ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಸೂರತ್‌ನ ಮಾಜಿಸ್ಟ್ರೇಟ್ ನ್ಯಾಯಾಲಯವು ನೀಡಿರುವ ತೀರ್ಪಿಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ [ರಾಹುಲ್ ಗಾಂಧಿ ವರ್ಸಸ್ ಪೂರ್ಣೇಶ್ ಮೋದಿ].
ಸೂರತ್‌ನ ಸತ್ರ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ಹೈಕೋರ್ಟ್‌ನ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ ಎಂದು ರಾಹುಲ್ ಗಾಂಧಿ ಪರ ವಕೀಲೆ ತರನುಮ್ ಚೀಮಾ ಅವರು ತಿಳಿಸಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸತ್ರ ನ್ಯಾಯಾಲಯವು ಏಪ್ರಿಲ್ 20ರಂದು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
“ಸಂಸತ್ ಸದಸ್ಯತ್ವದಿಂದ ರಾಹುಲ್ ಅವರನ್ನು ಅನರ್ಹಗೊಳಿಸಿರುವುದರಿಂದ ಅವರಿಗೆ ಯಾವುದೇ ಎದುರಿಸಲಾಗದಂತಹ ಅಥವಾ ತುಂಬಿಕೊಡಲಾಗದಂತಹ ನಷ್ಟ ಅಥವಾ ಧಕ್ಕೆ ಒದಗಿದೆ ಎಂದು ಹೇಳಲಾಗದು” ಎಂದು ಸತ್ರ ನ್ಯಾಯಾಲಯವು ವಿಸ್ತೃತ ಆದೇಶದಲ್ಲಿ ಹೇಳಿತ್ತು.
“ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಉಪನಾಮ ಇದೆ” ಎಂಬ ಹೇಳಿಕೆ ನೀಡಿದ್ದ ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ತೀರ್ಪು ನೀಡಿ, ಎರಡು ವರ್ಷ ಶಿಕ್ಷೆಯನ್ನು ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿತ್ತು. ಪರಿಣಾಮ ರಾಹುಲ್ ಗಾಂಧಿ ಅವರು ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗಿದ್ದರು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ದೇಶಭ್ರಷ್ಟರಾದ ನೀರವ್ ಮೋದಿ, ಲಲಿತ್ ಮೋದಿ ಅವರಿಗೆ ಹೋಲಿಕೆ ಮಾಡಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿಯ ಮಾಜಿ ಶಾಸಕ ಪೂರ್ಣೇಶ್ ಮೋದಿ ಅವರು ಸೂರತ್ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ಹೂಡಿದ್ದರು.