Rahul Gandhi and Gujarat High Court 
ಸುದ್ದಿಗಳು

ರಾಹುಲ್ ಜನಪ್ರತಿನಿಧಿಯಾಗಿದ್ದು ಇತಿಮಿತಿ ಅರಿತು ಹೇಳಿಕೆ ನೀಡಬೇಕು: ಗುಜರಾತ್ ಹೈಕೋರ್ಟ್

ಪ್ರತಿಯಾಗಿ ವಾದ ಮಂಡಿಸಿದ ರಾಹುಲ್ ಪರ ವಕೀಲರು ತಮ್ಮ ಕಕ್ಷಿದಾರ ಕೊಲೆಯಂತಹ ಘೋರ ಅಥವಾ ಹೀನ ಕೃತ್ಯ ಎಸಗಿಲ್ಲ. ಇಲ್ಲವೇ ಅವರ ಅಪರಾಧ ನೈತಿಕ ಅಧಃಪತನಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.

Bar & Bench

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾಯಿತ ಜನಪ್ರತಿನಿಧಿಯಾಗಿದ್ದು ಹೇಳಿಕೆಗಳನ್ನು ನೀಡುವಾಗ ಜಾಗರೂಕರಾಗಿರಬೇಕು ಎಂದು ಗುಜರಾತ್ ಹೈಕೋರ್ಟ್ ಶನಿವಾರ ಹೇಳಿದೆ [ರಾಹುಲ್ ಗಾಂಧಿ ಮತ್ತು ಪೂರ್ಣೇಶ್ ಮೋದಿ ನಡುವಣ ಪ್ರಕರಣ].

ಕೋಲಾರದಲ್ಲಿ ನಡೆದಿದ್ದ ಚುನಾವಣಾ ಸಮಾವೇಶವೊಂದರಲ್ಲಿ “ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಏಕಿದೆ” ಎಂಬ ಹೇಳಿಕೆಯನ್ನು ಅವರು ನೀಡಿದ್ದರು. ಈ ಸಂಬಂಧ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ಹೂಡಿದ್ದ ಪ್ರಕರಣದಲ್ಲಿ ಸೂರತ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ರಾಹುಲ್‌ ದೋಷಿ ಎಂದು ಅಪರಾಧ ನಿರ್ಣಯ ಮಾಡಿತ್ತು. ತೀರ್ಪಿಗೆ ತಡೆ ನೀಡುವಂತೆ ಕೋರಿ ರಾಹುಲ್‌ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೇಮಂತ್ ಪ್ರಚ್ಚಕ್‌ ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಹುಲ್‌ ಅವರ ಜನತೆಯನ್ನು ಪ್ರತಿನಿಧಿಸುತ್ತಿದ್ದು ಅವರು ಇತಿಮಿತಿ ಅರಿತು ಹೇಳಿಕೆಗಳನ್ನು ನೀಡಬೇಕು ಎಂಬುದಾಗಿ ನ್ಯಾಯಮೂರ್ತಿಗಳು ಮೌಖಿಕವಾಗಿ  ತಿಳಿಸಿದರು.  

ಪ್ರತಿಯಾಗಿ ವಾದ ಮಂಡಿಸಿದ ರಾಹುಲ್‌ ಪರ ವಕೀಲ, ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಅವರು ತಮ್ಮ ಕಕ್ಷಿದಾರ ಕೊಲೆಯಂತಹ ಘೋರ ಅಥವಾ ಹೀನ ಕೃತ್ಯ ಎಸಗಿಲ್ಲ. ಇಲ್ಲವೇ ಅವರ ಅಪರಾಧ ನೈತಿಕ ಅಧಃಪತನಕ್ಕೆ ಸಂಬಂಧಿಸಿದ್ದಲ್ಲ ಎಂದರು.

“ರಾಹುಲ್‌ ಪ್ರಕರಣ ನೀತಿಗೇಡಿನದು ಎಂದಾಗಲಿ ಅಥವಾ ಗಂಭೀರ ಅಪರಾಧ ವರ್ಗಕ್ಕೆ ಸೇರಿದೆ ಎಂದಾಗಲಿ ಯಾರೂ ಹೇಳಲಾಗದು. ವಾಸ್ತವವಾಗಿ ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದ್ದು ಸಮಾಜ ವಿರೋಧಿ ಕೃತ್ಯವಲ್ಲ” ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ ಪೂರ್ಣೇಶ್‌ ಮೋದಿ ಅವರ ದಾವೆ ಹೂಡುವ ಹಕ್ಕನ್ನೂ ಸಹ ಸಿಂಘ್ವಿ ಪ್ರಶ್ನಿಸಿದರು.  " ಮೋದಿ ಉಪನಾಮ ಇರುವ 13 ಕೋಟಿ ಜನರಲ್ಲಿ ಭಾಷಣದಲ್ಲಿ ಹೆಸರಿಸಿರುವವರನ್ನು ಹೊರತುಪಡಿಸಿ ಯಾರೂ ಬಂದು ದೂರು ಸಲ್ಲಿಸಲು ಸಾಧ್ಯವಿಲ್ಲ.ಇದು ಪೂರ್ಣೇಶ್‌ ಮೋದಿ ಅವರಿಗೆ ಸಂಬಂಧಿಸಿದ್ದು ಎನ್ನುವುದಕ್ಕೆ ರಾಹುಲ್‌ ಅವರನ್ನು ಎಲ್ಲಿಯೂ ಹೆಸರಿಸಿಲ್ಲ” ಎಂದರು.

ರಾಹುಲ್‌ ತಮ್ಮ ಭಾಷಣದಲ್ಲಿ ನಿಜವಾಗಿ ಹೆಸರಿಸಿದ್ದ ವ್ಯಕ್ತಿಗಳು ಮಾತ್ರ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಬಹುದು. ಆದರೆ ರಾಹುಲ್‌ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಯಾವುದೇ ವ್ಯಕ್ತಿ ದೂರು ದಾಖಲಿಸಿಲ್ಲ. ಈ ದೂರನ್ನು ಪುರಸ್ಕರಿಸಿದರೆ ಯಾರು ಯಾರ ಮೇಲಾದರೂ ಮಾನನಷ್ಟ ಮೊಕದ್ದಮೆ ದಾಖಲಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ವಾದಿಸಿದರು.

ಮುಂದುವರಿದು, ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಸಾಬೀತುಪಡಿಸಲು ಸಾಕ್ಷ್ಯಾಧಾರ ಕಾಯಿದೆ ಅಥವಾ ಮಾಹಿತಿ ತಂತ್ರಜ್ಞಾನ ಕಾಯಿದೆಯ ಪ್ರಕಾರ ಯಾವುದೇ ಪುರಾವೆಗಳನ್ನು ಒದಗಿಸಲಾಗಿಲ್ಲ. ರಾಹುಲ್‌ ಅಪರಾಧಿ ಎಂದು ನಿರ್ಣಯಿಸಲು ವಿಚಾರಣಾ ನ್ಯಾಯಾಲಯ ಅವಲಂಬಿಸಿರುವ ಪ್ರಕರಣಗಳು ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಮತ್ತು ಘೋರ ಅಪರಾಧಗಳನ್ನು ಒಳಗೊಂಡಿವೆ. ಅಂತಹ ಪ್ರಕರಣಗಳಲ್ಲಿಯೂ ನ್ಯಾಯಾಲಯಗಳು ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿವೆ. ಶಿಕ್ಷೆ ಜಾರಿಯಾದರೆ ರಾಹುಲ್‌ ಮತ್ತು ವಯನಾಡಿನ ಮತದಾರರಿಗೆ ತುಂಬಲಾರದ ನಷ್ಟ ಉಂಟಾಗುತ್ತದೆ ಎಂದು ವಿವರಿಸಿದರು.

“ಶಿಕ್ಷೆಯನ್ನು ತಡೆಹಿಡಿಯದಿದ್ದರೆ ಗಾಂಧಿ ಮತ್ತು ವಯನಾಡಿನ ಮತದಾರರಿಗೆ ತುಂಬಲಾರದ ನಷ್ಟ ಉಂಟಾಗಲಿದೆ. ರಾಹುಲ್‌ ಅವರನ್ನು ದೋಷಿ ಎಂದಿರುವ ಅಪರಾಧ ನಿರ್ಣಯಕ್ಕೆ ತಡೆ ನೀಡದಿದ್ದಲ್ಲಿ ಆರರಿಂದ ಎಂಟು ವರ್ಷಗಳ ಕಾಲ ರಾಜಕೀಯ ಬದುಕಿನಿಂದ ದೂರ ಇರಬೇಕಾಗುತ್ತದೆ” ಎಂದು ಅವರು ವಾದಿಸಿದರು.

ದೂರುದಾರ ಪೂರ್ಣೇಶ್ ಮೋದಿ ಪರ ವಾದ ಮಂಡಿಸಿದ ಹಿರಿಯ ವಕೀಲ ನಿರುಪಮ್ ನಾನಾವತಿ ಅವರು, ರಾಹುಲ್‌ ಅವರ ಮನವಿಯನ್ನು ಪರಿಷ್ಕರಣೆ ಅರ್ಜಿಯಾಗಿ ಸಲ್ಲಿಸಲಾಗಿದೆಯೇ ಅಥವಾ ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಪ್ರಕರಣವನ್ನು ರದ್ದುಗೊಳಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲವಾದ್ದರಿಂದ ಅರ್ಜಿಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಆಗ ನ್ಯಾಯಾಲಯ ಇದು ಬಹುತೇಕ ಪರಿಷ್ಕರಣಾ ಅರ್ಜಿಯಂತಿದೆ ಎಂದಿತು.

ದಾಖಲೀಕರಣ ಮತ್ತು ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯ ನಿರ್ಧರಿಸಿಲ್ಲ. ಗುಜರಾತಿಯಲ್ಲಿರುವ ಸಾಕ್ಷಿಗಳ ಅನುವಾದಿತ ಪ್ರತಿಗಳನ್ನು ನ್ಯಾಯಾಲಯ ಪಡೆಯಬೇಕಿತ್ತು ಎಂದು ಅವರು ಮನವಿ ಮಾಡಿದರು

ಹಾಗಿದ್ದರೆ ಅಫಿಡವಿಟ್ ಸಲ್ಲಿಸಲು ಮಂಳವಾರದವರೆಗೆ ಸಮಯ ನೀಡಲಾಗುವುದು. ಅದಕ್ಕಿಂತ ಹೆಚ್ಚಲ್ಲ ಎಂದು ನಾನಾವತಿ ಅವರಿಗೆ ತಿಳಿಸಿದ ಪೀಠ ಅರ್ಜಿಯನ್ನು ಮೇ 2ಕ್ಕೆ ಮುಂದೂಡಿತು.