Bhavani Revanna and Karnataka HC 
ಸುದ್ದಿಗಳು

ಮೈಸೂರು, ಹಾಸನಕ್ಕೆ ತೆರಳಲು ಭವಾನಿ ರೇವಣ್ಣಗೆ ಅನುಮತಿಸಿದ ಹೈಕೋರ್ಟ್‌

ಭವಾನಿಯು ಪ್ರಕರಣದ ಸಂತ್ರಸ್ತೆ ಮತ್ತು ಸಾಕ್ಷಿಗಳು ವಾಸಿಸುವ ಸ್ಥಳದಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಓಡಾಡುವಂತಿಲ್ಲ. ಆದೇಶ ಉಲ್ಲಂಘಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ಸರ್ಕಾರ ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

Bar & Bench

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಅಪಹರಣದ ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ಭವಾನಿ ರೇವಣ್ಣಗೆ ಮೈಸೂರು ಮತ್ತು ಹಾಸನ ಜಿಲ್ಲೆಗಳಿಗೆ ಪ್ರವೇಶಿಸಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಅನುಮತಿಸಿದೆ.

ನಿರೀಕ್ಷಣಾ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಕೋರಿ ಭವಾನಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠವು ಪುರಸ್ಕರಿಸಿತು.

“ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ನಿರೀಕ್ಷಣಾ ಜಾಮೀನು ಷರತ್ತು ಸಡಿಲಿಕೆ ಮಾಡಲಾಗಿದೆ. ಭವಾನಿ ಅವರಿಗೆ ಮೈಸೂರು ಮತ್ತು ಹಾಸನಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ. ಅದಾಗ್ಯೂ, ಭವಾನಿ ಅವರು ಪ್ರಕರಣದ ಸಂತ್ರಸ್ತೆ ಮತ್ತು ಸಾಕ್ಷಿಗಳು ವಾಸಿಸುವ ಸ್ಥಳದಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಓಡಾಡುವಂತಿಲ್ಲ. ಆದೇಶ ಉಲ್ಲಂಘಿಸಿದರೆ ನ್ಯಾಯಾಲಯದ ಮೆಟ್ಟಿಲೇರಲು ಸರ್ಕಾರ ಸ್ವತಂತ್ರವಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಭವಾನಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಐಪಿಸಿ ಸೆಕ್ಷನ್‌ 364ಎ ಅನ್ನು (ಅಪಹರಣ) ಕೈಬಿಡಲಾಗಿದೆ. ಭವಾನಿ ಅವರು 9 ತಿಂಗಳ ಹಿಂದೆ ಪಡೆದಿರುವ ನಿರೀಕ್ಷಣಾ ಜಾಮೀನು ಸ್ವಾತಂತ್ರ್ಯ ಉಲ್ಲಂಘಿಸಿಲ್ಲ. ಪ್ರಕರಣದಲ್ಲಿನ ಉಳಿದ ಆರು ಆರೋಪಿಗಳಿಗೆ ಎಲ್ಲಾದರೂ ಓಡಾಡಲು ಅನುಮತಿಸಲಾಗಿದೆ. ಮೊದಲನೇ ಆರೋಪಿ ಎಚ್‌ ಡಿ ರೇವಣ್ಣಗೆ ಮಾತ್ರ ಕೆ ಆರ್‌ ನಗರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ, ಕಳೆದ ವರ್ಷ ಹಾಸನದಲ್ಲಿ ದೇವಸ್ಥಾನಕ್ಕೆ ತೆರಳಲು ನೀಡಿದ್ದ 10 ದಿನಗಳ ಅನುಮತಿಯಲ್ಲಿಯೂ ಯಾವುದೇ ಉಲ್ಲಂಘನೆಯಾಗಿಲ್ಲ. ಭವಾನಿ ಅವರಿಗೆ ಯಾವುದೇ ತೆರನಾದ ಕ್ರಿಮಿನಲ್‌ ಹಿನ್ನೆಲೆ ಇಲ್ಲ” ಎಂದು ವಾದಿಸಿದ್ದರು.

ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ “ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ಮಾಸ್ಟರ್‌ ಮೈಂಡ್‌ ಆಗಿದ್ದಾರೆ. ಪ್ರಜ್ವಲ್‌ ದೇಶ ತೊರೆಯುವಲ್ಲಿಯೂ ಭವಾನಿ ಪಾತ್ರ ಇದೆ. ಆನಂತರ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡುವವರೆಗೂ ಅವರು ನಾಪತ್ತೆಯಾಗಿದ್ದರು. ಆಕೆ ತಮ್ಮ ಮೊಬೈಲ್‌ ಅನ್ನು ಇಂದಿಗೂ ತನಿಖಾಧಿಕಾರಿಗೆ ಒಪ್ಪಿಸಿಲ್ಲ. ಒಂಭತ್ತನೇ ಆರೋಪಿಯಾಗಿರುವ ಭವಾನಿ ಕಾರು ಚಾಲಕ ಇಂದಿಗೂ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿಯಾಗಿದೆ. ಇದೆಲ್ಲದರ ನಡುವೆ ಎಸ್‌ಐಟಿ ಅಧಿಕಾರಿಗಳು ವಿಸ್ತೃತವಾದ ತನಿಖೆ ನಡೆಸಿ, ವಿಚಾರಣಾಧೀನ ನ್ಯಾಯಾಲಯಕ್ಕೆ ನಾಲ್ಕು ಸಂಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ನಿಗದಿಗೂ ಮುನ್ನಾ ವಾದ-ಪ್ರತಿವಾದ ನಡೆಯುತ್ತಿದೆ. ಕನಿಷ್ಠ ಪಕ್ಷ ಸಂತ್ರಸ್ತೆಯರ ವಿಚಾರಣೆ ಪೂರ್ಣಗೊಳ್ಳುವವರೆಗೆ ಭವಾನಿಗೆ ಹಾಸನ ಮತ್ತು ಮೈಸೂರು ಜಿಲ್ಲಾ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಮುಂದುವರಿಸಬೇಕು” ಎಂದು ಕೋರಿದ್ದರು.

ಸಂತ್ರಸ್ತೆ ಅಪಹರಣ ಆರೋಪದ ಸಂಬಂಧ ಮೈಸೂರಿನ ಕೆ ಆರ್‌ ನಗರ ಠಾಣೆಯಲ್ಲಿ ಜೆಡಿಎಸ್‌ ಶಾಸಕ ಎಚ್‌ ಡಿ ರೇವಣ್ಣ, ಭವಾನಿ ಸೇರಿ ಒಂಭತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಸ್‌ಐಟಿಯೂ ಆರೋಪ ಪಟ್ಟಿಯನ್ನೂ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.