Karnataka High Court, Byju's 
ಸುದ್ದಿಗಳು

ಇಮೇಲ್‌ ಸಂವಹನ ಸುರಕ್ಷಿತವಾಗಿ ಕಾಪಾಡಲು ಬೈಜೂಸ್‌ ಆರ್‌ಪಿ ಶೈಲೇಂದ್ರಗೆ ಹೈಕೋರ್ಟ್‌ ನಿರ್ದೇಶನ

“ಕಂಪನಿಯ ಜೊತೆಗೆ ಸಂಬಂಧಿತ ಎಲ್ಲರೂ ಇಮೇಲ್‌ ಮೂಲಕ ನಡೆಸಿರುವ ಸಂವಹನವನ್ನು ಕಾಪಿಡಬೇಕು” ಎಂದು ಆದೇಶಿಸಿ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿದ ನ್ಯಾಯಾಲಯ.

Bar & Bench

ಮೆಸರ್ಸ್‌ ಥಿಂಕ್‌ ಅಂಡ್‌ ಲರ್ನ್‌ ಪ್ರೈವೇಟ್‌ ಲಿಮಿಟೆಡ್‌ (ಟಿಎಲ್‌ಪಿಎಲ್‌) ಕಂಪನಿಯಿಂದ ಅಮಾನತುಗೊಂಡಿರುವ ನಿರ್ದೇಶಕ ಬೈಜು ರವೀಂದ್ರನ್‌ ಹಾಗೂ ಸಂಬಂಧಿತ ಎಲ್ಲರ ಇಮೇಲ್‌ಗಳನ್ನು ಸುರಕ್ಷಿತವಾಗಿ ಇರಿಸುವಂತೆ ಕಂಪನಿಯ ನೂತನ ಪರಿಹಾರ ವೃತ್ತಪರ - ರೆಸಲ್ಯೂಷನಲ್‌ ಪ್ರೊಫೆಷನಲ್‌ (ಆರ್‌ಪಿ) ಶೈಲೇಂದ್ರ ಅಜ್ಮೇರಾ ಅವರಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಬೈಜು ರವೀಂದ್ರನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ಕಂಪನಿಯ ಜೊತೆಗೆ ಸಂಬಂಧಿತ ಎಲ್ಲರೂ ಇಮೇಲ್‌ ಮೂಲಕ ನಡೆಸಿರುವ ಸಂವಹನವನ್ನು ಕಾಪಿಡಬೇಕು” ಎಂದು ಆದೇಶಿಸಿ ವಿಚಾರಣೆಯನ್ನು ಇದೇ 21ಕ್ಕೆ ಮುಂದೂಡಿತು.

ರವೀಂದ್ರನ್‌ ಪರ ವಕೀಲ ಶ್ಯಾಮ್‌ ಮೋಹನ್‌ ಅವರು “ಹಿಂದಿನ ಆರ್‌ಪಿ ಪಂಕಜ್‌ ಶ್ರೀವಾಸ್ತವ ಅವರು ಐಬಿಬಿಐ ಮಂಡಳಿಯ ಮುಂದೆ ಅಫಿಡವಿಟ್‌ ಸಲ್ಲಿಸಿ ಕೆಲವು ವಿಚಾಗಳನ್ನು ಒಪ್ಪಿಕೊಂಡಿದ್ದಾರೆ. ಈಗ ಶೈಲೇಂದ್ರ ಅ‌ಜ್ಮೇರಾ ಅವರನ್ನು ಆರ್‌ಪಿಯನ್ನಾಗಿ ನೇಮಿಸಲಾಗಿದೆ. ಏಪ್ರಿಲ್‌ 8ರಂದು ನಡೆದಿರುವ ಸಿಒಸಿ ಸಭೆಯಲ್ಲಿ ಪಂಕಜ್‌ ಶ್ರೀವಾಸ್ತವ ಅವರು ಮರು ಹೊಂದಾಣಿಕೆಯ ಸಂದರ್ಭದಲ್ಲಿ 2,392 ಇಮೇಲ್‌ಗಳು ಡಿಲೀಟ್‌ ಆಗಿವೆ ಎಂದು ತಿಳಿಸಿದ್ದಾರೆ. ಮುಂದಿನ ವಿಚಾರಣೆಗೆ ಅಗತ್ಯವಾಗಿರುವ ಇಮೇಲ್‌ಗಳನ್ನು ನಾಶಪಡಿಸಬಾರದು. ಡಿಲೀಟ್‌ ಮಾಡಲಾಗಿರುವ ಇಮೇಲ್‌ಗಳು ಎನ್‌ಸಿಎಲ್‌ಟಿಯಲ್ಲಿ ಬಾಕಿ ಇರುವ ಪ್ರಕರಣದಲ್ಲಿ ಪ್ರಾಥಮಿಕ ಸಾಕ್ಷಿಗಳಾಗಿವೆ. ತನಿಖೆಗೆ ಆ ಇಮೇಲ್‌ಗಳು ಅಗತ್ಯವಾಗಿರುವುದರಿಂದ ಅವುಗಳನ್ನು ಡಿಲೀಟ್‌ ಮಾಡಬಾರದು. ನೂತನ ಆರ್‌ಪಿ ಶೈಲೇಂದ್ರ ಅ‌ಜ್ಮೇರಾಗೆ ಆ ಇಮೇಲ್‌ಗಳನ್ನು ಕಾಪಿಡಲು ಆದೇಶಿಸಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ರಾಹುಲ್‌ ಕಾರ್ಯಪ್ಪ ಅವರು “ಹೈಗ್ರೌಂಡ್ಸ್‌ ಠಾಣೆಯಲ್ಲಿ ಬೈಜೂಸ್‌ ಮಾತೃ ಸಂಸ್ಥೆ ಥಿಂಕ್‌ ಅಂಡ್‌ ಲರ್ನ್‌ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ರಾಜೇಂದ್ರ ವೆಲ್ಲಪಲತ್‌ ಅವರು ಪಂಕಜ್‌ ಶ್ರೀವಾಸ್ತವ ಸೇರಿ ಐವರ ವಿರುದ್ಧ ಹೂಡಿರುವ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್‌ನ ಸಮನ್ವಯ ಪೀಠವು ತಡೆಯಾಜ್ಞೆ ನೀಡಿದೆ. ಹೀಗಾಗಿ, ರಾಜ್ಯ ಸರ್ಕಾರವು ತನಿಖೆ ಮುಂದುವರಿಸಲಾಗುತ್ತಿಲ್ಲ” ಎಂದರು.

ಗ್ಲಾಸ್‌ ಟ್ರಸ್ಟ್‌ ಎಲ್‌ಎಲ್‌ಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಶೈಲೇಂದ್ರ ಅ‌ಜ್ಮೇರಾಗೆ ಇಮೇಲ್‌ ಕಾಪಿಡುವಂತೆ ಸೂಚಿಸುವುದಕ್ಕೆ ತಮ್ಮ ಯಾವುದೇ ಅಭ್ಯಂತರವಿಲ್ಲ” ಎಂದರು.