IPS officer M Chandrashekar , H D Kumaraswamy & Karnataka HC 
ಸುದ್ದಿಗಳು

ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಪ್ರಕರಣದ ತನಿಖಾ ದಾಖಲೆಗಳು ತಮ್ಮ ಬಳಿ ಇವೆ ಎಂದು ಎಚ್‌ಡಿಕೆ ಹೇಳಿಲ್ಲ: ಪಾಷಾ ಸಮರ್ಥನೆ

“ಯಾವ ದಾಖಲೆ ಕುಮಾರಸ್ವಾಮಿಗೆ ಸಿಗಬಾರದು ಎಂದು ಸುಪ್ರೀಂ ಕೋರ್ಟ್‌ ನಿರ್ಬಂಧಿಸಿದೆಯೋ ಅದನ್ನು ಉಲ್ಲಂಘಿಸಿ, ಆ ದಾಖಲೆ ತೋರಿಸಿ ಕುಮಾರಸ್ವಾಮಿ ಅವರು ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ್ದಾರೆ” ಎಂದು ವಾದಿಸಿದ ಎಎಸ್‌ಪಿಪಿ ಬಿ ಎನ್‌ ಜಗದೀಶ್‌.

Bar & Bench

ಆಂಧ್ರಪ್ರದೇಶ ಮೂಲದ ಜಂತಕಲ್‌ ಮೈನಿಂಗ್‌ ಕಂಪನಿಯ ಸಹವರ್ತಿ ಸಂಸ್ಥೆಯಾಗಿರುವ ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಪ್ರಕರಣದಲ್ಲಿ ತಮಗೆ ನೀಡಲಾಗಿರುವ ದಾಖಲೆಗಳನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆಯೇ ಹೊರತು ತನಿಖಾ ದಾಖಲೆಗಳನ್ನಲ್ಲ ಎಂದು ಕುಮಾರಸ್ವಾಮಿಯವರ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಮಂಗಳವಾರ ಸಮರ್ಥಿಸಿಕೊಂಡರು.

ಕರ್ನಾಟಕ ಲೋಕಾಯುಕ್ತ ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ಪರವಾಗಿ ಮಾಡಿರುವ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಕೋರಿ ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿರುವ ಎರಡು ಮಧ್ಯಂತರ ಅರ್ಜಿಗಳ ಕುರಿತಾದ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠ ನಡೆಸಿತು.

Justice Pradeep Singh Yerur

ಲೋಕಾಯುಕ್ತ ಎಸ್‌ಐಟಿ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ಎರಡೂ ಮಧ್ಯಂತರ ಅರ್ಜಿಗಳಿಗೆ ಕುಮಾರಸ್ವಾಮಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ಸತ್ರ ನ್ಯಾಯಾಲಯದಲ್ಲಿ ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ರದ್ದತಿ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಹಾಲಿ ಪ್ರಕರಣದಲ್ಲಿ (ಬೆದರಿಕೆ ಪ್ರಕರಣ) ಹೈಕೋರ್ಟ್‌ ಕುಮಾರಸ್ವಾಮಿ ಅವರ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಮಾಡಿರುವ ಆದೇಶವು ಆ ಪ್ರಕರಣಕ್ಕೆ (ಸಾಯಿ ಮಿನರಲ್ಸ್‌) ಅಡ್ಡಿಯಾಗಿ ಪರಿಣಮಿಸಿದೆ. ಹೀಗಾಗಿ, ಹಾಲಿ ಪ್ರಕರಣದ ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಮಾಡಬೇಕು” ಎಂದು ಕೋರಿದರು.

ಆಗ ಪೀಠವು “ಕುಮಾರಸ್ವಾಮಿ ವಿರುದ್ಧದ ಬೇರೊಂದು ಪ್ರಕರಣದಲ್ಲಿ ಮುಂದುವರಿಯಲು ನಿಮ್ಮನ್ನು ತಡೆಯುತ್ತಿರುವುದು ಏನು? 10 ವರ್ಷದ ನಂತರ ಏನು ಪ್ರಕ್ರಿಯೆ ನಡೆಸುತ್ತಿದ್ದೀರಿ? ದಾಖಲೆಗಳನ್ನು ಪರಿಶೀಲಿಸುತ್ತೇನೆ. ಸೋಮವಾರ ವಿಚಾರಣೆ ನಡೆಸೋಣ” ಎಂದಿತು.

ಕುಮಾರಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು ಚಂದ್ರಶೇಖರ್‌ ಅವರಿಗೆ ಕುಮಾರಸ್ವಾಮಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿರುವ ಪ್ರಕರಣವೇ ವಿಶೇಷ ನ್ಯಾಯಾಲಯದಲ್ಲಿ (ಸಾಯಿ ವೆಂಕಟೇಶ್ವರ ಮಿನರಲ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ) ಕುಮಾರಸ್ವಾಮಿ ಪಡೆದಿರುವ ನಿರೀಕ್ಷಣಾ ಜಾಮೀನು ರದ್ದತಿ ಕೋರಿಕೆಗೆ ಆಧಾರವಾಗಿದೆ. ಹೀಗಾಗಿ, ಈಗ ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿರುವ ಮಧ್ಯಂತರ ಅರ್ಜಿಗಳನ್ನು ಪುರಸ್ಕರಿಸಿದರೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಲೋಕಾಯುಕ್ತ ಮೇಲುಗೈ ಸಾಧಿಸಲಿದೆ. ಈ ನೆಲೆಯಲ್ಲಿ ಬೆದರಿಕೆ ಪ್ರಕರಣದ ಸಂಬಂಧ ದಾಖಲಾಗಿರುವ ಎಫ್‌ಐಆರ್‌ ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಿದೆ ಎಂದರು.

ಮುಂದುವರಿದು, “ಹಾಲಿ ಪ್ರಕರಣಕ್ಕೂ 10 ವರ್ಷದ ಹಿಂದೆ ತನಿಖೆ ನಡೆಸಿರುವ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಿರೀಕ್ಷಣಾ ಜಾಮೀನು ರದ್ದತಿ ಕೋರಿಕೆ ಅರ್ಜಿಯೂ ಇದಕ್ಕೆ (ಬೆದರಿಕೆ ಪ್ರಕರಣಕ್ಕೆ) ಸಂಬಂಧಿಸಿಲ್ಲ. ಎಸ್‌ಐಟಿ ತನಿಖಾಧಿಕಾರಿಯ (ಚಂದ್ರಶೇಖರ್‌) ಮೇಲೆ ಮಾಧ್ಯಮಗೋಷ್ಠಿಯಲ್ಲಿ ಕುಮಾರಸ್ವಾಮಿ ದಾಳಿ ನಡೆಸಿದ್ದಾರೆ ಎಂಬುದು ಹಾಲಿ ಪ್ರಕರಣದಲ್ಲಿನ ಆರೋಪವಾಗಿದೆ. ಚಂದ್ರಶೇಖರ್‌ ಅವರು ಎಸ್‌ಐಟಿಯಲ್ಲಿ ತನಿಖಾಧಿಕಾರಿಯೇ ಆಗಿಲ್ಲ. ಇನ್ನು ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಪ್ರಕರಣದ ತನಿಖೆ ಮುಗಿದಿದೆ. ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಸಕ್ಷಮ ಪ್ರಾಧಿಕಾರಕ್ಕೂ (ರಾಜ್ಯಪಾಲರು) ದಾಖಲೆ ಸಲ್ಲಿಸಲಾಗಿದೆ. ಚಂದ್ರಶೇಖರ್‌ ಅವರು ತನಿಖಾಧಿಕಾರಿಯಾಗಿ ಉಳಿದಿಲ್ಲ. ಹೀಗಿರುವಾಗ, ಚಂದ್ರಶೇಖರ್‌ಗೆ ಬೆದರಿಕೆ ಹಾಕುವ ಪ್ರಶ್ನೆ ಎಲ್ಲಿಂದ ಬರುತ್ತದೆ? ತನಿಖೆ ಮುಗಿದು, ಆರೋಪ ಪಟ್ಟಿ ಸಲ್ಲಿಸಿರುವಾಗ ಬೆದರಿಕೆ ಎಲ್ಲಿದೆ? ಹೀಗಾಗಿ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 224 (ಸರ್ಕಾರಿ ಅಧಿಕಾರಿಗೆ ಬೆದರಿಕೆ) ಅನ್ವಯಿಸುವುದಿಲ್ಲ. ಇದು ಕಾನೂನಿನ ದುರ್ಬಳಕೆಯಾಗಿದೆ” ಎಂದರು.

ಮುಂದುವರೆದು, “ಮಾಧ್ಯಮಗಳ ಮುಂದೆ ಕುಮಾರಸ್ವಾಮಿ ಅವರು ಮಾತನಾಡಿರುವ ಸಂವಾದದ ವಿಚಾರಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಎರಡು ಪೆನ್‌ಡ್ರೈವ್‌ಗಳಿವೆ. ನಮಗೆ ಕೊಟ್ಟಿರುವ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದ್ದೇವೆಯೇ ವಿನಾ, ತನಿಖಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿಲ್ಲ” ಎಂದು ಸಮರ್ಥಿಸಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಲೋಕಾಯುಕ್ತ ಕಾಯಿದೆ ಸೆಕ್ಷನ್‌ 36ರ ಅನ್ವಯ ಚಂದ್ರಶೇಖರ್‌ ಅವರೇ ತನಿಖಾಧಿಕಾರಿಯಾಗಿದ್ದಾರೆ. ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಸಕ್ಷಮ ಪ್ರಾಧಿಕಾರವಾಗಿರುವ ರಾಜ್ಯಪಾಲರ ಅನುಮತಿ ಬೇಕಿರುವುದರಿಂದ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿ ಪರಿಗಣನೆಯಾಗುವುದಿಲ್ಲ. ಯಾವ ದಾಖಲೆ ಕುಮಾರಸ್ವಾಮಿ ಅವರಿಗೆ ಸಿಗಬಾರದು ಎಂದು ಸುಪ್ರೀಂ ಕೋರ್ಟ್‌ ನಿರ್ಬಂಧಿಸಿದೆಯೋ ಅದನ್ನು ಉಲ್ಲಂಘಿಸಿ, ಆ ದಾಖಲೆ ತೋರಿಸಿ ಕುಮಾರಸ್ವಾಮಿ ಅವರು ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ್ದಾರೆ. ಈ ನ್ಯಾಯಾಲಯದ ಮುಂದೆ ಕುಮಾರಸ್ವಾಮಿ ಅವರು ಸುಪ್ರೀಂ ಕೋರ್ಟ್‌ ಆದೇಶವನ್ನು ಮುಚ್ಚಿಟ್ಟು, ಅದರ ಹಿಂದಿನ ಆದೇಶವನ್ನು ಸಲ್ಲಿಸಿ, ಸುಪ್ರೀಂ ಕೋರ್ಟ್‌ ಆದೇಶದ ಅನುಸಾರ ಆ ದಾಖಲೆ ಪಡೆಯಲಾಗಿದೆ ಎಂದು ವಾದಿಸಿದ್ದಾರೆ” ಎಂದು ಆಕ್ಷೇಪಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಾಗುವುದು. ಮಾರ್ಚ್‌ 28ರಂದು ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆ ಮುಂದೂಡಿತು.