“ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿ ರೂಪಾ ಅವರು ತನ್ನ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ” ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದನ್ನು ಆಧರಿಸಿ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ಹೂಡಿರುವ ಮಾನಹಾನಿ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಹಿನ್ನಡೆಯಾಗಿದೆ.
ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದ್ದ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶನಿವಾರ ವಜಾಗೊಳಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದ್ದು, ಹಾಲಿ ಪ್ರಕರಣದಲ್ಲಿ ರೂಪಾ ಮೇಲುಗೈ ಸಾಧಿಸಿದಂತಾಗಿದೆ.
ರೂಪಾ ಹೂಡಿರುವ ಮಾನಹಾನಿ ಪ್ರಕರಣದ ಸಂಬಂಧ ಜನವರಿ 13ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.
ಪ್ರಕರಣದ ಹಿನ್ನೆಲೆ: ರೋಹಿಣಿ ಸಿಂಧೂರಿಯವರು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿ ರೂಪಾ ಅವರು ತನ್ನ ವಿರುದ್ಧ ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವವರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರೂಪಾಗೆ ಇದೊಂದು ಅಭ್ಯಾಸವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಹುದ್ದೆಗಳಲ್ಲಿ ಇದೇ ರೀತಿಯ ಆಧಾರರಹಿತ ಆರೋಪ ಮಾಡುವ ಮೂಲಕ ಮಾಧ್ಯಮಗಳ ಗಮನ ಸೆಳೆಯಲು ಹಾಗೂ ತಾನು ದ್ವೇಷಿಸುವ ವ್ಯಕ್ತಿಗಳ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಕೀಳುಮಟ್ಟದ ಪ್ರವೃತ್ತಿಯನ್ನು ರೂಪಾ ಪ್ರದರ್ಶಿಸುತ್ತಿದ್ದಾರೆ. ಯಾವಾಗಲೂ ಸುದ್ದಿಯಲ್ಲಿರಬೇಕು ಎಂದು ಬಯಸುವ ರೂಪಾ, ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಅದಕ್ಕೆ ಬೇಕಾದ ಪೋಸ್ಟ್ ಹಾಕುವ ಮೂಲಕ ಸುದ್ದಿಯ ಕೇಂದ್ರಬಿಂದುವಾಗಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಮುಂದುವರಿದು, “ಜವಾಬ್ದಾರಿಯುತ ಸ್ಥಾನದಲ್ಲಿರುವ ರೂಪಾ ಒಳ್ಳೆಯ ಕೆಲಸಗಳತ್ತ ಗಮನಹರಿಸುವುದನ್ನು ಬಿಟ್ಟು ಅಥವಾ ಇನ್ನೊಬ್ಬರನ್ನ ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವುದೇ ಅವರ ಪ್ರಾಥಮಿಕ ಕೆಲಸ ಎಂದು ತೋರುತ್ತದೆ. ಅದರಲ್ಲೂ ತನ್ನ ವಿರುದ್ಧ ಯಾವುದೋ ವೈಯಕ್ತಿಕ ಹಗೆ ಇಟ್ಟುಕೊಂಡು ಸುಳ್ಳು, ವೈಯಕ್ತಿಕ ನಿಂದನೆ ಅಭಿಯಾನ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಹಾಗೂ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್ ಶಾಟ್‌ಗಳ ಮೂಲಕ ಸಂಗ್ರಹಿಸಿರುವ ಫೋಟೊಗಳನ್ನು ತನ್ನ ತೇಜೋವಧೆ ಮಾಡಲು ರೂಪಾ ಬಳಸಿದ್ದಾರೆ. ಈ ಫೋಟೊಗಳನ್ನು ಕೆಲವು ಅಧಿಕಾರಿಗಳಿಗೆ ಕಳುಹಿಸಿದ್ದೇನೆ ಎನ್ನುವ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ, ಆ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಬೇಕು ಎಂದು ರೂಪಾ ಅವರನ್ನು ಆಗ್ರಹಿಸುತ್ತೇನೆ ಎಂದು ವಿವರಿಸಿದ್ದರು.
ಸೇವಾ ನಡತೆ ನಿಯಮಗಳ ಉಲ್ಲಂಘನೆಗಾಗಿ ರೂಪಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಿದ್ದೇನೆ. ಅಲ್ಲದೇ, ಐಪಿಸಿ ವಿವಿಧ ಸೆಕ್ಷನ್‌ಗಳ ಅನ್ವಯ ರೂಪಾ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದರು.
ಇದನ್ನು ಆಧರಿಸಿ ರೂಪಾ ಅವರು ಮಾನಹಾನಿ ಪ್ರಕರಣ ಹೂಡಿದ್ದು, ಸ್ವಯಂ ಹೇಳಿಕೆಯನ್ನೂ ದಾಖಲಿಸಿದ್ದರು. ಇದರ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಂಜ್ಞೇ ಪರಿಗಣಿಸಿತ್ತು.