ಸುದ್ದಿಗಳು

ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕರಣದ ವಿಚಾರಣೆ ನ.20ಕ್ಕೆ ಮುಂದೂಡಿದ ಹೈಕೋರ್ಟ್‌; ಸಾರಿಗೆ ಇಲಾಖೆ ನಿರ್ಧಾರದತ್ತ ಚಿತ್ತ

ಹೈಕೋರ್ಟ್‌ ನಿರ್ಧಾರ ಆಧರಿಸಿ ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳಿಗೆ ದಂಡದ ನಿರ್ಧಾರ ಮಾಡಲಾಗುವುದು ಎಂದು ಈಚೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದರು. ಈಗ ಸರ್ಕಾರದ ನಿರ್ಧಾರ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.  

Bar & Bench

ಅತಿಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರ ಅಳವಡಿಸಬೇಕು ಎಂಬುದಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ನವೆಂಬರ್‌ 20ಕ್ಕೆ ಮುಂದೂಡಿದೆ.

ವಾಹನ ತಯಾರಿಸುವ ಮೂಲ ಸಾಧನಗಳ ಉತ್ಪಾದಕರು ಅನುಮತಿಸಿರುವ ಪರವಾನಗಿ ಹೊಂದಿರುವ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರು ಮಾತ್ರ ಎಚ್‌ಎಸ್‌ಆರ್‌ ಫಲಕಗಳನ್ನು ಹಳೆಯ ವಾಹನಗಳಿಗೆ ಪೂರೈಸಬೇಕು. ಈ ಫಲಕಗಳನ್ನು ವಾಹನ ಉತ್ಪಾದಕರು ಅನುಮತಿಸಿರುವ ಡೀಲರ್‌ಗಳು ಮಾತ್ರ ಅಳವಡಿಸಬೇಕು. ಹಳೆಯ ವಾಹನಗಳ ಮಾಲೀಕರು ಅಧಿಸೂಚನೆ ಹೊರಡಿಸಿರುವ ಮೂರು ತಿಂಗಳ ಒಳಗಾಗಿ ಎಚ್‌ಎಸ್‌ಆರ್‌ ಫಲಕ ಅಳವಡಿಸಬೇಕು ಎಂದು 17.08.2023ರಂದು ಸಾರಿಗೆ ಇಲಾಖೆ ಹೊರಡಿಸಿದ್ದ ಅಧಿಸೂಚನೆ ಮತ್ತು 18.08.2023ರಂದು ಸಾರಿಗೆ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ತಡೆಯಾಜ್ಞೆ ವಿಧಿಸಲು ನಿರಾಕರಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಕೆ ರಾಜೇಶ್‌ ರೈ ಅವರ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರತಿವಾದಿಗಳ ಪರ ವಕೀಲರು ಅರ್ಜಿಯನ್ನು ನವೆಂಬರ್‌ಗೆ ಮುಂದೂಡುವಂತೆ ಕೋರಿದರು. ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿದ್ದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ವಿಚಾರಣೆಯನ್ನು ನವೆಂಬರ್‌ 20ಕ್ಕೆ ನಿಗದಿಗೊಳಿಸುವಂತೆ ಕೋರಿದರು.
ಇದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ನವೆಂಬರ್‌ 20ಕ್ಕೆ ಮುಂದೂಡಿತು. ರೋಸ್ಟರ್‌ ಪ್ರಕಾರ ಮೇಲ್ಮನವಿಗಳ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಅವರ ಪೀಠದ ಮುಂದೆ ವಿಚಾರಣೆಗೆ ಬರಬೇಕಿತ್ತು. ಆದರೆ, ಮುಖ್ಯ ನ್ಯಾಯಮೂರ್ತಿಗಳು ರಜೆಯ ಹಿನ್ನೆಲೆಯಲ್ಲಿ ಪ್ರಕರಣವು ಹಿರಿಯ ನ್ಯಾಯಮೂರ್ತಿ ಕೆ ಕಾಮೇಶ್ವರ ರಾವ್‌ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.

ಈ ಹಿಂದೆ ರಾಜ್ಯ ಸರ್ಕಾರವು ಎಚ್‌ಎಸ್‌ಆರ್‌ ಫಲಕ ಅಳವಡಿಕೆಗೆ ವಿಧಿಸಿದ್ದ ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ 2024ರ ಮೇ 21ರಂದು ನ್ಯಾಯಮೂರ್ತಿಗಳಾದ ಎಸ್‌ ಆರ್‌ ಕೃಷ್ಣ ಕುಮಾರ್‌ ಮತ್ತು ರಾಮಚಂದ್ರ ಹುದ್ದಾರ್‌ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರವು 12.06.2024ರವರೆಗೆ ಕರ್ನಾಟಕದಲ್ಲಿ ವಾಹನಗಳಿಗೆ ಎಚ್‌ಎಸ್‌ಆರ್‌ ಫಲಕ ಅಳವಡಿಕೆಗೆ ಸಂಬಂಧಿಸಿದಂತೆ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳುವುದಿಲ್ಲ (ಎಚ್‌ಎಸ್‌ಆರ್‌ಪಿ ಅಳವಡಿಸದ ವಾಹನ ಮಾಲೀಕರಿಗೆ ದಂಡ ವಿಧಿಸುವುದು) ಎಂದು ವಾಗ್ದಾನ ನೀಡಿತ್ತು. ಈ ಭರವಸೆಯು ಮೇಲಿಂದ ಮೇಲೆ ವಿಸ್ತರಣೆಯಾಗಿ ಇಲ್ಲಿಯವರೆಗೆ ಚಾಲ್ತಿಯಲ್ಲಿದೆ.

ಇತ್ತೀಚೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಹೈಕೋರ್ಟ್‌ ಸೆಪ್ಟೆಂಬರ್‌ 18ರಂದು ನೀಡುವ ಆದೇಶವನ್ನು ಆಧರಿಸಿ ಎಚ್‌ಎಸ್‌ಆರ್‌ ಫಲಕ ಅಳವಡಿಸಿಕೊಳ್ಳದ ವಾಹನಗಳ ಮಾಲೀಕರಿಗೆ ದಂಡ ವಿಧಿಸುವ ಕುರಿತು ತೀರ್ಮಾನಿಸಲಾಗುವುದು ಎಂದಿದ್ದರು. ಈಗ ವಿಚಾರಣೆ ಮುಂದೂಡಿಕೆಯಾಗಿರುವುದರಿಂದ ರಾಜ್ಯ ಸರ್ಕಾರದ ನಿರ್ಧಾರ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಕರಣದ ಕುರಿತು ಹಿರಿಯ ವಕೀಲ ದೇವದತ್‌ ಕಾಮತ್‌ ಅವರಿಗೆ ಬ್ರೀಫ್‌ ಮಾಡಿರುವ ವಕೀಲ ಶ್ರವಂತ್‌ ಆರ್ಯ ಅವರು "ದುರುದ್ದೇಶಿತ ಕ್ರಮಕೈಗೊಳ್ಳಬಾರದು ಎಂದು ಮೇ 21ರಂದು ಹೈಕೋರ್ಟ್‌ ಮಾಡಿರುವ ಆದೇಶಕ್ಕೂ ಸಾರಿಗೆ ಇಲಾಖೆಯು ದಂಡ ವಿಧಿಸುವುದಕ್ಕೂ ಯಾವುದೇ ಸಂಬಂಧವಿಲ್ಲ. ಸಾರಿಗೆ ಇಲಾಖೆಯು ನಿರ್ದಿಷ್ಟ ಕಾಲಾವಧಿಯಲ್ಲಿ ಎಚ್‌ಎಸ್‌ಆರ್‌ಪಿ ಹಾಕಲಿಲ್ಲ ಎಂದರೆ ದಂಡ ವಿಧಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿತ್ತು. ಈಗ ಎಚ್‌ಎಸ್‌ಆರ್‌ಪಿ ಹಾಕಿಲ್ಲ ಎಂದಾದರೆ ದಂಡ ವಿಧಿಸಲಾಗುತ್ತದೆಯೇ ಎಂಬುದನ್ನು ಸಾರಿಗೆ ಇಲಾಖೆಯೇ ಸ್ಪಷ್ಟಪಡಿಸಬೇಕು. ನಾವು ಸಾರಿಗೆ ಇಲಾಖೆಯ ಅಧಿಸೂಚನೆಗೆ ಕಾಯುತ್ತಿದ್ದೇವೆ" ಎಂದು "ಬಾರ್‌ ಅಂಡ್‌ ಬೆಂಚ್‌"ಗೆ ತಿಳಿಸಿದ್ದಾರೆ.

ಮೇಲ್ಮನವಿ ಸಲ್ಲಿಸಿರುವವರು ಯಾರು?

ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠವು 20.9.2023ರಂದು ಸಾರಿಗೆ ಇಲಾಖೆಯ ಅಧಿಸೂಚನೆ ಮತ್ತು ಸುತ್ತೋಲೆಗೆ ತಡೆ ನೀಡಲು ನಿರಾಕರಿಸಿದ್ದನ್ನು ಗುಜರಾತ್‌ನ ಸೂರತ್‌ ಮೂಲದ ಬಿಎನ್‌ಡಿ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌, ಭಾರತದಲ್ಲಿ ಫಲಕ ಉತ್ಪಾದಕರ ನೋಂದಣೆ ಸಂಸ್ಥೆ, ಭಾರತೀಯ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರ ಸಂಸ್ಥೆಗಳು ಪ್ರಶ್ನಿಸಿವೆ.

ಬೆಂಗಳೂರಿನ ಎಸ್‌ ಗೌರಿಶಂಕರ್‌ ಎಂಬವರು ಸಾರಿಗೆ ಇಲಾಖೆಯ ಅಧಿಸೂಚನೆ ಮತ್ತು ಸುತ್ತೋಲೆಗೆ ಮಧ್ಯಂತರ ತಡೆ ವಿಧಿಸಿ, ಈ ವಿಚಾರದಲ್ಲಿ ಸ್ಪಷ್ಟತೆ ಬರುವವರೆಗೆ ಕರ್ನಾಟಕದಲ್ಲಿ ವಾಹನ ಮಾಲೀಕರಿಗೆ ಆಗುತ್ತಿರುವವರ ಕಿರಿಕಿರಿ ತಪ್ಪಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೂಲಕ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ವಾಹನ ಉತ್ಪಾದಕರು ಪ್ರತಿಯೊಬ್ಬ ಪರವಾನಗಿ ಹೊಂದಿರುವ ಫಲಕ ಉತ್ಪಾದಕರಿಗೆ ಅನುಮತಿ ನೀಡಲು ಪಾಲಿಸಬೇಕಿರುವ ಪ್ರಕ್ರಿಯೆ ರೂಪಿಸಿ ಅದನ್ನು 15 ದಿನಗಳ ಒಳಗೆ ಪ್ರಕಟಿಸಬೇಕು ಎಂದು ಸಾರಿಗೆ ಇಲಾಖೆಗೆ ನಿರ್ದೇಶಿಸಿ 20.9.2023ರಂದು ಏಕಸದಸ್ಯ ಪೀಠ ಮಾಡಿರುವ ಮಧ್ಯಂತರ ಆದೇಶವನ್ನು ಬದಿಗೆ ಸರಿಸಬೇಕು ಎಂದು ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿದೆ.