ಬಳ್ಳಾರಿಯ ಸಂಡೂರು ತಾಲ್ಲೂಕಿನಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ 550 ಎಕರೆ ಭೂಮಿಯನ್ನು ಗಣಿ ಗುತ್ತಿಗೆ ನೀಡಿರುವ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಲೋಕಾಯುಕ್ತ ವಿಶೇಷ ತನಿಖಾ ದಳವು ಸಲ್ಲಿಸಿರುವ ಅರ್ಜಿಯನ್ನು ಅಮಾನತುಗೊಳಿಸುವಂತೆ ಕೋರಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯೂ ಆದ ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು.
ಕುಮಾರಸ್ವಾಮಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಷ್ಮತ್ ಪಾಷಾ ಅವರು “ಕಳೆದ ವರ್ಷ ಬೆಂಗಳೂರಿನ ಸಂಜಯಗಾಂಧಿ ನಗರ ಠಾಣೆಯಲ್ಲಿ ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣ ಆಧರಿಸಿ ಗಣಿ ಗುತ್ತಿಗೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ರದ್ದತಿ ಕೋರಿ ಲೋಕಾಯುಕ್ತ ಎಸ್‌ಐಟಿ ಅರ್ಜಿ ಸಲ್ಲಿಸಿದೆ. ಈಚೆಗೆ ಹೈಕೋರ್ಟ್‌ನ ಸಮನ್ವಯ ಪೀಠವು ಲೋಕಾಯುಕ್ತವು ಎಸ್‌ಐಟಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿ, ಸಂಜಯಗಾಂಧಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಮಧ್ಯಂತರ ತಡೆ ಮುಂದುವರಿಸಿದೆ. ಅಂತಿಮವಾಗಿ ಬೆದರಿಕೆ ಪ್ರಕರಣದ ಸಂಬಂಧ ಸಲ್ಲಿಸಿರುವ ಅರ್ಜಿ ನಿರ್ಧಾರವಾಗುವವರೆಗೆ ನಿರೀಕ್ಷಣಾ ಜಾಮೀನು ರದ್ದತಿ ಕೋರಿ ಎಸ್‌ಐಟಿ ಸಲ್ಲಿಸಿರುವ ಅರ್ಜಿಯನ್ನು ಅಮಾನತಿನಲ್ಲಿ ಇಡಲು ಆದೇಶಿಸಬೇಕು” ಎಂದು ಕೋರಿದರು.
ಲೋಕಾಯುಕ್ತ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ವೆಂಕಟೇಶ್ ಅರಬಟ್ಟಿ ಅವರು “ಹೈಕೋರ್ಟ್ 28.03.2025ರಂದು ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿ ಶ್ರೀ ಸಾಯಿ ಮಿನರಲ್ಸ್ ಗಣಿ ಗುತ್ತಿಗೆ ಪ್ರಕರಣಕ್ಕೆ ಇದ್ದ ಅಡ್ಡಿಯನ್ನು ನಿವಾರಿಸಿದೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಅಹವಾಲನ್ನು ಪರಿಗಣಿಸಿ ಹೈಕೋರ್ಟ್ ಆದೇಶವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ಆ ಮಧ್ಯಂತರ ಪರಿಹಾರ ಆದೇಶದಲ್ಲಿ ಹಿರಿಯ ವಕೀಲ ಹಷ್ಮತ್ ಪಾಷಾ ಅವರ ಒಪ್ಪಿಗೆಯನ್ನು ದಾಖಲಿಸಿದೆ. ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ನಿರ್ಧರಿಸುವುದನ್ನು ವಿಳಂಬಗೊಳಿಸಲು ಕುಮಾರಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಅರ್ಜಿಯು ಊರ್ಜಿತವಾಗುವುದಿಲ್ಲ, ಅದನ್ನು ವಜಾಗೊಳಿಸಬೇಕು” ಎಂದು ಕೋರಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿ ವಜಾಗೊಳಿಸಲು ಮುಂದಾಗಿತ್ತು. ಹಿರಿಯ ವಕೀಲ ಹಷ್ಮತ್ ಪಾಷಾ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.
2015ರ ಆಗಸ್ಟ್ 21ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿ ಜಿ ಬೋಪಯ್ಯ ಅವರು ಕುಮಾರಸ್ವಾಮಿ ಅವರು ಐದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ಪ್ರಕರಣದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಭಾವ ಬೀರಬಾರದು ಮತ್ತು ತನಿಖಾಧಿಕಾರಿ ಸೂಚಿಸಿದಾಗ ಕುಮಾರಸ್ವಾಮಿ ಅವರು ವಿಚಾರಣೆಯಲ್ಲಿ ಭಾಗಿಯಾಗಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದರು.
ಸಾಯಿ ಮಿನರಲ್ಸ್ ಪಾಲುದಾರರಾದ ವಿ ವಿ ಸಕ್ರೆ ಅವರು 17.4.2006ರಂದು ಬಳ್ಳಾರಿ ಜಿಲ್ಲೆಯ ಸಂಡೂರಿನ ಎನ್‌ಇಬಿ ವಲಯದಲ್ಲಿ 550 ಎಕರೆಯನ್ನು ಗಣಿ ಗುತ್ತಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದೇ ಪ್ರಸ್ತಾವಿತ ಪ್ರದೇಶವನ್ನು ಮೊದಲಿಗೆ ಮೆಸರ್ಸ್ ಚೌಗ್ಲೆ ಮತ್ತು ಕಂಪನಿಗೆ ಹಂಚಿಕೆ ಮಾಡಲಾಗಿದ್ದು, ಅದು ಮೇಲೆ ಉಲ್ಲೇಖಿತ ಭೂಮಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿತ್ತು. ಈ ಪ್ರದೇಶವನ್ನು ತಮಗೆ ಹಂಚಿಕೆ ಮಾಡುವಂತೆ ಕೋರಿ 29 ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಈ ಸಂಬಂಧ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಒಳಗೊಂಡ ತುಲನಾತ್ಮಕ ಪಟ್ಟಿಯನ್ನು ಸಿದ್ಧಪಡಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿದ್ದರು.
ಈ ಕಡತವನ್ನು ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಮುಂದೆ ಮಂಡಿಸಲಾಗಿತ್ತು. ಕುಮಾರಸ್ವಾಮಿ ಅವರು ಸಂಡೂರು ತಾಲ್ಲೂಕಿನ ಎನ್‌ಇಬಿ ವಲಯದ ಜೋಗು, ತಿಮ್ಮಪ್ಪಗುಡಿ ಮತ್ತು ಭಾವಿಹಳ್ಳಿ ವ್ಯಾಪ್ತಿಯ 550 ಎಕರೆಯನ್ನು ವಿ ವಿ ಸಕ್ರೆ ಅವರಿಗೆ ಹಂಚಿಕೆ ಮಾಡಲು ನಿರ್ದೇಶಿಸಿದ್ದರು. ಆದರೆ, ಖನಿಜ ವಿನಾಯಿತಿ ನಿಯಮಗಳು 1960 ನಿಯಮ 59(2)ರ ಪ್ರಕಾರ ಕೇಂದ್ರ ಸರ್ಕಾರವು ನಿಯಮ 59(1) ಅನ್ನು ಸಡಿಲಿಕೆ ಮಾಡಬಹುದು. ಆದರೆ, ಇದನ್ನು ಶಿಫಾರಸ್ಸು ಮಾಡುವಾಗ ಕುಮಾರಸ್ವಾಮಿ ಅವರು ಅದರ ಕುರಿತು ಉಲ್ಲೇಖಿಸಿರಲಿಲ್ಲ. ಇದರ ಬೆನ್ನಿಗೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ಕೆ ಜಯಚಂದ್ರ ಅವರು 6.10.2007ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕಳುಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರಿಗೆ ಪತ್ರ ಬರೆದಿದ್ದರು.
ಈ ಪತ್ರದಲ್ಲಿ ಸಕ್ರೆ ಅವರನ್ನು ಸಾಯಿ ವೆಂಕಟೇಶ್ವರ ಮಿನರಲ್ಸ್‌ನ ಮುಖ್ಯಸ್ಥ ಎಂದು ಉಲ್ಲೇಖಿಸಲಾಗಿತ್ತು. ಆನಂತರ 6.10.2007ರಂದು ಅದನ್ನು ಸರಿಪಡಿಸಿ, ಪ್ರಸ್ತಾವ, ಚೆಕ್ ಲಿಸ್ಟ್ ಹಾಗೂ ಇತರೆ ದಾಖಲೆಗಳಲ್ಲಿ ಸಕ್ರೆ ಅವರ ಹೆಸರಿನಲ್ಲಿ ಸಲ್ಲಿಸಲಾಗಿತ್ತು. ಇಲ್ಲಿ ತನಿಖಾ ಸಂಸ್ಥೆಯು ಮೂಲ ರೂಪದಲ್ಲಿ ಸಕ್ರೆ ಸಲ್ಲಿಸಿದ್ದ ಅರ್ಜಿಯನ್ನು ತಿರುಚಿ, ನಕಲಿ ಪ್ರಸ್ತಾಪ ಸಲ್ಲಿಸಲಾಗಿತ್ತು ಎಂದು ಆರೋಪಿಸಿದೆ.
ಈ ಪ್ರಕರಣದಲ್ಲಿ 5.8.2015ರಂದು ತನಿಖೆಗೆ ಹಾಜರಾಗುವಂತೆ 27.7.2015ರಂದು ಎಸ್‌ಐಟಿ ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸದಿದ್ದರೂ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿದ್ದರು. ಇದನ್ನು ವಿಶೇಷ ನ್ಯಾಯಾಲಯ ಪುರಸ್ಕರಿಸಿದೆ. ಇದನ್ನು ರದ್ದುಪಡಿಸುವಂತೆ ಸದ್ಯ ಲೋಕಾಯುಕ್ತ ಎಸ್‌ಐಟಿ ಅರ್ಜಿ ಸಲ್ಲಿಸಿದೆ.
ಈ ಆರೋಪದ ಮೇಲೆ ಲೋಕಾಯುಕ್ತ ಎಸ್‌ಐಟಿಯು ಐಪಿಸಿ ಸೆಕ್ಷನ್‌ಗಳಾದ 420, 465, 468 ಜೊತೆಗೆ 120-ಬಿ ಮತ್ತು 511, ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 13(2) ಜೊತೆಗೆ 13(1) (d) ಹಾಗೂ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ ಸೆಕ್ಷನ್ 21(2) ಮತ್ತು 23ರ ಅಡಿ ಪ್ರಕರಣ ದಾಖಲಿಸಿದ್ದು, ಸಾಯಿ ವೆಂಕಟೇಶ್ವರ ಮಿನರಲ್ಸ್‌ನ ವಿನೋದ್ ಗೋಯಲ್ ಅವರನ್ನು ಮೊದಲ ಆರೋಪಿ, ಕೆ ಜಯಚಂದ್ರ ಅವರನ್ನು ಎರಡನೇ ಆರೋಪಿ ಮತ್ತು ಅನಾಮಿಕ ಸರ್ಕಾರಿ ಅಧಿಕಾರಿಗಳು ಹಾಗೂ ಅನಾಮಿಕರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.