Mahesh Shetty Thimarodi 
ಸುದ್ದಿಗಳು

ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ: ಮಹೇಶ್‌ ತಿಮರೋಡಿರನ್ನು ಏ.16ರವರೆಗೆ ಗಡಿಪಾರು ಮಾಡದಂತೆ ಹೈಕೋರ್ಟ್‌ ನಿರ್ದೇಶನ

ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಆರು ತಿಂಗಳ ಕಾಲ ಗಡಿಪಾರು ಮಾಡಿ ಮಾ.13ರಂದು (ಮೂರನೇ ಬಾರಿಗೆ) ಪುತ್ತೂರು ಉಪ ವಿಭಾಗಾಧಿಕಾರಿ ಆದೇಶಿಸಿದ್ದರು. ಈ ಆದೇಶ ರದ್ದುಪಡಿಸಬೇಕು ಎಂಬುದು ತಿಮರೋಡಿ ಕೋರಿಕೆ.

Bar & Bench

ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ರಾಯಚೂರಿನ ಮಾನ್ವಿ ತಾಲ್ಲೂಕಿಗೆ ಮೂರನೇ ಬಾರಿಗೆ ಗಡಿಪಾರು ಮಾಡಿ ಹೊರಡಿಸಿರುವ ಆದೇಶವನ್ನು ಏಪ್ರಿಲ್‌ 16ರವರೆಗೆ ಅನುಷ್ಠಾನ ಮಾಡದಂತೆ ರಾಜ್ಯ ಸರ್ಕಾರ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶ ಮಾಡಿದೆ.

ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಸಂಬಂಧ ಹೋರಾಟ ನಡೆಸುತ್ತಿದ್ದ ವಿಚಾರದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಆರು ತಿಂಗಳ ಕಾಲ ಗಡಿಪಾರು ಮಾಡಿ ಮಾರ್ಚ್‌ 13ರಂದು (ಮೂರನೇ ಬಾರಿಗೆ) ಪುತ್ತೂರು ಉಪ ವಿಭಾಗಾಧಿಕಾರಿ ಆದೇಶಿಸಿದ್ದರು. ಈ ಆದೇಶ ರದ್ದುಪಡಿಸಬೇಕು ಎಂದು ಕೋರಿ ಮಹೇಶ್‌ ತಿಮರೋಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರ ಪರ ವಕೀಲರು “ಅರ್ಜಿ ವಿಚಾರಣೆಯನ್ನು ಏಪ್ರಿಲ 24 ಅಥವಾ 27ಕ್ಕೆ ಮುಂದೂಡಬೇಕು. ಅಲ್ಲಿಯವರೆಗೆ ಗಡಿಪಾರು ಆದೇಶ ಜಾರಿಗೆ ತಾತ್ಕಾಲಿಕ ತಡೆ ನೀಡಿ ಹೊರಡಿಸಿರುವ ಮಧ್ಯಂತರ ಆದೇಶ ಮುಂದುವರಿಸಬೇಕು” ಎಂದು ಕೋರಿದರು.

ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಇದು ಮೂರನೇ ಸುತ್ತಿನ ವ್ಯಾಜ್ಯವಾಗಿದೆ. ಅರ್ಜಿದಾರರನ್ನು ಗಡಿಪಾರು ಮಾಡಿ ಮೂರನೇ ಬಾರಿಗೆ ಆದೇಶ ಹೊರಡಿಸಲಾಗಿದೆ. ಪ್ರಕರಣ ಸಂಬಂಧ ಮೇಲ್ಮನವಿ ಪ್ರಾಧಿಕಾರದಲ್ಲಿ ಪರಿಹಾರ ಕಂಡುಕೊಳ್ಳಲು ಅರ್ಜಿದಾರರಿಗೆ ಅವಕಾಶವಿದೆ. ಅರ್ಜಿದಾರರು ರೌಡಿ ಶೀಟರ್‌ ಆಗಿದ್ದು, ಅವರ ವಿರುದ್ಧ 26 ಪ್ರಕರಣಗಳು ದಾಖಲಾಗಿವೆ. ಈ ಹಿಂದೆ ಗಡಿಪಾರು ವಿಚಾರವಾಗಿ ಹೈಕೋರ್ಟ್‌ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ ಆದೇಶ ಮಾಡಿದೆ” ಎಂದರು.

ಆಗ ಪೀಠವು ಅರ್ಜಿದಾರರ ವಿರುದ್ಧ ಗಡಿಪಾರು ಆದೇಶ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿ ಮಧ್ಯಂತರ ಆದೇಶ ಮಾಡಲಾಗಿದೆ. ಆ ಆದೇಶವನ್ನು ಸುಖಾಸುಮ್ಮನೆ ಮುಂದುವರಿಸಲಾಗದು. ಸುಖಾಸುಮ್ಮನೆ ವಿಚಾರಣೆಯನ್ನು ಮುಂದೂಡಿಕೆಗೆ ಕೋರಬಾರದು. ಏಪ್ರಿಲ್‌ 27ಕ್ಕೆ ಮುಂದೂಡಬೇಕಾದರೆ, ಮಧ್ಯಂತರ ಆದೇಶ ತೆರವುಗೊಳಿಸಲಾಗುವುದು ಎಂದು ಕಟ್ಟುವಾಗಿಯೇ ನುಡಿಯಿತು.

ಆಗ ಅರ್ಜಿದಾರರ ಪರ ವಕೀಲರು, ಅರ್ಜಿ ವಿಚಾರಣೆಯನ್ನು ಏಪ್ರಿಲ್‌ 16ಕ್ಕೆ ನಿಗದಿಪಡಿಸಬೇಕು ಎಂದು ಕೋರಿದರು.

ಅದಕ್ಕೆ ಒಪ್ಪಿದ ಪೀಠವು ಅರ್ಜಿ ವಿಚಾರಣೆಯ್ನು ಏಪ್ರಿಲ್‌ 16ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಅರ್ಜಿದಾರರ ವಿರುದ್ಧದ ಗಡಿಪಾರು ಆದೇಶ ಜಾರಿಗೊಳಿಸದಂತೆ ಸರ್ಕಾರಕ್ಕೆ ಸೂಚಿಸುವ ಮೂಲಕ ಮಧ್ಯಂತರ ಆದೇಶವನ್ನು ಮುಂದೂಡಿತು. ಅಲ್ಲದೆ, ಏಪ್ರಿಲ್‌ 16ರಂದು ವಾದ ಮಂಡಿಸಲು ಸಂಪೂರ್ಣವಾಗಿ ಸಿದ್ಧವಾಗಿ ಬರುವಂತೆ ಅರ್ಜಿದಾರರ ಪರ ವಕೀಲರಿಗೆ ಮೌಖಿಕವಾಗಿ ಸೂಚಿಸಿತು.ಮಹೇಶ್‌ ತಿಮರೋಡಿ

ಅರ್ಜಿದಾರರನ್ನು ಈ ಹಿಂದೆ 2025ರ ಸೆಪ್ಟೆಂಬರ್‌ 18ರಂದು ಮತ್ತು ಡಿಸೆಂಬ್‌ 16ರಂದು ಒಂಭತ್ತು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶಿಸಿದ್ದರು. ಈ ಎರಡೂ ಬಾರಿಯ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಎರಡು ಬಾರಿ ಪ್ರಕರಣವನ್ನು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸಿ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಹೊಸದಾಗಿ ಆದೇಶ ಮಾಡಲು ಸೂಚಿತ್ತು. ಮೂರನೇ ಬಾರಿಗೆ ಗಡಿಪಾರು ಮಾಡಿ ಮಾರ್ಚ್‌ 13ರಂದು ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಮಾಡಿದ್ದಾರೆ. ಅದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯನ್ನು ಮಾರ್ಚ್‌ 24ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಗಡಿಪಾರು ಆದೇಶವನ್ನು ಏಪ್ರಿಲ್‌ 10ರವರೆಗೆ ಅನುಷ್ಠಾನಗೊಳಿಸದಂತೆ ಸೂಚಿಸಿ ಮಧ್ಯಂತರ ಆದೇಶ ಮಾಡಿತ್ತು.