High Court of Karnataka 
ಸುದ್ದಿಗಳು

ಎಚ್‌ಎಸ್‌ಆರ್‌ಪಿ ಉತ್ಪಾದಕರಿಗೆ ಒಪ್ಪಿಗೆ ನೀಡಲು ವಾಹನ ಉತ್ಪಾದಕರಿಗೆ ಕಾಲಮಿತಿ ನಿಗದಿಪಡಿಸಲು ಹೈಕೋರ್ಟ್‌ ನಿರ್ದೇಶನ

ಈ ಮಧ್ಯೆ, ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.

Bar & Bench

ಅತಿ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ - ಎಚ್‌ಎಸ್‌ಆರ್‌ಪಿ) ಉತ್ಪಾದಕರಿಗೆ ಫಲಕಗಳ ಉತ್ಪಾದನೆಗೆ ಒಪ್ಪಿಗೆ ನೀಡುವುದಕ್ಕೆ ವಾಹನ ಉತ್ಪಾದಕರಿಗೆ ಕಾಲಮಿತಿ ನಿಗದಿಪಡಿಸುವಂತೆ ಈಚೆಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆ ನೀಡುವಂತೆ ಕೋರಿ ಅತಿ ಸುರಕ್ಷಿತ ನೋಂದಣಿ ಫಲಕಗಳ ಭಾರತೀಯ ಉತ್ಪಾದಕರ ಒಕ್ಕೂಟ ಸೇರಿದಂತೆ ಅವಕಾಶ ವಂಚಿತ ಕೆಲ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

2019ರ ಏಪ್ರಿಲ್‌ 1ಕ್ಕಿಂತ ಮುಂಚಿತವಾಗಿ ನೋಂದಣಿಯಾಗಿರುವ ವಾಹನಗಳು 90 ದಿನಗಳ ಒಳಗಾಗಿ ಹೊಸ ಪರವಾನಗಿ ನೋಂದಣಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿರುವುದರಿಂದ ಒಪ್ಪಿಗೆ ಪ್ರಕ್ರಿಯೆಯು ಕಾಲಮಿತಿಯಲ್ಲಿ ನಡೆಯಬೇಕು ಎಂದು ನ್ಯಾಯಾಲಯ ಹೇಳಿದೆ.

ಮುಂದಿನ ಆದೇಶಕ್ಕೆ ಒಳಪಟ್ಟು ಪೂರ್ವಾಗ್ರಹಕ್ಕೆ ಒಳಗಾಗದೇ ರಾಜ್ಯ ಸರ್ಕಾರವು ಅಗತ್ಯ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ಪರವಾನಗಿ ಹೊಂದಿರುವ ಎಲ್ಲಾ ನೋಂದಣಿ ಫಲಕ ಉತ್ಪಾದಕರಿಗೆ ವಾಹನ ಉತ್ಪಾದಕರು ಒಪ್ಪಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ವಿಸ್ತೃತ ಪ್ರಕ್ರಿಯೆ ಪ್ರಕಟಿಸಲು ಆದೇಶಿಸಲಾಗಿದೆ. ಈ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಈ ಮಧ್ಯೆ, ರಾಜ್ಯ ಸರ್ಕಾರದ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ.

ನ್ಯಾಯಾಲಯದ ಮೆಟ್ಟಿಲೇರಿರುವ ಎಲ್ಲಾ ಅರ್ಜಿದಾರರು ಎಚ್‌ಎಸ್‌ಆರ್‌ಪಿ ಜಾರಿಯಲ್ಲಿ ಪಾಲ್ಗೊಳ್ಳಲು ವಾಹನ ಉತ್ಪಾದಕರ ಒಪ್ಪಿಗೆಯೊಂದಿಗೆ ಸಕಾರಣದ ಅವಕಾಶ ನೀಡಬೇಕು. ಇದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಲು ಮೂಲ ಉಪಕರಣ ತಯಾರಕ (ಓಇಎಂ) ಅಧಿಕೃತ ಡೀಲರ್‌ಗಳ ಮೂಲಕ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಆಗಸ್ಟ್‌ 17ರಂದು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಮೀರಿ ಅರ್ಜಿದಾರ ಸಂಸ್ಥೆಯನ್ನು ಅಧಿಸೂಚನೆಯಿಂದ ಹೊರಗಿಡಲಾಗಿದೆ. ಕೆಲವು ಪ್ರಭಾವಿ ಸಂಸ್ಥೆಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ.

ರಾಜ್ಯ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ವಾದಿಸಿದ್ದರು.