Justices R Subhash Reddy, Ashok Bhushan and MR Shah
Justices R Subhash Reddy, Ashok Bhushan and MR Shah 
ಸುದ್ದಿಗಳು

ಮೇಲ್ಮನವಿ ನ್ಯಾಯಾಲಯವಾಗಿ ಅಪರಾಧದ ವಿರುದ್ಧ ಮೇಲ್ಮನವಿ ಆಲಿಸುವಾಗ ಹೈಕೋರ್ಟ್ ಸಾಕ್ಷ್ಯ ಮರು ಪ್ರಶಂಸಿಸಬೇಕು: ಸುಪ್ರೀಂ

Bar & Bench

ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ಆಲಿಸುವಾಗ ಮೊದಲ ಮೇಲ್ಮನವಿ ನ್ಯಾಯಾಲಯವಾದ ಹೈಕೋರ್ಟ್‌, ವಿಚಾರಣಾಧೀನ ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ಘೋಷಿಸುವ ಸಂದರ್ಭದಲ್ಲಿ ನೀಡಿದ್ದ ಕಾರಣಗಳನ್ನು ಆಧಿಕೃತವಾಗಿ ದಾಖಲಿಸಿರುವ ಇಡೀ ಸಾಕ್ಷ್ಯವನ್ನು ಮರು ಮೆಚ್ಚಿ, ಮರು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ (ಗುಜರಾತ್‌ ರಾಜ್ಯ ವರ್ಸಸ್‌ ಬಾಲಚಂದ್ರ ಲಕ್ಷ್ಮಿಶಂಖರ್‌ ದವೆ).

ವಿಚಾರಣಾಧೀನ ನ್ಯಾಯಾಲಯವು ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದ ಸಂದರ್ಭದಲ್ಲಿ ನೀಡಿದ ಕಾರಣಗಳನ್ನು ವಿಶ್ಲೇಷಣೆ ನಡೆಸದೇ ಮತ್ತು ಅಧಿಕೃತವಾಗಿ ದಾಖಲಿಸಲಾದ ಸಾಕ್ಷ್ಯವನ್ನು ಮರು ಪರಿಶೀಲಿಸದ ಹೊರತು ಆರೋಪಿಯನ್ನು ಖುಲಾಸೆಗೊಳಿಸುವ ಹೈಕೋರ್ಟ್‌ ಆದೇಶವು ಊರ್ಜಿತವಾಗುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

“ಶಿಕ್ಷೆ ಆದೇಶದ ಮೇಲ್ಮನವಿಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ಮರುಪರಿಶೀಲಿಸಲು ಮೇಲ್ಮನವಿ ನ್ಯಾಯಾಲಯಕ್ಕೆ ಸಾಕಷ್ಟು ಅಧಿಕಾರವಿದೆ. ಮೊದಲ ಮೇಲ್ಮನವಿ ನ್ಯಾಯಾಧಿಕರಣವಾಗಿ ಹೈಕೋರ್ಟ್‌ ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ಕೂಲಂಕಷವಾಗಿ ಮರು ಪರಿಶೀಲಿಸಬೇಕು. ಖುಲಾಸೆಯ ವಿಚಾರದಲ್ಲಿ ಒಮ್ಮೆ ವಿಚಾರಣಾಧೀನ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದರೆ ಮುಗ್ಧತೆಯ ಊಹೆ ಇರಲಾರದು ಎಂಬುದನ್ನು ಮನಸ್ಸಿನಲ್ಲಿ ಇಟ್ಟಕೊಳ್ಳಬೇಕು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸದರಿ ಪ್ರಕರಣದಲ್ಲಿ ಅಪರಾಧದ ಆದೇಶದ ಕುರಿತಾದ ಮೇಲ್ಮನವಿಯನ್ನು ವಿಚಾರಣೆ ನಡೆಸುವಾಗ ಹೈಕೋರ್ಟ್‌ ಅನುಸರಿಸಬೇಕಾದ ಕಠಿಣ ಮಾರ್ಗದಲ್ಲಿ ಗುಜರಾತ್‌ ಹೈಕೋರ್ಟ್‌ ಮುಂದುವರೆದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

“ಆಕ್ಷೇಪಾರ್ಹವಾದ ತೀರ್ಪು ಮತ್ತು ಇದರ ಕುರಿತು ಹೈಕೋರ್ಟ್‌ನ ಖುಲಾಸೆ ಆದೇಶದಿಂದ ನಮಗೆ ತಿಳಿಯವುದೇನೆಂದರೆ ಪ್ರತಿವಾದಿ ಆರೋಪಿಯನ್ನು ಖುಲಾಸೆಗೊಳಿಸುವುದಕ್ಕೂ ಮುನ್ನ ಅಧಿಕೃತವಾಗಿ ದಾಖಲಾದ ಇಡೀ ಸಾಕ್ಷ್ಯವನ್ನು ಮರು ಅವಲೋಕಿಸಿಲ್ಲ. ಸಾಕ್ಷ್ಯಗಳನ್ನು ತಳ್ಳಿಹಾಕುವಾಗ ಹೈಕೋರ್ಟ್‌ ಸಾಮಾನ್ಯ ಅನಿಸಿಕೆಗಳನ್ನು ವ್ಯಕ್ತಪಡಿಸಿದೆ. ಆದರೆ, ವಿಚಾರಣಾಧೀನ ನ್ಯಾಯಾಲಯದ ತೀರ್ಪಿನ ಕುರಿತು ವಿಚಾರಣೆ ನಡೆಸುವಾಗ ದಾಖಲಾದ ಇಡೀ ಸಾಕ್ಷ್ಯವನ್ನು ಆಳವಾದ ರೀತಿಯಲ್ಲಿ ಮರು ಮೌಲಿಕವಾಗಿ ವಿಶ್ಲೇಷಣೆ ನಡೆಸಬೇಕಾದ ಕೆಲಸವನ್ನು ಹೈಕೋರ್ಟ್‌ ಮಾಡಿಲ್ಲ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಈ ಮೂಲಕ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದ್ದ ಗುಜರಾತ್‌ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌ ಸುಭಾಷ್‌ ರೆಡ್ಡಿ ಮತ್ತು ಎಂ ಆರ್‌ ಶಾ ಅವರಿದ್ದ ತ್ರಿಸದಸ್ಯ ಪೀಠವು ಬದಿಗೆ ಸರಿಸಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 7 ಮತ್ತು13(2)ರ ಅಡಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದ್ದ ಜಿಲ್ಲಾ ನ್ಯಾಯಾಲಯವು ಅಪರಾಧಿಗೆ ಐದು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿತ್ತು. ವಿಚಾರಣಾಧೀನ ನ್ಯಾಯಾಲಯದ ಈ ತೀರ್ಪನ್ನು ವಜಾಗೊಳಿಸಿದ್ದ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಕೂಲಂಕಷವಾಗಿ ವಿಚಾರಣೆ ನಡೆಸಿ, ದಾಖಲೆಯಲ್ಲಿ ಸಲ್ಲಿಸಿದ್ದ ಇಡೀ ಸಾಕ್ಷ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಬರೂಚ್‌ನ ವಿಶೇಷ ನ್ಯಾಯಾಧೀಶರ ನಡೆಯನ್ನು ಸುಪ್ರೀಂ ಕೋರ್ಟ್‌ ಪರಿಗಣಿಸಿದೆ. ಹೈಕೋರ್ಟ್, ಮೊದಲ ಮೇಲ್ಮನವಿಯಲ್ಲಿ, ವಿಚಾರಣಾಧೀನ ನ್ಯಾಯಾಲಯ ನೀಡಿದ ತಾರ್ಕಿಕತೆಯನ್ನು ಪರಿಶೀಲಿಸಿಲ್ಲ ಅಥವಾ ಸಂಪೂರ್ಣ ಸಾಕ್ಷ್ಯವನ್ನು ಮರು ಮೌಲೀಕರಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

“ಆರೋಪಿ ಖುಲಾಸೆಯಾದರೆ ಆತನ ಪರವಾಗಿ ಎರಡು ರೀತಿಯಲ್ಲಿ ಊಹೆಗಳು ವ್ಯಕ್ತವಾಗುತ್ತವೆ. ನಿರ್ದಿಷ್ಟ ನ್ಯಾಯಾಲಯದಲ್ಲಿ ಆರೋಪಿಯು ಅಪರಾಧಿ ಎಂದು ಘೋಷಿತವಾಗುವವರೆವಿಗೂ ಮತ್ತು ಮೊದಲಿಗೆ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಮೂಲಭೂತ ತತ್ವದ ಅನ್ವಯ ಆತ ಮುಗ್ಧನಾಗಿರುತ್ತಾನೆ. ಎರಡನೆಯದಾಗಿ ಆರೋಪಿಯು ನಿರಪರಾಧಿ ಎಂದು ಘೋಷಿತನಾದರೆ ವಿಚಾರಣಾಧೀನ ನ್ಯಾಯಾಲಯವು ಆತ ಮುಗ್ಧ ಎಂಬುದನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಸಾಕ್ಷ್ಯಗಳೊಂದಿಗೆ ವಿಚಾರಣೆ ನಡೆಸದ ಹೈಕೋರ್ಟ್‌ ವಿಧಾನವು ಪ್ರಾಥಮಿಕವಾಗಿ ಕಾನೂನುಬಾಹಿರವಾಗಿದ್ದು, ಇದು ನ್ಯಾಯದಾನಕ್ಕೆ ವಿರುದ್ಧದ ನಡೆಯಾಗಿದೆ ಎಂದಿರುವ ಸುಪ್ರೀಂ ಕೋರ್ಟ್‌, ಗುಜರಾತ್‌ ಹೈಕೋರ್ಟ್‌ನ ಹಿಂದಿನ ತೀರ್ಪನ್ನು ಬದಿಗೆ ಸರಿಸಿದೆ. ಅಲ್ಲದೇ ಪ್ರಕರಣವನ್ನು ಮತ್ತೊಮ್ಮೆ ಹೈಕೋರ್ಟ್‌ಗೆ ರವಾನಿಸಿದ್ದು, ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಪರಿಗಣಿಸಿರುವ ಅಂಶಗಳನ್ನು ಆಧರಿಸಿ ಆದೇಶ ಹೊರಡಿಸುವಂತೆ ಸೂಚಿಸಿದೆ.