ರಾಯಚೂರು ಜಿಲ್ಲೆಗೆ ಮಹೇಶ್‌ ತಿಮರೋಡಿ ಗಡಿಪಾರು ಆದೇಶ ಎತ್ತಿ ಹಿಡಿದ ಹೈಕೋರ್ಟ್‌

“ಏಕಸದಸ್ಯ ಪೀಠ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ” ಎಂದು ವಿಭಾಗೀಯ ಪೀಠವು ಆದೇಶದಲ್ಲಿ ತಿಳಿಸಿದೆ.
Mahesh Shetty Thimarodi
Mahesh Shetty Thimarodi
Published on

ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಸಂಬಂಧ ಹೋರಾಟ ನಡೆಸುತ್ತಿದ್ದ ತಮ್ಮನ್ನು ಒಂಭತ್ತು ತಿಂಗಳ ಕಾಲ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿದ ಕ್ರಮ ಮರು ಪರಿಶೀಲಿಸಿ ಹೊಸದಾಗಿ ಆದೇಶ ಮಾಡಲು ಪುತ್ತೂರು ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ರದ್ದು ಕೋರಿ ಮಹೇಶ್‌ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

ಹೈಕೋರ್ಟ್‌ ಏಕಸದಸ್ಯ ಪೀಠವು 2026ರ ಜನವರಿ 31ರಂದು ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಮಹೇಶ್‌ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಜಾಗೊಳಿಸಿದೆ.

“ಏಕಸದಸ್ಯ ಪೀಠ ಆದೇಶವು ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಇಲ್ಲ” ಎಂದು ಪೀಠ ಆದೇಶದಲ್ಲಿ ತಿಳಿಸಿದೆ. ಇದೇ ವೇಳೆ ಹೈಕೋರ್ಟ್‌ ಏಕ ಸದಸ್ಯ ಪೀಠವು ಜನವರಿ 31ರಂದು ನೀಡಿದ್ದ ಆದೇಶ ಆಧಾರದ ಮೇಲೆ ಹೊಸದಾಗಿ ವಿಚಾರಣೆ ನಡೆಸಿ ಮಹೇಶ್‌ ತಿಮರೋಡಿ ಅವರನ್ನು ಗಡಿಪಾರು ಮಾಡಿ ಮೂರನೇ ಭಾರಿಗೆ ಪುತ್ತೂರು ಉಪ ವಿಭಾಗಾಧಿಕಾರಿ ಈಗಾಗಲೇ ಆದೇಶ ಮಾಡಿದ್ದಾರೆ ಎಂದು ಸರ್ಕಾರಿ ವಕೀಲರು ಪೀಠದ ಗಮನಕ್ಕೆ ತಂದರು.

ಬೆಳ್ತಂಗಡಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಸಂಬಂಧ ಹೋರಾಟ ನಡೆಸುತ್ತಿದ್ದ ವಿಚಾರದಲ್ಲ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಒಂಭತ್ತು ತಿಂಗಳ ಕಾಲ ರಾಯಚೂರಿನ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿಯು 2025ರ ಸೆಪ್ಟೆಂಬರ್‌ 18ರಂದು ಆದೇಶ ಮಾಡಿದ್ದರು.

ಈ ಆದೇಶ ಪ್ರಶ್ನಿಸಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು 2025ರ ನವೆಂಬರ್‌ 17ರಂದು ಇತ್ಯರ್ಥಪಡಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠವು ಸಕಾರಣಗಳು ನೀಡಿ ಅಗತ್ಯ ನಿಯಮಗಳನ್ನು ಪಾಲಿಸಿ 15 ದಿನಗಳಲ್ಲಿ ಹೊಸದಾಗಿ ಆದೇಶ ಮಾಡಬೇಕು ಎಂದು ಉಪ ವಿಭಾಗಾಧಿಕಾರಿಗೆ ಸೂಚಿಸಿತ್ತು. ಅದರಂತೆ ಪ್ರಕರಣವನ್ನು ಮರು ಪರಿಶೀಲಿಸಿದ್ದ ಉಪ ವಿಭಾಗಾಧಿಕಾರಿಯು ಮತ್ತೆ ಒಟ್ಟು ಒಂಭತ್ತು ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಸರಹದ್ದಿಗೆ ತಿಮರೋಡಿ ಅವರನ್ನು ಗಡಿಪಾರು ಮಾಡಿ 2025ರ ಡಿಸೆಂಬರ್‌ 16ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಮತ್ತೆ ಹೈಕೋರ್ಟ್‌ಗೆ ತಿಮರೋಡಿ ಅರ್ಜಿ ಸಲ್ಲಿಸಿದ್ದರು.

Also Read
ತಿಮರೋಡಿ ಗಡಿಪಾರು ಆದೇಶ ಬದಿಗೆ ಸರಿಸಿದ ಹೈಕೋರ್ಟ್‌; ವಿವೇಚನೆ ಬಳಸಿ ಮೂರು ವಾರಗಳಲ್ಲಿ ಆದೇಶಿಸಲು ಸೂಚನೆ

ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠವು ಅರ್ಜಿದಾರರ ಆಕ್ಷೇಪಣೆಗಳನ್ನು ಪರಿಗಣಿಸಿ ಮತ್ತು ಅವರ ಅಹವಾಲು ಆಲಿಸಿ ಮೂರು ವಾರದಲ್ಲಿ ಮತ್ತೆ ಪ್ರಕರಣದ ಕುರಿತು ಹೊಸದಾಗಿ ಆದೇಶ ಮಾಡಬೇಕು ಎಂದು ನಿರ್ದೇಶಿಸಿ 2026ರ ಜನವರಿ 31ರಂದು ಪುತ್ತೂರು ಉಪ ವಿಭಾಗಾಧಿಕಾರಿಗೆ ನಿರ್ದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದ ತಿಮರೋಡಿ, ಪ್ರಕರಣವನ್ನು ಎರಡನೇ ಬಾರಿಗೆ ಪುತ್ತೂರು ಉಪ ವಿಭಾಗಾಧಿಕಾರಿಗೆ ಹಿಂದಿರುಗಿಸುವ ಅವಶ್ಯತೆ ಇರಲಿಲ್ಲ. ಗಡಿಪಾರು ಮಾಡುವ ಮೂಲಕ ಸಂವಿಧಾನದ 21ನೇ ವಿಧಿಯಡಿ ಅರ್ಜಿದಾರರಿಗೆ ಲಭ್ಯವಿರುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಆಕ್ಷೇಪಿಸಿದ್ದರು.

Kannada Bar & Bench
kannada.barandbench.com