ಕಾಫಿಪೋಸಾ: ಹೈಕೋರ್ಟ್‌ನ ಸಲಹಾ ಮಂಡಳಿ ಪರಿಗಣನೆಯಲ್ಲಿ ರನ್ಯಾ ಬಂಧನ

ಹೈಕೋರ್ಟ್‌ಗೆ ಬರುವುದಕ್ಕೂ ಮುನ್ನ ಸಂವಿಧಾನ ಮತ್ತು ಶಾಸನಬದ್ಧವಾಗಿ ಲಭ್ಯವಾಗಿರುವ ಎಲ್ಲಾ ಪರಿಹಾರಗಳನ್ನು ರನ್ಯಾ ಬಳಕೆ ಮಾಡಿಲ್ಲ ಎಂದು ಆಕ್ಷೇಪಿಸಿರುವ ಡಿಆರ್‌ಐ.
Ranya Rao and Karnataka High Court
Ranya Rao and Karnataka High Court
Published on

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಹರ್ಷವರ್ಧಿನಿ ರನ್ಯಾ ಅಲಿಯಾಸ್‌ ರನ್ಯಾ ರಾವ್‌ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆ (ಕಾಫಿಪೋಸಾ) ಅಡಿ ಕಂದಾಯ ಗುಪ್ತಚರ ನಿರ್ದೇಶನಾಲಯವು ವಶಕ್ಕೆ ಪಡೆದಿರುವ ಆದೇಶವನ್ನು ಹೈಕೋರ್ಟ್‌ನ ಸಲಹಾ ಮಂಡಳಿಯು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಕೇಂದ್ರ ಸರ್ಕಾರವು ಆಕ್ಷೇಪಣೆಯಲ್ಲಿ ತಿಳಿಸಿದೆ.

ಕಾಫಿಪೋಸಾ ಕಾಯಿದೆ ಅಡಿ ರನ್ಯಾ ಬಂಧನ ಪ್ರಶ್ನಿಸಿ ಆಕೆಯ ಮಲತಾಯಿ ಎಚ್‌ ಪಿ ರೋಹಿಣಿ ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಮನ್ಮಧ ರಾವ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಮತ್ತು ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು ಆಕ್ಷೇಪಣೆ ಸಲ್ಲಿಸಿರುವುದಾಗಿ ತಿಳಿಸಿದ್ದರಿಂದ ಪೀಠವು ವಿಚಾರಣೆಯನ್ನು ಜೂನ್‌ 18ಕ್ಕೆ ಮುಂದೂಡಿತು.

ಆಕ್ಷೇಪಣೆಯಲ್ಲಿ ರನ್ಯಾ ಪ್ರಕರಣವನ್ನು ಮೇ 21ರಂದು ಕಾಫಿಪೋಸಾಕ್ಕೆ ಸಂಬಂಧಿಸಿದ ಹೈಕೋರ್ಟ್‌ನ ಸಲಹಾ ಮಂಡಳಿ ಪರಿಗಣನೆಗೆ ಕಳುಹಿಸಿಕೊಡಲಾಗಿದೆ. ಕಾಫಿಪೋಸಾ ಸಲಹಾ ಮಂಡಳಿಯು ಇನ್ನಷ್ಟೇ ರನ್ಯಾ ಪ್ರಕರಣದ ವಿಚಾರಣೆ ನಡೆಸಬೇಕಿದೆ. ಹೈಕೋರ್ಟ್‌ಗೆ ಬರುವುದಕ್ಕೂ ಮುನ್ನ ಸಂವಿಧಾನ ಮತ್ತು ಶಾಸನಬದ್ಧವಾಗಿ ಲಭ್ಯವಾಗಿರುವ ಎಲ್ಲಾ ಪರಿಹಾರಗಳನ್ನು ರನ್ಯಾ ಬಳಕೆ ಮಾಡಿಲ್ಲ ಎಂದು ಆಕ್ಷೇಪಿಸಲಾಗಿದೆ.

ಕಂದಾಯ ಗುಪ್ತಚರ ಇಲಾಖೆಯ ಬೆಂಗಳೂರು ವಲಯ ಘಟಕ ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಕಾಫಿಪೋಸಾ ಅಡಿ ರನ್ಯಾರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಅರ್ಜಿಯಲ್ಲಿ ಬೆಂಗಳೂರು ವಲಯ ಘಟಕವನ್ನು ಪಕ್ಷಕಾರರನ್ನಾಗಿ ಮಾಡಲಾಗಿಲ್ಲ ಎಂದು ಹೇಳಲಾಗಿದೆ.

ರನ್ಯಾ ಅವರಿಗೆ ವಶಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ಆಧಾರಗಳನ್ನು ಪೆನ್‌ಡ್ರೈವ್‌ ಮತ್ತು ಸಂಬಂಧಿತ ದಾಖಲೆಗಳ ಮೂಲಕ ಒದಗಿಸಲಾಗಿದೆ. ಪೆನ್‌ ಡ್ರೈವ್‌ನಲ್ಲಿ ಅಂಶಗಳೆಲ್ಲವನ್ನೂ ರನ್ಯಾಗೆ ತೋರಿಸಲಾಗಿದೆ. ಆಕೆಯ ಸೂಚನೆಯಂತೆ ಅವರ ವಕೀಲ ಶಾಶ್ವತ್‌ ಎಸ್‌. ಪ್ರಕಾಶ್‌ ಅವರಿಗೆ ಪೆನ್‌ಡ್ರೈವ್‌ ತಲುಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಆನಂತರ ರನ್ಯಾ ಮಲತಾಯಿ ರೋಹಿಣಿ ಅವರಿಗೂ ಪೆನ್‌ಡ್ರೈವ್‌ ತಲುಪಿಸಲು ವಿಫಲ ಪ್ರಯತ್ನ ಮಾಡಲಾಗಿದೆ. ಜೈಲಿನಲ್ಲಿರುವವರಿಗೆ ಯಾವುದೇ ವಿದ್ಯುನ್ಮಾನ ಸಾಧನಗಳನ್ನು ನೀಡಲು ಅವಕಾಶ ಇಲ್ಲದಿರುವುದರಿಂದ ಅದನ್ನು ರನ್ಯಾಗೆ ನೀಡಲಾಗಿಲ್ಲ ವಿವರಿಸಲಾಗಿದೆ.

ಭವಿಷ್ಯದಲ್ಲಿ ರನ್ಯಾ ಮತ್ತೆ ಚಿನ್ನ ಕಳ್ಳ ಸಾಗಣೆ ಪ್ರಕ್ರಿಯೆಯಲ್ಲಿ ತೊಡಗಬಾರದು ಎಂಬ ಉದ್ದೇಶದಿಂದ ಕಾಫಿಪೋಸಾ ಕಾಯಿದೆ ಸೆಕ್ಷನ್‌ 3(1)ರ ಅಡಿ ಬಂಧನ ಆದೇಶ ಮಾಡಲಾಗಿದೆ. ರನ್ಯಾ ಅವರು ವಿದೇಶಕ್ಕೆ ಪ್ರಯಾಣ ಮಾಡಿರುವ ಸಂಬಂಧಿತ ದಾಖಲೆಗಳನ್ನು ಸಲಹಾ ಮಂಡಳಿಯ ಮುಂದೆ ಇಡಲಾಗಿದೆ. ಅಲ್ಲದೇ, ಆಕೆಯನ್ನು ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಲ್ಲಿ ಬಂಧಿಸಲ್ಪಟ್ಟ ಸಂದರ್ಭದ ಸಿಸಿಟಿವಿ ವಿಡಿಯೋವನ್ನು ಸಂಗ್ರಹಿಸುವಂತೆ ಹೈಕೋರ್ಟ್‌ನ ಸಮನ್ವಯ ಪೀಠದ ಆದೇಶವನ್ನು ಪಾಲಿಸಲಾಗಿದೆ. ಅಲ್ಲದೇ, ಕಾಫಿಪೋಸಾ ಕಾಯಿದೆ ಅಡಿಯ ಪ್ರಕ್ರಿಯೆ ಪಾಲಿಸಲಾಗಿದೆ. ಹೀಗಾಗಿ, ಬಂಧನ ಆದೇಶವನ್ನು ಎತ್ತಿ ಹಿಡಿದು, ರೋಹಿಣಿ ಅವರು ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಡಿಆರ್‌ಐ ಮನವಿ ಮಾಡಿದೆ.

ನಿಗದಿತ ಕಾಲಾವಧಿಯಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಡಿಆರ್‌ಐ ಆರೋಪ ಪಟ್ಟಿ ಸಲ್ಲಿಕೆ ಮಾಡದಿರುವುದರಿಂದ ವಿಚಾರಣಾಧೀನ ನ್ಯಾಯಾಲಯವು ಕಳೆದ ತಿಂಗಳು ರನ್ಯಾಗೆ ಜಾಮೀನು ಮಂಜೂರು ಮಾಡಿದೆ. ಆದರೆ, ಆಕೆಯನ್ನು ಕಾಫಿಪೋಸಾ ಅಡಿ ಬಂಧಿಸಿರುವುದರಿಂದ ಬಿಡುಗಡೆಯಾಗಿಲ್ಲ.

Kannada Bar & Bench
kannada.barandbench.com