರಿಷತ್ ಆದೇಶ ಪ್ರಶ್ನಿಸಿ ದೇವಸ್ಥಾನದ ಅನುವಂಶೀಯ ಟ್ರಸ್ಟಿ ಹಾಗೂ ಅರ್ಚಕರಾಗಿದ್ದ ಯು ಗಣೇಶ್ ಭಟ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕ ಸದಸ್ಯ ಪೀಠವು ನಡೆಸಿತು.

“ಮುಂದಿನ ಆದೇಶದವರೆಗೆ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ನೇಮಕಾತಿ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಪ್ರತಿವಾದಿಗಳಾದ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ರಾಜ್ಯ ಧಾರ್ಮಿಕ ಪರಿಷತ್, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್, ಜಿಲ್ಲಾಧಿಕಾರಿ, ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಟ್ರಸ್ಟಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಬೇಕು” ಎಂದು ಪೀಠವು ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲ ವಿ ಆರ್ ಪ್ರಸನ್ನ ಅವರು “ಗಣೇಶ್ ಭಟ್ ಅವರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅನುವಂಶೀಯ ಟ್ರಸ್ಟಿ ಮತ್ತು ಅರ್ಚಕರಾಗಿ 2012ರ ಫೆಬ್ರವರಿ 2ರಂದು ನೇಮಕಗೊಂಡಿದ್ದರು. 2014ರಲ್ಲಿ ಕೆಲ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅರ್ಚಕ ಹಾಗೂ ಟ್ರಸ್ಟಿ ಸ್ಥಾನದಿಂದ ಅವರನ್ನು ಅಮಾನತು ಮಾಡಲಾಗಿತ್ತು. ನಂತರ 2016ರಲ್ಲಿ ವಜಾ ಮಾಡಲಾಗಿತ್ತು” ಎಂದು ತಿಳಿಸಿದರು.

“ವಿಚಾರಣಾ ನ್ಯಾಯಾಲಯವು 2021ರ ಮಾರ್ಚ್‌ 22ರಂದು ಗಣೇಶ್ ಭಟ್ ಅವರನ್ನು ಎಲ್ಲಾ ಆರೋಪಗಳಿಂದ ದೋಷಮುಕ್ತಗೊಳಿಸಿತ್ತು. 2021ರ ಅಕ್ಟೋಬರ್‌ 21ರಂದು ಜಿಲ್ಲಾ ಧಾರ್ಮಿಕ ಪರಿಷತ್ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಟ್ರಸ್ಟಿಗಳನ್ನು ನೇಮಿಸಿತು. ಆದರೆ, ಗಣೇಶ್ ಭಟ್ ಅವರನ್ನು ಕೈಬಿಟ್ಟಿದೆ” ಎಂದು ತಿಳಿಸಿದರು.

“ಕಾನೂನು ಪ್ರಕಾರ ಅನುವಂಶೀಯ ಅರ್ಚಕರನ್ನು ದೇವಸ್ಥಾನದ ಟ್ರಸ್ಟಿಯನ್ನಾಗಿ ನೇಮಿಸುವುದು ಕಡ್ಡಾಯ. ಒಂದು ವೇಳೆ ಅರ್ಚಕರ ಮೇಲೆ ಯಾವುದಾದರೂ ಆರೋಪವಿದ್ದರೆ, ಅವರ ಕುಟುಂಬ ಸದಸ್ಯರನ್ನು ನೇಮಿಸಬೇಕು. ಹಾಗಾಗಿ, ತಮ್ಮ ಕುಟುಂಬ ಸದಸ್ಯರನ್ನು ಟ್ರಸ್ಟಿಯಾಗಿ ನೇಮಕ ಮಾಡುವಂತೆ ಕೋರಿ ಗಣೇಶ್ ಭಟ್ 2021ರ ನವೆಂಬರ್‌ 11ರಂದು ಮನವಿ ಪತ್ರ ಸಲ್ಲಿಸಿದ್ದರೂ, ಅದನ್ನು ಸರ್ಕಾರ ಪರಿಗಣಿಸಿಲ್ಲ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.