Bhavani Revanna and Karnataka HC 
ಸುದ್ದಿಗಳು

ಸಂತ್ರಸ್ತೆ ಅಪಹರಣ ಪ್ರಕರಣ: ಇಂದು ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಪ್ರಕಟಿಸಲಿರುವ ಹೈಕೋರ್ಟ್‌

Bar & Bench

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಕೆಲವೇ ನಿಮಿಷಗಳಲ್ಲಿ ಪ್ರಕಟಿಸಲಿದೆ.

ಶಾಸಕ ಎಚ್‌ ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿ, ಆದೇಶ ಕಾಯ್ದಿರಿಸಿತ್ತು.

ವಿಶೇಷ ತನಿಖಾ ದಳ (ಎಸ್‌ಐಟಿ) ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ಭವಾನಿ ತನಿಖೆಗೆ ಸಹಕರಿಸುತ್ತಿಲ್ಲ. ತನಿಖಾಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಹಾರಿಕೆ ಉತ್ತರ ನೀಡಿದ್ದಾರೆ. ಇಡೀ ಪ್ರಕರಣದ ಮಾಸ್ಟರ್‌ ಮೈಂಡ್‌ ಭವಾನಿಯಾಗಿದ್ದು, ಅಪಹರಣ ಪ್ರಕರಣದ ಎಲ್ಲಾ ಆರೋಪಿಗಳ ಜೊತೆಯೂ ಆಕೆ ಸಂಪರ್ಕದಲ್ಲಿದ್ದರು ಎಂಬುದನ್ನು ಆಕೆಯ ಕರೆ ದಾಖಲೆ ದೃಢಪಡಿಸಿದೆ” ಎಂದಿದ್ದರು.

“ಸಂತ್ರಸ್ತೆಯನ್ನು ಅಪಹರಿಸಿದ ಬೆನ್ನಿಗೇ ತನ್ನ ಮೊಬೈಲ್‌ನಿಂದ ಕರೆ ಮಾಡುವುದನ್ನು ನಿಲ್ಲಿಸಿರುವ ಭವಾನಿ ಅವರು ಬೇರೆ ಫೋನ್‌ ಬಳಕೆ ಮಾಡಲಾರಂಭಿಸಿದ್ದಾರೆ. ಇದಲ್ಲದೇ, ಏಳು ಮಂದಿ ಸಂತ್ರಸ್ತೆ ಮಹಿಳೆಯರು ಆಕೆಯ ಜಾಲದಲ್ಲಿದ್ದಾರೆ. ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲರೂ ಭವಾನಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧಿಗಳಾಗಿದ್ದು, ಎಲ್ಲರೂ ಇಡೀ ಪ್ರಕರಣದ ಪಿತೂರಿದಾರೆ ಭವಾನಿ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ, ಆಕೆಯನ್ನು ಬಂಧಿಸಿ ವಿಚಾರಣೆ ಒಳಪಡಿಸುವ ಅಗತ್ಯವಿದೆ” ಎಂದು ವಾದಿಸಿದ್ದರು.

“ಸರಣಿ ಅತ್ಯಾಚಾರಿಯಾದ ಆಕೆಯ ಪುತ್ರ ಇಂಥ ದುಷ್ಕೃತ್ಯ ನಡೆಸಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಆಕೆಯ ಕರ್ತವ್ಯವಲ್ಲವೇ? ಅವರದ್ದೇ ಮನೆಯಲ್ಲಿ ಇಂಥ ಕೃತ್ಯ ನಡೆದಿದ್ದರೆ ಸುಮ್ಮನಿರುತ್ತಿದ್ದರೇ? ಅಮಾಯಕ ಹೆಣ್ಣು ಮಕ್ಕಳು ಸಂಕಷ್ಟದಲ್ಲಿದ್ದಾರೆ. ಪುತ್ರ ಪ್ರಜ್ವಲ್‌ನನ್ನು ರಕ್ಷಿಸಲು ಸಂತ್ರಸ್ತೆಯನ್ನು ಅಪಹರಿಸುವ ಸಂಚನ್ನು ಭವಾನಿ ರೂಪಿಸಿದ್ದಾರೆ. ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡುವವರೆಗೂ ಆಕೆ ಎಸ್‌ಐಟಿ ಅಧಿಕಾರಿಗಳಿಂದ ತಲೆಮರೆಸಿಕೊಂಡಿದ್ದರು. ಈಗ ಮೊಬೈಲ್‌ ಫೋನ್‌ ಅನ್ನು ತನಿಖಾಧಿಕಾರಿಗಳಿಗೆ ನೀಡುತ್ತಿಲ್ಲ. ಒಟ್ಟಾರೆ ಇಡೀ ತನಿಖಾ ಪ್ರಕ್ರಿಯೆಯನ್ನು ದಾರಿತಪ್ಪಿಸುವ ಯತ್ನ ಮಾಡುವ ಮೂಲಕ ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ, ಆಕೆಯ ಬಂಧನ ಮಾಡಿ, ತನಿಖೆ ನಡೆಸುವುದು ತೀರ ಅಗತ್ಯ” ಎಂದು ಪ್ರತಿಪಾದಿಸಿದ್ದರು.

“ಭವಾನಿ ಸಾಮಾನ್ಯ ವ್ಯಕ್ತಿಯಲ್ಲ. ಮಾಜಿ ಪ್ರಧಾನಿಯ ಸೊಸೆ, ಮಾಜಿ ಸಚಿವ ಹಾಲಿ ಶಾಸಕ ರೇವಣ್ಣ ಅವರ ಪತ್ನಿ, ಪುತ್ರ ಸಂಸದರಾಗಿದ್ದವರು, ರಾಜಕೀಯವಾಗಿ ಬಲಾಢ್ಯ ಕುಟುಂಬದ ಹೆಣ್ಣು ಮಗಳು ಎಂಬುದನ್ನು ಮರೆಮಾಚಲಾಗದು. ಇಲ್ಲಿ ಸಂಕಷ್ಟದಲ್ಲಿರುವುದು ಸಾಮಾನ್ಯ ಹೆಣ್ಣು ಮಕ್ಕಳು ಎಂಬುದನ್ನು ನ್ಯಾಯಾಲಯ ಮನಗಾಣಬೇಕು” ಎಂದು ಒತ್ತಿ ಹೇಳಿದ್ದರು.

ಇದಕ್ಕೆ ಆಕ್ಷೇಪಿಸಿ ವಾದಿಸಿದ ಭವಾನಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಭವಾನಿ ಅವರನ್ನು ಕಸ್ಟಡಿಗೆ ಪಡೆದು ತನಿಖೆ ಏಕೆ ಮಾಡಬೇಕು ಎಂಬುದನ್ನು ಸರ್ಕಾರ ಹೇಳಬೇಕು? ಡಿಜಿಟಲ್‌ ದಾಖಲೆಯನ್ನು ತನಿಖಾಧಿಕಾರಿ ಸಂಗ್ರಹಿಸಿದ್ದಾರೆ. ತನಿಖಾಧಿಕಾರಿಯ ಮುಂದೆ ಹಾಜರಾದಾಗ ಆಕೆ ಬಳಸುತ್ತಿರುವ ಸಿಮ್‌ ಕಾರ್ಡ್‌ ಯಾರ ಹೆಸರಿನಲ್ಲಿ ಎಂದು ಹೇಳಿಲ್ಲ ಎಂದು ಎಸ್‌ಪಿಪಿ ಹೇಳಿದ್ದಾರೆ. ಮೂರು ದಿನ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿದ್ದಾರೆ. ಎಸ್‌ಐಟಿ ಸಂಗ್ರಹಿಸಿರುವ ಡಿಜಿಟಲ್‌ ದಾಖಲೆಯನ್ನು ಪೊಲೀಸರು ಆಕೆಯ ಮುಂದೆ ಇಡಬಹುದಿತ್ತು. ಭವಾನಿ ಯಾವ ಸಿಮ್‌ ಬಳಸುತ್ತಿದ್ದಾರೆ ಎಂಬುದನ್ನು ಸೇವೆ ಕಲ್ಪಿಸುವ ಕಂಪೆನಿ ಕೇಳಿದರೆ ಹೇಳುತ್ತದೆ. ಅದರಲ್ಲೇನಿದೆ” ಎಂದಿದ್ದರು.

“ಐದು ಲಕ್ಷ ಪೆನ್‌ಡ್ರೈವ್‌ಗಳನ್ನು ಹಾಸನದಲ್ಲಿ ಹಂಚಲಾಗಿದೆ ಎನ್ನಲಾಗಿದೆ. ಪೆನ್‌ಡ್ರೈವ್‌ ಹಂಚುವ ಮೂಲಕ ಅಮಾಯಕ ಹೆಣ್ಣು ಮಕ್ಕಳ ಮಾನ ಹರಾಜು ಹಾಕಿದವರನ್ನು ಬಿಟ್ಟು, ಭವಾನಿಯವರ ಹಿಂದೆ ಬೀಳಲಾಗಿದೆ. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 364(ಎ) ಅನ್ವಯಿಸುವ ಅಗತ್ಯವೇ ಇಲ್ಲ. ಅಂಥ ಯಾವುದೇ ಅಂಶಗಳು ದೂರಿನಲ್ಲಿ ಇಲ್ಲ. ಈ ದೇಶದಲ್ಲಿ ಆರೋಪಿಯನ್ನು ಬಂಧಿಸುವುದರೊಂದಿಗೆ ತನಿಖೆ ಆರಂಭವಾಗುತ್ತದೆ. ಆತನ ಬಿಡುಗಡೆಯೊಂದಿಗೆ ಪ್ರಕರಣ ಮುಕ್ತಾಯವಾಗುತ್ತದೆ” ಎಂದು ಮಾರ್ಮಿಕವಾಗಿ ನುಡಿದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದಿದ್ದರು.

ಒಂದು ಹಂತದಲ್ಲಿ ಪೀಠವು “ಎಷ್ಟೋ ಪ್ರಕರಣಗಳು ನಡೆದಿದ್ದರೂ ಪ್ರಜ್ವಲ್‌ ಪ್ರಕರಣದಲ್ಲಿ ರಾಜ್ಯ ಸರ್ಕಾರ ಇಷ್ಟು ಮುತುವರ್ಜಿ ವಹಿಸುತ್ತಿರುವುದು ಏಕೆ ಎಂಬ ಭಾವನೆ ಇದೆ” ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಪ್ರಶ್ನಿಸಿದ್ದರು. “ಭವಾನಿ ಅವರನ್ನು ಕಸ್ಟಡಿಗೆ ಪಡೆಯುವ ವಿಚಾರದಲ್ಲಿ ನ್ಯಾಯಾಲಯ ವಿರೋಧಿಸಲಾಗದು. ಇದು ತನಿಖಾಧಿಕಾರಿಯ ಅಧಿಕಾರವಾಗಿರುತ್ತದೆ” ಎಂದು ಪ್ರೊ. ರವಿವರ್ಮ ಕುಮಾರ್‌ ಹೇಳಿದ್ದಕ್ಕೆ ಕಿಡಿಕಾರಿದ್ದ ಪೀಠವು “ಹಾಗೆ ಮಾಡಿದರೆ ನಾಳೆ ಪೊಲೀಸರು ಯಾರನ್ನು ಬೇಕಾದರೂ ಬಂಧಿಸಬಹುದು. ಇದನ್ನು ಪೊಲೀಸ್‌ ರಾಜ್‌ ಮಾಡಲಾಗುತ್ತದೆಯೇ?” ಎಂದು ಪ್ರಶ್ನಿಸಿದ್ದರು.