[ಬೆದರಿಕೆ ಪ್ರಕರಣ] ಎಚ್‌ಡಿಕೆ ವಿರುದ್ಧ ಬಲವಂತದ ಕ್ರಮವಿಲ್ಲ; ಸೂಕ್ತ ಸಂದರ್ಭದಲ್ಲಿ ಲೋಕಾ ಅರ್ಜಿ ಪರಿಗಣನೆ: ಹೈಕೋರ್ಟ್‌

ಪ್ರಕರಣದಲ್ಲಿ ಲೋಕಾಯುಕ್ತ ಪಕ್ಷಕಾರವಾಗಿಲ್ಲ. ಹೀಗಿರುವಾಗ ಮೊದಲನೆಯದಾಗಿ ನಿಮ್ಮ ವಾದವನ್ನೇ ಆಲಿಸಬೇಕಿಲ್ಲ. ನಿಮಗೆ ಬೇಕಾದ ಆದೇಶ ಪಡೆಯಲು ಸೂಕ್ತವಾದ ಅರ್ಜಿ ಸಲ್ಲಿಸಬೇಕು ಎಂದಿತು.
IPS officer M Chandrashekar , H D Kumaraswamy & Karnataka HC
IPS officer M Chandrashekar , H D Kumaraswamy & Karnataka HC
Published on

ಹಿರಿಯ ಐಪಿಎಸ್‌ ಅಧಿಕಾರಿ ಲೋಕಾಯುಕ್ತ ಎಡಿಜಿಪಿ ಎಂ ಚಂದ್ರಶೇಖರ್‌ ಅವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ಪರವಾಗಿ ಮಾಡಿರುವ ಮಧ್ಯಂತರ ಆದೇಶ ವಿಸ್ತರಿಸಿರುವ ಕರ್ನಾಟಕ ಹೈಕೋರ್ಟ್‌ ಲೋಕಾಯುಕ್ತ ಪೊಲೀಸರ ಅರ್ಜಿಯನ್ನು ಸೂಕ್ತ ಸಂದರ್ಭದಲ್ಲಿ ಪರಿಗಣಿಸುವುದಾಗಿ ತಿಳಿಸಿದೆ.

ಬೆಂಗಳೂರಿನ ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣ ರದ್ದತಿ ಕೋರಿ ಎಚ್‌ ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್‌ ಹಾಗೂ ಜೆಡಿಎಸ್‌ ಮುಖಂಡ ಸುರೇಶ್‌ ಬಾಬು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಪೀಠ ನಡೆಸಿತು.

ಕುಮಾರಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ಹಾಲಿ ಎಫ್‌ಐಆರ್‌ಅನ್ನು (ಬೆದರಿಕೆ ಪ್ರಕರಣ ಕುರಿತಾದದ್ದು) 2014ರಲ್ಲಿ ದಾಖಲಾಗಿರುವ ಜಂತಕಲ್‌ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವುದನ್ನು ರದ್ದುಪಡಿಸಲು ಬಳಕೆ ಮಾಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ನ್ಯಾಯಾಲಯವು ಬಲವಂತ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿದೆ. ಹಿರಿಯ ಐಪಿಎಸ್‌ ಅಧಿಕಾರಿಯಾದ ಚಂದ್ರಶೇಖರ್‌ ಅವರು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರನ್ನು ಅವರ ಮೈಬಣ್ಣ ಉಲ್ಲೇಖಿಸಿ ನಿಂದಿಸಿದ್ದಲ್ಲದೇ, ಹಂದಿಗೆ ಹೋಲಿಕೆ ಮಾಡಿದ್ದಾರೆ. ಚಂದ್ರಶೇಖರ್‌ ಹಿಂದೆ ಬಲಾಢ್ಯ ವ್ಯಕ್ತಿಗಳು ಇದ್ದಾರೆ ಎಂಬುದು ಇದರಿಂದ ಅರ್ಥವಾಗುತ್ತದೆ” ಎಂದರು.

ಲೋಕಾಯುಕ್ತರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ಬೆದರಿಕೆ ಪ್ರಕರಣದಲ್ಲಿ ಮಾಡಿರುವ ಮಧ್ಯಂತರ ಆದೇಶವು ಜಂತಕಲ್‌ ಮೈನಿಂಗ್‌ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅಡ್ಡಿಯಾಗಿದೆ. ಈಗಾಗಲೇ ಲೋಕಾಯುಕ್ತ ಎಸ್‌ಐಟಿಯು ತನಿಖೆ ಪೂರ್ಣಗೊಳಿಸಿದ್ದು, ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರ ಅನುಮತಿಗಾಗಿ ವರದಿಯನ್ನು ಕಳುಹಿಸಿಕೊಡಲಾಗಿದೆ. ನ್ಯಾಯಾಲಯಕ್ಕೂ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಹಾಲಿ ಪ್ರಕರಣದಲ್ಲಿ ಮಾಡಲ್ಪಟ್ಟಿರುವ ಮಧ್ಯಂತರ ಆದೇಶವು ತನಗೆ ಸಮಸ್ಯೆಯಾಗಿದೆ. ಹೀಗಾಗಿ, ಆದೇಶದಲ್ಲಿ ಸೂಕ್ತ ಮಾರ್ಪಾಡು ಮಾಡಬೇಕು” ಎಂದರು.

Also Read
ಐಪಿಎಸ್‌ ಅಧಿಕಾರಿ ಚಂದ್ರಶೇಖರ್‌ಗೆ ಎಚ್‌ಡಿಕೆ ಬೆದರಿಕೆ: ಆದೇಶದಲ್ಲಿ ಮಾರ್ಪಾಡು ಕೋರಿ ಹೈಕೋರ್ಟ್‌ ಎಡತಾಕಿದ ಲೋಕಾಯುಕ್ತ

ಆಗ ಪೀಠವು “ಪ್ರಕರಣದಲ್ಲಿ ಲೋಕಾಯುಕ್ತ ಪಕ್ಷಕಾರವಾಗಿಲ್ಲ. ಹೀಗಿರುವಾಗ ಮೊದಲನೆಯದಾಗಿ ನಿಮ್ಮ ವಾದವನ್ನೇ ಆಲಿಸಬೇಕಿಲ್ಲ. ನಿಮಗೆ ಬೇಕಾದ ಆದೇಶ ಪಡೆಯಲು ಸೂಕ್ತವಾದ ಅರ್ಜಿ ಸಲ್ಲಿಸಿ, ಅದಕ್ಕೆ ಕುಮಾರಸ್ವಾಮಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಬೇಕಾಗುತ್ತದೆ. ಆನಂತರ ಸೂಕ್ತ ಸಂದರ್ಭದಲ್ಲಿ ಅರ್ಜಿಯನ್ನು ಪರಿಗಣಿಸಲಾಗುವುದು. ಹೀಗಾಗಿ, ಕುಮಾರಸ್ವಾಮಿ ಪರವಾಗಿ ಮಾಡಲಾಗಿರುವ ಬಲವಂತ ಕ್ರಮಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶ ಮುಂದುವರಿಯಲಿದೆ” ಎಂದು ಆದೇಶಿಸಿ, ವಿಚಾರಣೆಯನ್ನು ಮಾರ್ಚ್‌ 18ಕ್ಕೆ ಮುಂದೂಡಿತು. 

Kannada Bar & Bench
kannada.barandbench.com