ಮೈಸೂರು-ಹಾಸನ ಪ್ರವೇಶಕ್ಕೆ ನಿರ್ಬಂಧ: ಷರತ್ತು ಸಡಿಲಿಕೆ ಕೋರಿರುವ ಭವಾನಿ ಮನವಿ ಕುರಿತ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡುವವರೆಗೂ ಭವಾನಿ ನಾಪತ್ತೆಯಾಗಿದ್ದರು. ಆಕೆ ತಮ್ಮ ಮೊಬೈಲ್‌ ಅನ್ನು ಇಂದಿಗೂ ತನಿಖಾಧಿಕಾರಿಗೆ ಒಪ್ಪಿಸಿಲ್ಲ. ಭವಾನಿ ಕಾರು ಚಾಲಕ ಇಂದಿಗೂ ನಾಪತ್ತೆಯಾಗಿದ್ದಾನೆ ಎಂದು ಆಕ್ಷೇಪಿಸಿದ ಪ್ರಾಸಿಕ್ಯೂಷನ್.
Bhavani Revanna and Karnataka HC
Bhavani Revanna and Karnataka HC
Published on

ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಮೈಸೂರು ಮತ್ತು ಹಾಸನ ಜಿಲ್ಲೆಗೆ ಪ್ರವೇಶ ನಿರ್ಬಂಧ ಸೇರಿ ಹಲವು ಷರತ್ತುಗಳನ್ನು ವಿಧಿಸಿ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನಿನಲ್ಲಿನ ಷರತ್ತು ಸಡಿಲಿಕೆ ಕೋರಿ ಭವಾನಿ ರೇವಣ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಕಾಯ್ದಿರಿಸಿದೆ.

ಮೈಸೂರು ಮತ್ತು ಹಾಸನ ಜಿಲ್ಲೆಗೆ ತೆರಳಲು ನಿರ್ಬಂಧಿಸಿರುವ ಷರತ್ತಿನಲ್ಲಿ ಸಡಿಲಿಕೆ ಕೋರಿ ಪ್ರಕರಣದಲ್ಲಿ ಆರೋಪಿಯಾಗಿರುವ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಏಕಸದಸ್ಯ ಪೀಠವು ನಡೆಸಿತು.

ಭವಾನಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಐಪಿಸಿ ಸೆಕ್ಷನ್‌ 364ಎ (ಅಪಹರಣ) ಅನ್ನು ಕೈಬಿಡಲಾಗಿದೆ. ಭವಾನಿ ಅವರು 9 ತಿಂಗಳ ಹಿಂದೆ ಪಡೆದಿರುವ ನಿರೀಕ್ಷಣಾ ಜಾಮೀನು ಸ್ವಾತಂತ್ರ್ಯ ಉಲ್ಲಂಘಿಸಿಲ್ಲ. ಪ್ರಕಣದಲ್ಲಿನ ಉಳಿದ ಆರು ಆರೋಪಿಗಳಿಗೆ ಎಲ್ಲಾದರೂ ಓಡಾಡಲು ಅನುಮತಿಸಲಾಗಿದೆ. ಮೊದಲನೇ ಆರೋಪಿ ಎಚ್‌ ಡಿ ರೇವಣ್ಣಗೆ ಮಾತ್ರ ಕೆ ಆರ್‌ ನಗರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೇ, ಕಳೆದ ವರ್ಷ ಹಾಸನದಲ್ಲಿ ದೇವಸ್ಥಾನಕ್ಕೆ ತೆರಳಲು ನೀಡಿದ್ದ 10 ದಿನಗಳ ಅನುಮತಿಯಲ್ಲಿಯೂ ಯಾವುದೇ ಉಲ್ಲಂಘನೆಯಾಗಿಲ್ಲ. ಭವಾನಿ ಅವರಿಗೆ ಯಾವುದೇ ತೆರನಾದ ಕ್ರಿಮಿನಲ್‌ ಹಿನ್ನೆಲೆ ಇಲ್ಲ” ಎಂದರು.

ಅಲ್ಲದೇ, “ಸಂತ್ರಸ್ತೆ ಸಿಆರ್‌ಪಿಸಿ ಸೆಕ್ಷನ್‌ 164 ಅಡಿ ನೀಡಿರುವ ಹೇಳಿಕೆಯನ್ನು ಪರಿಗಣಿಸಿ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸುಪ್ರೀಂ ಕೋರ್ಟ್‌ ಅದನ್ನು ಎತ್ತಿ ಹಿಡಿದಿದೆ. ವಿಶೇಷ ತನಿಖಾ ದಳದ ತನಿಖೆಗೆ ಭವಾನಿ ಎಲ್ಲಾ ರೀತಿಯಲ್ಲೂ ಸಹಕರಿಸಿದ್ದಾರೆ. ಆರೋಪ ಮುಕ್ತ ಕೋರಿರುವ ಅರ್ಜಿಗೂ ಜಾಮೀನು ಷರತ್ತು ಸಡಿಲಿಕೆ ಕೋರಿರುವ ಅರ್ಜಿಗೂ ಯಾವುದೇ ಸಂಬಂಧ ಇಲ್ಲ. ಆರೋಪ ಮುಕ್ತಿ ಕೋರುವುದಕ್ಕೂ ಮುನ್ನವೇ ಷರತ್ತು ಸಡಿಲಿಕೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು” ಎಂದರು.

ಪ್ರಾಸಿಕ್ಯೂಷನ್‌ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ “ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಭವಾನಿ ಮಾಸ್ಟರ್‌ ಮೈಂಡ್‌ ಆಗಿದ್ದಾರೆ. ಪ್ರಜ್ವಲ್‌ ದೇಶ ತೊರೆಯುವಲ್ಲಿಯೂ ಭವಾನಿ ಪಾತ್ರ ಇದೆ. ಆನಂತರ ಹೈಕೋರ್ಟ್‌ ಮಧ್ಯಂತರ ಜಾಮೀನು ಮಂಜೂರು ಮಾಡುವವರೆಗೂ ಅವರು ನಾಪತ್ತೆಯಾಗಿದ್ದರು. ಆಕೆ ತಮ್ಮ ಮೊಬೈಲ್‌ ಅನ್ನು ಇಂದಿಗೂ ತನಿಖಾಧಿಕಾರಿಗೆ ಒಪ್ಪಿಸಿಲ್ಲ. ಒಂಭತ್ತನೇ ಆರೋಪಿಯಾಗಿರುವ ಭವಾನಿ ಕಾರು ಚಾಲಕ ಇಂದಿಗೂ ನಾಪತ್ತೆಯಾಗಿದ್ದಾನೆ. ಆತನ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿಯಾಗಿದೆ. ಇದೆಲ್ಲದರ ನಡುವೆ ಎಸ್‌ಐಟಿ ಅಧಿಕಾರಿಗಳು ವಿಸ್ತೃತವಾದ ತನಿಖೆ ನಡೆಸಿ, ವಿಚಾರಣಾಧೀನ ನ್ಯಾಯಾಲಯಕ್ಕೆ ನಾಲ್ಕು ಸಂಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ನಿಗದಿಗೂ ಮುನ್ನಾ ವಾದ-ಪ್ರತಿವಾದ ನಡೆಯುತ್ತಿದೆ. ಕನಿಷ್ಠ ಪಕ್ಷ ಸಂತ್ರಸ್ತೆಯರ ವಿಚಾರಣೆ ಪೂರ್ಣಗೊಳ್ಳುವವರೆಗೆ ಭವಾನಿಗೆ ಹಾಸನ ಮತ್ತು ಮೈಸೂರು ಜಿಲ್ಲಾ ಪ್ರವೇಶಕ್ಕೆ ವಿಧಿಸಿರುವ ನಿರ್ಬಂಧ ಮುಂದುವರಿಸಬೇಕು” ಎಂದರು.

“ಸಂತ್ರಸ್ತೆಯ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆಯಲ್ಲಿ ಭವಾನಿ ಎರಡು ಬಾರಿ ಆಕೆಯನ್ನು ಅಪಹರಿಸುವುದಕ್ಕೆ ತಂತ್ರ ರೂಪಿಸಿರುವುದನ್ನು ಸಂತ್ರಸ್ತೆ ಬಿಚ್ಚಿಟ್ಟಿದ್ದಾರೆ. ಆಕೆಯಿಂದ ಏನೆಲ್ಲಾ ಸಮಸ್ಯೆಯಾಗಿದೆ ಎಂಬ ಘೋರ ಅಂಶಗಳೂ ಅದರಲ್ಲಿವೆ. ನೂರಾರು ಮಹಿಳೆಯರು ಪ್ರಜ್ವಲ್‌ರಿಂದ ಅತ್ಯಾಚಾರಕ್ಕೆ ಒಳಗಾಗಿದ್ದು, ನಾಲ್ಕೇ ನಾಲ್ಕು ಮಂದಿ ಮಾತ್ರ ದೂರು ನೀಡಿದ್ದಾರೆ. ಈ ಹಂತದಲ್ಲಿ ಅವರಿಗೆ ಮೈಸೂರು ಮತ್ತು ಹಾಸನಕ್ಕೆ ತೆರಳು ಅನುಮತಿಸುವುದು ಸೂಕ್ತವಾದ ಕ್ರಮವಲ್ಲ. ಹೀಗಾಗಿ, ಅರ್ಜಿ ವಜಾ ಮಾಡಬೇಕು” ಎಂದರು.

ಒಂದು ಹಂತದಲ್ಲಿ ಪೀಠವು “ಉಳಿದೆಲ್ಲಾ ಆರೋಪಿಗಳು ಹಾಸನ ಮತ್ತು ಮೈಸೂರು ಜಿಲ್ಲೆಗೆ ತೆರಳುವುದಕ್ಕೆ ಪ್ರಾಸಿಕ್ಯೂಷನ್‌ ಆಕ್ಷೇಪಿಸಿಲ್ಲವೇಕೆ?” ಎಂದು ಪ್ರಶ್ನಿಸಿತು. ಅದಕ್ಕೆ ಪ್ರೊ. ಕುಮಾರ್‌ ಅವರು “ಇಡೀ ಪ್ರಕರಣದ ಕಿಂಗ್‌ಪಿನ್‌ ಭವಾನಿ. ಆಕೆಯ ಸೂಚನೆಯಂತೆ ಉಳಿದ ಆರೋಪಿಗಳು ನಡೆದುಕೊಂಡಿದ್ದಾರಷ್ಟೆ. ಹೀಗಾಗಿ, ಆಕ್ಷೇಪ ವ್ಯಕ್ತಪಡಿಸಿಲ್ಲ” ಎಂದರು.

ಮಹಿಳೆಯರ ರಕ್ಷಣೆ ಅಗತ್ಯ

“ವಿಸ್ತೃತ ನೆಲೆಯಲ್ಲಿ ಜನರು ಮತ್ತು ವಿಶೇಷವಾಗಿ ಮಹಿಳೆಯರನ್ನು ರಕ್ಷಿಸುವ ನಿಟ್ಟಿನಲ್ಲಿ ಭವಾನಿ ಅರ್ಜಿ ಪುರಸ್ಕರಿಸಬಾರದು. ಎರಡು ದಿನಗಳ ಹಿಂದಷ್ಟೇ ಮಹಿಳಾ ದಿನಾಚರಣೆ ಆಚರಿಸಿದ್ದೇವೆ. ಇಲ್ಲಿ ಒಬ್ಬ ಮಹಿಳೆಯನ್ನು ರಕ್ಷಿಸುವುದಲ್ಲ. ನೂರಾರು ಮಹಿಳೆಯರನ್ನು ರಕ್ಷಿಸುವುದಾಗಿದೆ. ಸಂಸತ್‌ ಸದಸ್ಯ ತನ್ನದೇ ಪಕ್ಷದ ಕಾರ್ಯಕರ್ತರ ಮೇಲೆ ಇಂಥ ಕೃತ್ಯದಲ್ಲಿ ತೊಡಗುವುದನ್ನು ಕಲ್ಪಿಸಿಕೊಳ್ಳಲಾಗದು” ಎಂದರು.

Also Read
ಸಂತ್ರಸ್ತೆ ಅಪಹರಣ: ಭವಾನಿ ನಿರೀಕ್ಷಣಾ ಜಾಮೀನಿನ ಷರತ್ತು ಸಡಿಲಿಕೆ ಕೋರಿಕೆ, ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್‌

ಆಗ ಪೀಠವು “ಸ್ವಾತಂತ್ರ್ಯಾ ನಂತರ ಚುನಾಯಿತ ಪ್ರತಿನಿಧಿಗಳು ಅಪರಾಧ ಎಸಗಿದಾಗ ಅವರು ಚುನಾವಣೆಯಲ್ಲಿ ಭಾಗಿಯಾದಂತೆ ಕಾನೂನು ಇದ್ದರೂ ಅದರಲ್ಲಿ ಸುಧಾರಣೆ ಮಾಡಲಾಗುತ್ತಿಲ್ಲ. ಇದಕ್ಕಾಗಿ ಹಲವು ಸಮಿತಿಗಳಿವೆ. ಅದಾಗ್ಯೂ, ಸ್ವಾತಂತ್ರ್ಯಾ ನಂತರ ಏನೂ ಆಗಿಲ್ಲ. ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಜಾರಿಗೊಳಿಸಬೇಕಾದವರು ಉತ್ತಮರಾಗಿರದಿದ್ದರೆ ಅದು ಕೆಟ್ಟದ್ದಾಗಿ ಪರಿಣಮಿಸುತ್ತದೆ…” ಎಂದು ಡಾ. ಅಂಬೇಡ್ಕರ್‌ ಅವರು ಜನಪ್ರಿಯ ಅಭಿಪ್ರಾಯ ನೀಡಿದ್ದಾರೆ ಎಂದಿತು.

ಅದಕ್ಕೆ ಪ್ರೊ. ಕುಮಾರ್‌ ಅವರು “ನಾವು ಸಂವಿಧಾನ ಜಾರಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. ಕಾನೂನುಗಳನ್ನು ರೂಪಿಸುತ್ತಿದ್ದೇವೆ. ಇಂಥ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕ್ರಮಕೈಗೊಳ್ಳಬೇಕು. ತನ್ನ ಅಧಿಕೃತ ಕಚೇರಿಯಲ್ಲಿ ಹಾಲಿ ಸಂಸದ ಅತ್ಯಾಚಾರ ನಡೆಸಿದ್ದಾರೆ. ಹೀಗಾಗಿ, ಭವಾನಿ ಅವರಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಸಹಕರಿಸುವಂತೆ ಸೂಚಿಸಿಬೇಕು. ಆನಂತರ ನ್ಯಾಯಾಲಯದ ಬಂದರೆ ನಾವು ಷರತ್ತು ಸಡಿಲಿಕೆಗೆ ಆಕ್ಷೇಪಣೆಯನ್ನೇ ಎತ್ತುವುದಿಲ್ಲ” ಎಂದರು. 

ಅಂತಿಮವಾಗಿ ಪೀಠವು ಭವಾನಿ ಅವರ ಕೋರಿಕೆಗೆ ಸಂಬಂಧಿಸಿದಂತೆ ಆದೇಶವನ್ನು ಕಾಯ್ದಿರಿಸಿತು.

Kannada Bar & Bench
kannada.barandbench.com