ಸುದ್ದಿಗಳು

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ತಡೆ ಕೋರಿರುವ ಅರ್ಜಿಗಳ ವಿಚಾರಣೆ ನಾಳೆಗೆ ಮುಂದೂಡಿಕೆ

“ಸಮೀಕ್ಷೆಗೆ ₹420 ಕೋಟಿಯನ್ನು ವೆಚ್ಚ ಮಾಡಲಾಗುತ್ತಿದ್ದು, ಸಾವಿರಾರು ಜನರನ್ನು ಸಮೀಕ್ಷೆಗೆ ಬಳಕೆ ಮಾಡಲಾಗುತ್ತಿದೆ. ಸಮೀಕ್ಷೆಯ ಹಿಂದಿನ ದಿನ ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿದ್ದಾರೆ," ಎಂದು ಸರ್ಕಾರದ ವಾದ.

Bar & Bench

ರಾಜ್ಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ ತಡೆ ನೀಡುವಂತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರಕ್ಕೆ ಮುಂದೂಡಿದೆ.

ಸಮೀಕ್ಷೆಗಾಗಿ ಆಗಸ್ಟ್‌ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್‌ ಸುಬ್ಬಾರೆಡ್ಡಿ ಮತ್ತಿತರರು ಸಲ್ಲಿಸಿರುವ ಪ್ರತ್ಯೇಕ ಪಿಐಎಲ್‌ಗಳನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ಮಧ್ಯಂತರ ತಡೆಗೆ ಸಂಬಂಧಿಸಿದಂತೆ ವಾದ ಆಲಿಸಲು ಅರ್ಜಿಗಳನ್ನು ನಾಳೆಗೆ ಪಟ್ಟಿ ಮಾಡಲು ಆದೇಶಿಸಿದೆ.

ಅರ್ಜಿದಾರರ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ “ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಪತ್ತೆ ಮಾಡಲು ಸರ್ಕಾರವು ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ. ಆದರೆ, ಇದು ಸಂವಿಧಾನದ 342 (A) ನೇ ವಿಧಿಗೆ ವಿರುದ್ಧವಾಗಿದೆ” ಎಂದರು.

“ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು 2023ರಲ್ಲಿ ಸರ್ಕಾರದ ಮುಂದೆ ಇಡಲಾಗಿತ್ತು. ಈ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳದೇ ಪುನಾ ಸಮೀಕ್ಷೆ ನಡೆಸಲಾಗುತ್ತಿದೆ.  ಜಿಯೊ ಟ್ಯಾಗ್‌ ಮಾಡಿ, ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ಮೂಲಕ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ಇದು ಆಧಾರ್‌ ಕಾಯಿದೆಗೆ ವಿರುದ್ಧವಾಗಿದೆ. ಈ ಸಮೀಕ್ಷೆಯು ಒಟ್ಟಾರೆ ಜಾತಿ ಕೇಂದ್ರಿತವಾಗಿದೆ” ಎಂದು ಆಕ್ಷೇಪಿಸಿದರು.

ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಅವರು “ಸಮೀಕ್ಷೆಯ ಆಧಾರದಲ್ಲಿ ಜಾತಿಯ ಪಟ್ಟಿ ಮಾಡುತ್ತಿರುವುದು ಗಣತಿಯಲ್ಲದೆ ಬೇರೇನೂ ಅಲ್ಲ. ಜನಸಂಖ್ಯೆ ಮತ್ತು ಮಾನದಂಡಗಳನ್ನು ಸರ್ಕಾರ ಪಟ್ಟಿ ಮಾಡುತ್ತಿದೆ. ಇದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇಡೀ ರಾಜ್ಯದ ಜನತೆಯನ್ನು ಒಳಗೊಳ್ಳುತ್ತಿದೆ. ಇದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಕೇಂದ್ರ ಸರ್ಕಾರ ಮಾತ್ರ ಗಣತಿ ಮಾಡಬಹುದು” ಎಂದರು.

ರಾಜ್ಯ ಒಕ್ಕಲಿಗರ ಸಂಘ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು ಅವರು “ಯಾವುದೇ ಅಧ್ಯಯನ ಆಧರಿಸಿ ಜಾತಿ ಸಮೀಕ್ಷೆ ಮಾಡಲಾಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ಜಾತಿ ಸೇರ್ಪಡೆ ಅಥವಾ ಅದನ್ನು ತೆಗೆಯುವ ಸಂಬಂಧ ಶಿಫಾರಸ್ಸು ಮಾಡಲು ಮಾತ್ರ ಸಮೀಕ್ಷೆ ನಡೆಸುವ ಅಧಿಕಾರವಿದೆ” ಎಂದರು.

ಇನ್ನೊಬ್ಬ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ ಅವರು “ರಾಜ್ಯ ಸರ್ಕಾರದ ಆದೇಶವು ಅಧಿಕಾರದಲ್ಲಿರುವವರ ಪ್ರಯತ್ನವಾಗಿದೆ. ಇದರ ಹಿಂದಿನ ಉದ್ದೇಶ ಜಾತಿಗಳಲ್ಲಿನ ಸಂಖ್ಯೆ ಕಂಡು ಹಿಡಿದು, ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸುವುದಾಗಿದೆ” ಎಂದರು.

ಈ ಹಂತದಲ್ಲಿ ಪೀಠವು “ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿ ನೇಮಕ ಮಾಡಬೇಕೇ ಎಂದು ಯೋಚಿಸುತ್ತಿದ್ದೇವೆ. ಮುಂದಿನ ಹಂತದಲ್ಲಿ ನಾವು ಇದನ್ನು ಪರಿಗಣಿಸಬಹುದು” ಎಂದಿತು. ಅಲ್ಲದೆ, ಅರ್ಜಿದಾರರ ವಾದದ ಸ್ವರೂಪ ತಿಳಿಸುವಂತೆ ಸೂಚಿಸಿತು, ತಮ್ಮ ವಾದ ಮಂಡಿಸಲು ಯಾರಿಗೆಲ್ಲಾ ಎಷ್ಟು ಸಮಯ ಬೇಕು ಎಂಬುದನ್ನು ತಿಳಿಸುವಂತೆಯೂ ಹೇಳಿತು.

ಈ ಹಂತದಲ್ಲಿ ನಾವದಗಿ ಅವರು “ಅರ್ಜಿಗಳನ್ನು ಅಂತಿಮವಾಗಿ ವಿಚಾರಣೆ ನಡೆಸುವವರೆಗೆ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು. ಅದಕ್ಕೆ ಸಮೀಕ್ಷೆಯು ಅಕ್ಟೋಬರ್‌ 7 ರ ಒಳಗೆ ಮುಗಿಯಲಿದೆ ಎಂದು ಪೀಠಕ್ಕೆ ತಿಳಿಸಲಾಯಿತು.

ಈ ಹಂತದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಈ ಹಿಂದೆ ಸಮೀಕ್ಷೆ ಪ್ರಶ್ನಿಸಿದ್ದ ಅರ್ಜಿಗಳಲ್ಲಿಯೂ ನ್ಯಾಯಾಲಯವು ತಡೆ ನೀಡಿರಲಿಲ್ಲ” ಎಂದರು.

ಇದಕ್ಕೆ ಪೀಠವು “ಇಂದು ಅಥವಾ ನಾಳೆ ಅರ್ಜಿ ವಿಚಾರಣೆ ನಡೆಸಲಾಗದು. ದಸರಾ ರಜೆಯ ಬಳಿಕ ಅರ್ಜಿಗಳ ವಿಚಾರಣೆ ನಡೆಸಲಾಗುವುದು. ಹೀಗಾಗಿ, ಅಕ್ಟೋಬರ್‌ನಲ್ಲಿ ಅರ್ಜಿ ನಡೆಸುವವರೆಗೆ ಸಮೀಕ್ಷೆಯನ್ನು ನೀವು ಮುಂದೂಡಬೇಕು” ಎಂದು ಮೌಖಿಕವಾಗಿ ಹೇಳಿತು.

ಇದಕ್ಕೆ ಸಿಂಘ್ವಿ ಅವರು “ಸಮೀಕ್ಷೆಗೆ 420 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗುತ್ತಿದ್ದು, ಸಾವಿರಾರು ಜನರನ್ನು ಸಮೀಕ್ಷೆಗೆ ಬಳಕೆ ಮಾಡಲಾಗುತ್ತಿದೆ. ಸಮೀಕ್ಷೆಯ ಹಿಂದಿನ ದಿನ ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿದ್ದಾರೆ. ಆಗಸ್ಟ್‌ 13ರಂದು ಸರ್ಕಾರದ ಸಮೀಕ್ಷೆಯ ಕುರಿತು ಆದೇಶ ಮಾಡಿದೆ. ಈಗ ನಾವು ಸೆಪ್ಟೆಂಬರ್‌ನಲ್ಲಿದ್ದೇವೆ” ಎಂದರು.

“ಸಮೀಕ್ಷೆಯು ಕೇಂದ್ರ ಸರ್ಕಾರದ ಕೆಲಸ ಎಂಬುದು ಅರ್ಜಿದಾರರ ವಾದವಾಗಿದೆ. ಸಮೀಕ್ಷೆ ನಡೆಸಲಾಗುತ್ತಿದೆಯೇ ವಿನಾ ಗಣತಿಯಲ್ಲ. ದತ್ತಾಂಶ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ವ್ಯಾಪ್ತಿ ಇದೆ ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟು ಸಮೀಕ್ಷೆಗೆ ಅವಕಾಶ ಮಾಡಿಕೊಡಬೇಕು. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿಲು ಸಮೀಕ್ಷೆ ಮುಖ್ಯವಾಗಿದ್ದು, ಸಮೀಕ್ಷೆ ತಡೆಯುವುದೇಕೆ?” ಎಂದರು.

ಆಗ ಪೀಠವು “ಈಗ ಸಂಗ್ರಹಿಸಿರುವ ದತ್ತಾಂಶ ಏನಾಗಲಿದೆ” ಎಂದಿತು. ಇದಕ್ಕೆ ಸಿಂಘ್ವಿ ಅವರು “ಈ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ” ಎಂದರು.

ಈ ಹಂತದಲ್ಲಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ರಾಜ್ಯ ಸರ್ಕಾರ ಈಗ ಮಾಡುತ್ತಿರುವುದನ್ನು ಸಮೀಕ್ಷೆ ಎನ್ನಲಾಗುತ್ತಿದೆ. ಇದು ಗಣತಿಯಾಗಿದ್ದು, ಇದನ್ನು ರಾಜ್ಯ ಸರ್ಕಾರ ಮಾಡಲಾಗದು” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.