

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಎಂ ಚಂದ್ರಶೇಖರ್ ಅವರ ನಡುವಿನ ಪ್ರಕರಣ ಇತ್ಯರ್ಥಪಡಿಸಲು ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸುವ ಇಂಗಿತವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವ್ಯಕ್ತಪಡಿಸಿದೆ.
ಕರ್ನಾಟಕ ಲೋಕಾಯುಕ್ತ ವಿಶೇಷ ಪೊಲೀಸ್ ತನಿಖಾ ದಳದ ಮುಖ್ಯಸ್ಥ ಎಂ ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಸಂಬಂಧ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು.
“ಉಭಯ ಪಕ್ಷಕಾರರು ವೃತ್ತಿಪರ ಮಧ್ಯಸ್ಥಿಕೆದಾರರನ್ನು ನೇಮಿಸುವ ಸಲಹೆಯನ್ನು ಪರಿಗಣಿಸಬೇಕು. ಮಧ್ಯಸ್ಥಿಕೆದಾರರನ್ನು ನೇಮಿಸಲು ಉಭಯ ಪಕ್ಷಕಾರರು ಒಪ್ಪಿದರೆ ಯಾರು ಮಧ್ಯಸ್ಥಿಕೆದಾರರಾಗಬೇಕು ಎಂಬುದನ್ನು ಮುಚ್ಚಿದ ಲಕೋಟೆಯಲ್ಲಿ ಸಲಹೆ ನೀಡಿ, ಸಲ್ಲಿಸಬಹುದು. ಉಭಯ ಪಕ್ಷಕಾರರು ನಿರ್ಧರಿಸಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ” ಎಂದು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ನ್ಯಾಯಾಲಯವು “ಉಭಯ ಪಕ್ಷಕಾರರು ಒಪ್ಪಿದರೆ ಮಧ್ಯಸ್ಥಿಕೆದಾರರನ್ನು ನೇಮಿಸಲಾಗುವುದು. ಉಭಯ ಪಕ್ಷಕಾರರು ಆನ್‌ಲೈನ್ ಅಥವಾ ಭೌತಿಕವಾಗಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಹಾಜರಾಗಬಹುದು. ಇಬ್ಬರಿಗೂ ಒಪ್ಪಿತವಾದ ವ್ಯಕ್ತಿ ಮಧ್ಯಸ್ಥಿಕೆದಾರರಾಗಬೇಕು. ಇಲ್ಲವಾದಲ್ಲಿ ಪ್ರತ್ಯೇಕವಾಗಿ ಇಬ್ಬರ ಅಭಿಪ್ರಾಯ ಪಡೆದು, ಈ ಪ್ರಕರಣವನ್ನು ಇತ್ಯರ್ಥಪಡಿಸುವುದಕ್ಕೆ ಮುಂದಾಗುವ ವ್ಯವಸ್ಥೆ ನೋಡಬೇಕಿದೆ. ಇಬ್ಬರಿಗೂ ಅಹವಾಲುಗಳಿರುವುದರಿಂದ ಸಾಧ್ಯತೆಗಳನ್ನು ಹುಡುಕುವ ಮೂರನೇ ವ್ಯಕ್ತಿ ಇರಬೇಕು. ಮಧ್ಯಸ್ಥಿಕೆದಾರರು ಇಬ್ಬರ ಜೊತೆ ಚರ್ಚಿಸಿ, ಸಲಹೆ ನೀಡಲಿ. ಆನಂತರ ನಿರ್ಧರಿಸೋಣ” ಎಂದಿತು.
ಮುಂದುವರಿದು, “ಯಾರು ಮಧ್ಯಸ್ಥಿಕೆದಾರರಾಗಬೇಕು ಎಂಬುದಕ್ಕೆ ಸಲಹೆಗಳಿದ್ದರೆ ನೀಡಿ, ನ್ಯಾಯಾಲಯವು ಈ ನಿಟ್ಟಿನಲ್ಲಿ ಯೋಚಿಸಲಿದೆ. ತರಬೇತಿ ಹೊಂದಿದ ಮಧ್ಯಸ್ಥಿಕೆದಾರರನ್ನು ನೇಮಿಸಿ, ಸಮಸ್ಯೆಯನ್ನು ಬಗೆಹರಿಸೋಣ. ಏನೂ ಆಗಲಿಲ್ಲ ಎಂದರೆ ಆಮೇಲೆ ನ್ಯಾಯಾಲಯ ನಿರ್ಧಾರ ಮಾಡಲಿದೆ” ಎಂದಿತು.
ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು “ಚಂದ್ರಶೇಖರ್‌ಗೆ ಬೆದರಿಕೆ ಹಾಕಿಲ್ಲ ಅಥವಾ ಅವರ ವಿರುದ್ಧ ಯಾವುದೇ ಪದ ಬಳಕೆ ಮಾಡಿಲ್ಲ. ಆದರೆ, ಕುಮಾರಸ್ವಾಮಿ ಅವರ ವಿರುದ್ಧ ಹಲವು ಮಾನಹಾನಿ ಪದಗಳನ್ನು ಚಂದ್ರಶೇಖರ್ ಬಳಕೆ ಮಾಡಿದ್ದಾರೆ. ಕುಮಾರಸ್ವಾಮಿ ಅವರು ಯಾವ ರೀತಿಯಲ್ಲೂ ಚಂದ್ರಶೇಖರ್ ಜೊತೆ ಮಾತನಾಡಿಲ್ಲ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಯಾವುದೇ ಕುಟುಂಬ ಅಥವಾ ವ್ಯಕ್ತಿಗೆ ಬೆದರಿಕೆ ಹಾಕಿಲ್ಲ. ಅಫಿಡವಿಟ್ ಸಲ್ಲಿಸುವಂತೆ ಕುಮಾರಸ್ವಾಮಿಗೆ ಹೇಳಿರುವುದು ಅನಗತ್ಯ. ದೂರುದಾರರು ಹಾಗೆ ಒತ್ತಾಯ ಮಾಡಲಾಗದು. ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಬೇಕು ಎಂದು ಅವರು ಹೇಳಲಾಗದು. ಕುಮಾರಸ್ವಾಮಿ ಕ್ಷಮೆ ಕೋರುವುದಿಲ್ಲ ಅಥವಾ ಅಫಿಡವಿಟ್ ಸಲ್ಲಿಸುವುದಿಲ್ಲ” ಎಂದರು.
ಚಂದ್ರಶೇಖರ್ ಪರ ವಕೀಲರು “ಚಂದ್ರಶೇಖರ್ ಅವರು ಸಂತ್ರಸ್ತರಾಗಿದ್ದಾರೆ, ನ್ಯಾಯಾಲಯದ ಮುಂದೆ ಅಫಿಡವಿಟ್ ಹಾಕಿ ಎಂದು ಹೇಳುವುದರಲ್ಲಿ ತಪ್ಪೇನಿದೆ. ಮಧ್ಯಸ್ಥಿಕೆದಾರರ ನೇಮಕಾತಿ ಕುರಿತು ಸಲಹೆ ಪಡೆಯಲಾಗುವುದು” ಎಂದರು.