IPS officer M Chandrashekar , H D Kumaraswamy & Karnataka HC 
ಸುದ್ದಿಗಳು

[ಐಪಿಎಸ್‌ ಅಧಿಕಾರಿಗೆ ಬೆದರಿಕೆ] ಮಧ್ಯಸ್ಥಿಕೆದಾರರ ನೇಮಕಕ್ಕೆ ಒಪ್ಪಿಗೆ ಇದೆ: ಹೈಕೋರ್ಟ್‌ಗೆ ಎಚ್‌ಡಿಕೆ ವಿವರಣೆ

“ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವುದಕ್ಕೆ ಕುಮಾರಸ್ವಾಮಿ ಒಪ್ಪಿದ್ದಾರೆ. ಆದರೆ, ಮಧ್ಯಸ್ಥಿಕೆದಾರರ ಮುಂದೆ ಚಂದ್ರಶೇಖರ್‌ ಅವರ ಎದುರು ಬದುರು ಕೂರಲು ಸಿದ್ಧರಿಲ್ಲ. ಮಧ್ಯಸ್ಥಿಕೆದಾರರು ಇಬ್ಬರ ಅಭಿಪ್ರಾಯ ಪಡೆಯಬಹುದು” ಎಂದ ಪಾಷಾ.

Bar & Bench

ಕರ್ನಾಟಕ ಲೋಕಾಯುಕ್ತ ವಿಶೇಷ ಪೊಲೀಸ್‌ ತನಿಖಾ ದಳದ ಮುಖ್ಯಸ್ಥ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸಲು ಸಮ್ಮತಿ ಇದೆ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದರು.

ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣ ರದ್ದತಿ ಕೋರಿ ಎಚ್‌ ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಹಾಗೂ ಜೆಡಿಎಸ್‌ ಮುಖಂಡ ಸುರೇಶ್‌ ಬಾಬು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕುಮಾರಸ್ವಾಮಿ ಪರವಾಗಿ ಹಾಜರಾದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಪ್ರಕರಣದಲ್ಲಿ ಮಧ್ಯಸ್ಥಿಕೆದಾರರನ್ನು ನೇಮಿಸುವುದಕ್ಕೆ ಕುಮಾರಸ್ವಾಮಿ ಒಪ್ಪಿದ್ದಾರೆ. ಆದರೆ, ಮಧ್ಯಸ್ಥಿಕೆದಾರರ ಮುಂದೆ ಚಂದ್ರಶೇಖರ್‌ ಅವರ ಎದುರು ಬದುರು ಕೂರಲು ಸಿದ್ಧರಿಲ್ಲ. ಮಧ್ಯಸ್ಥಿಕೆದಾರರು ಇಬ್ಬರ ಅಭಿಪ್ರಾಯ ಪಡೆಯಬಹುದು” ಎಂದರು.

ಐಪಿಎಸ್‌ ಚಂದ್ರಶೇಖರ್‌ ಪರ ವಕೀಲರು “ಕುಮಾರಸ್ವಾಮಿ ಪ್ರಭಾವಿಯಾಗಿದ್ದಾರೆ. ಚಂದ್ರಶೇಖರ್‌ ಅಧಿಕಾರಿಯಷ್ಟೆ. ನ್ಯಾಯಾಲಯವು ನಮ್ಮ ಆತಂಕವನ್ನು ಪರಿಗಣಿಸಬೇಕು” ಎಂದರು.

ಆಗ ಪೀಠವು “ಮಧ್ಯಸ್ಥಿಕೆದಾರರು ಯಾರಿರಬೇಕು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಇಬ್ಬರಿಗೂ ಒಪ್ಪಿಗೆಯಾಗುವ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಮಧ್ಯಸ್ಥಿಕೆದಾರರನ್ನು ನೇಮಿಸುವ ಕೆಲಸವನ್ನು ನ್ಯಾಯಾಲಯಕ್ಕೆ ಬಿಡಿ. ಅಧಿಕಾರಿ ಚಂದ್ರಶೇಖರ್‌ ಅವರ ಆತಂಕದ ಬಗ್ಗೆ ಅರಿವಿದೆ” ಎಂದಿತು.

ಒಂದು ಹಂತದಲ್ಲಿ ಪೀಠವು ಲಘು ದಾಟಿಯಲ್ಲಿ “ವಕೀಲರ ಬಳಿಗೆ ಹೋಗುವುದಕ್ಕಿಂತ ಮಧ್ಯಸ್ಥಿಕೆದಾರರ ಬಳಿ ಹೋಗುವುದು ಹೆಚ್ಚು ಸೂಕ್ತ. ಮಧ್ಯಸ್ಥಿಕೆದಾರರ ನಡುವಿನ ಸಂಧಾನವೂ ವಿಫಲವಾದರೆ ನ್ಯಾಯಾಲಯ ಇದ್ದೇ ಇದೆ” ಎಂದಿತು. ಅಲ್ಲದೇ, ದೂರುದಾರ ಚಂದ್ರಶೇಖರ್‌ ಅವರ ವಕೀಲರ ಕೋರಿಕೆಯಂತೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರಿಗೆ ಚಂದ್ರಶೇಖರ್‌ ಜೊತೆ ಸಮಾಲೋಚಿಸುವಂತೆ ಸೂಚಿಸಿ, ವಿಚಾರಣೆಯನ್ನು ಏಪ್ರಿಲ್‌ 2ಕ್ಕೆ ಮುಂದೂಡಿತು.

ಹಿಂದಿನ ವಿಚಾರಣೆಯಲ್ಲಿ ಪೀಠವು ಸ್ವ-ಪ್ರತಿಷ್ಠೆ ಬಿಟ್ಟು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಉಭಯ ಪಕ್ಷಕಾರರಿಗೆ ಸೂಚಿಸಿತ್ತು. ಆನಂತರ ಮಧ್ಯಸ್ಥಿಕೆದಾರರ ಉಪಸ್ಥಿತಿಯಲ್ಲಿ ಪ್ರಕರಣಕ್ಕೆ ಇತಿಶ್ರೀ ಹಾಡುವ ಇಂಗಿತವನ್ನು ನ್ಯಾಯಾಲಯ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.