Ranya Rao and Karnataka High Court 
ಸುದ್ದಿಗಳು

ಚಿನ್ನ ಕಳ್ಳ ಸಾಗಣೆ ಪ್ರಕರಣ: ಕಾಫಿಪೋಸಾ ಅಡಿ ನಟಿ ರನ್ಯಾ ರಾವ್ ಬಂಧನ‌ ಖಾತರಿಪಡಿಸಿದ ಹೈಕೋರ್ಟ್‌ನ ಸಲಹಾ ಮಂಡಳಿ

ರೋಹಿಣಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ್‌ ಜವಳಿ ಅವರು “ಹೈಕೋರ್ಟ್‌ನ ಸಲಹಾ ಮಂಡಳಿಯು ಕಾಫಿಪೋಸಾ ಅಡಿ ರನ್ಯಾ ವಶಕ್ಕೆ ಪಡೆದಿರುವುದನ್ನು ಖಾತರಿಪಡಿಸಿದೆ. ಹೀಗಾಗಿ, ಮೆರಿಟ್‌ ಮೇಲೆ ಅರ್ಜಿ ವಿಚಾರಣೆ ನಡೆಸಬೇಕು” ಎಂದು ಕೋರಿದರು.

Bar & Bench

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಫಿಪೋಸಾ) ಅಡಿ ಕಂದಾಯ ಗುಪ್ತಚರ ನಿರ್ದೇಶನಾಲಯವು ವಶಕ್ಕೆ ಪಡೆದಿರುವ ಆದೇಶವನ್ನು ಹೈಕೋರ್ಟ್‌ನ ಸಲಹಾ ಮಂಡಳಿಯು ಖಾತರಿಪಡಿಸಿದೆ. ಇದರಿಂದ ರನ್ಯಾ ಬಿಡುಗಡೆಯ ಹಾದಿ ಮತ್ತಷ್ಟು ದುರ್ಗಮವಾಗಿದೆ.

ಕಾಫಿಪೋಸಾ ಕಾಯಿದೆ ಅಡಿ ರನ್ಯಾ ಬಂಧನ ಪ್ರಶ್ನಿಸಿ ಆಕೆಯ ಮಲತಾಯಿ ಎಚ್‌ ಪಿ ರೋಹಿಣಿ ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಪಿ ಮನ್ಮಧ ರಾವ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರೋಹಿಣಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ್‌ ಜವಳಿ ಅವರು “ಹೈಕೋರ್ಟ್‌ನ ಸಲಹಾ ಮಂಡಳಿಯು ಕಾಫಿಪೋಸಾ ಅಡಿ ರನ್ಯಾ ವಶಕ್ಕೆ ಪಡೆದಿರುವುದನ್ನು ಖಾತರಿಪಡಿಸಿದೆ. ಹೀಗಾಗಿ, ಮೆರಿಟ್‌ ಮೇಲೆ ಅರ್ಜಿ ವಿಚಾರಣೆ ನಡೆಸಬೇಕು” ಎಂದರು.

ಆಗ ಡಿಆರ್‌ಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಅರ್ಜಿದಾರರು ಈಗಷ್ಟೇ ಮೆಮೊ ನೀಡಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದರು.

ಉಭಯ ಪಕ್ಷಕಾರರ ವಾದವನ್ನು ಆದೇಶದಲ್ಲಿ ದಾಖಲಿಸಿದ ಪೀಠವು ವಿಚಾರಣೆಯನ್ನು ಆಗಸ್ಟ್‌ 28ಕ್ಕೆ ಮುಂದೂಡಿತು.

ನಿಗದಿತ ಸಮಯದಲ್ಲಿ ಡಿಆರ್‌ಐ ಆರೋಪ ಪಟ್ಟಿ ಸಲ್ಲಿಸದೇ ಇರುವುದರಿಂದ ಕಳೆದ ತಿಂಗಳು ರನ್ಯಾಗೆ ವಿಚಾರಣಾಧೀನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಆದರೆ, ಕಾಫಿಪೋಸಾ ಅಡಿ ಬಂಧನವಾಗಿರುವುದರಿಂದ ಆಕೆ ಬಿಡುಗಡೆಯಾಗಿಲ್ಲ.

ಪ್ರಕರಣದ ಹಿನ್ನೆಲೆ: ಮಾರ್ಚ್‌ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾರನ್ನು ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್‌ ಬ್ಯಾಗ್)‌ ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು.

ತಪಾಸಣೆಯ ವೇಳೆ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗ, ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್‌ ಅಡ್ಹೆಸಿವ್ ಬ್ಯಾಂಡೇಜ್‌ ಬಳಸಿ ಅಂಟಿಸಲಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್‌ ಕಾಯಿದೆ 1962ರ ಸೆಕ್ಷನ್‌ 135 (1)(a) ಮತ್ತು 135(1)(b) ಅಡಿ ಪ್ರಕರಣ ದಾಖಲಿಸಲಾಗಿದೆ.