ಸುದ್ದಿಗಳು

ರಾಜ್ಯ ಸರ್ಕಾರದ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ಹೈಕೋರ್ಟ್‌

“ಇಂಥದ್ದೇ ವಿಚಾರ ಹೊಂದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಭಾಗೀಯ ಪೀಠದ ಮುಂದೆ ಬಾಕಿ ಇವೆ. ನ್ಯಾಯಾಂಗ ಶಿಸ್ತು, ಶ್ರೇಣಿ, ಔಚಿತ್ಯವು ಈ ನ್ಯಾಯಾಲಯವು ಪ್ರಸ್ತುತ ಅರ್ಜಿಗಳ ವಿಚಾರಣೆಯಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ” ಎಂದ ಪೀಠ.

Bar & Bench

ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯುವ ಗ್ರಾಹಕರು ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳಬೇಕು ಎನ್ನುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಬೆಂಗಳೂರು ಗ್ರಾಮಾಂತರದ ಪಿ ಎಂ ಹರೀಶ್‌ ಮತ್ತು ದೊಡ್ಡಬಳ್ಳಾಪುರದ ಎಂ ಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಜುಲೈ 22ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿತು.

“ಇಂಥದ್ದೇ ವಿಚಾರ ಹೊಂದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಭಾಗೀಯ ಪೀಠದ ಮುಂದೆ ಬಾಕಿ ಇವೆ. ನ್ಯಾಯಾಂಗ ಶಿಸ್ತು, ಶ್ರೇಣಿ ಮತ್ತು ಔಚಿತ್ಯವು ಈ ನ್ಯಾಯಾಲಯವು ಪ್ರಸ್ತುತ ಅರ್ಜಿಗಳ ವಿಚಾರಣೆಯಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿದೆ. ಹೀಗಾಗಿ, ಈ ಅರ್ಜಿಗಳು ಊರ್ಜಿತವಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಮುಂದುವರಿದು, “ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಅರ್ಜಿದಾರರು ಹೊಸ ಮೀಟರ್‌ ಹೊಂದುತ್ತಿಲ್ಲವಾದ್ದರಿಂದ ಅವರನ್ನು ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳುವಂತೆ ಒತ್ತಾಯಿಸುವುದಿಲ್ಲ ಎಂದು ನೀಡಿದ್ದ ಹಿಂದಿನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿತು.

ಅರ್ಜಿದಾರರ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಕೆ ಪ್ರಭುಲಿಂಗ ನಾವದಗಿ ಅವರು “ಸ್ಮಾರ್ಟ್‌ ಮೀಟರ್‌ ದೇಶದ ಬೇರೆಬೇರೆ ಕಡೆ ₹950 ರೂಪಾಯಿ ಇದೆ. ಆದರೆ, ನಮ್ಮಲ್ಲಿ ₹8,000ಕ್ಕೂ ಅಧಿಕ ಹಣ ಸಂಗ್ರಹಿಸಲಾಗುತ್ತಿದೆ” ಎಂದು ಆಕ್ಷೇಪಿಸಿದ್ದರು.

ಅರ್ಜಿದಾರರ ಪರ ವಕೀಲೆ ಲಕ್ಷ್ಮಿ ಐಯ್ಯಂಗಾರ್‌ ಅವರು “ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯ ಮಾಡಿ ಹೊರಡಿಸಿರುವ ಆದೇಶ ಕೆಇಆರ್‌ಸಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಮೇಲಾಗಿ ಸ್ಮಾರ್ಟ್‌ ಮೀಟರ್‌ ದರವೂ ಹೆಚ್ಚಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ. ಹೊಸದಾಗಿ ವಿದ್ಯುತ್‌ ಸಂರ್ಪಕ ಪಡೆಯಲು ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಬೇಕು ಎಂದು 2025ರ ಫೆಬ್ರವರಿ 13ರಂದು ಹೊರಡಿಸಿರುವ ಮಾರ್ಗಸೂಚಿ ಹಾಗೂ ಆ ಕುರಿತು ಸೂಚಿಸಿ ಅರ್ಜಿದಾರರಿಗೆ 2025ರ ಏಪ್ರಿಲ್‌ 25ರಂದು ಬೆಸ್ಕಾಂ ನೀಡಿರುವ ಪತ್ರವನ್ನು ರದ್ದುಪಡಿಸಬೇಕು” ಎಂದು ಕೋರಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟ ಅವರು “ಸ್ಮಾರ್ಟ್‌ ಮೀಟರ್‌ ಅಳವಡಿಕೆ ವಿಚಾರದಲ್ಲಿ ಕೆಇಆರ್‌ಸಿ ಮಾರ್ಗಸೂಚಿಗೆ ಅನುಗುಣವಾಗಿಯೇ ರಾಜ್ಯ ಸರ್ಕಾರ ಹಾಗೂ ಬೆಸ್ಕಾಂ ನಡೆದುಕೊಳ್ಳುತ್ತಿವೆ. ಹೊಸದಾಗಿ ಯಾರು ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆಯೋ ಅವರಿಗೆ ಮಾತ್ರವೇ ಪರಿಪಾಲನಾ ನಿರ್ದೇಶನಗಳು ಅನ್ವಯವಾಗಲಿವೆ. ಅಷ್ಟಕ್ಕೂ ಇದು ಪೋಸ್ಟ್‌ ಪೇಯ್ಡ್‌ ಆಗಿರುತ್ತದೆ” ಎಂದು ಸಮಜಾಯಿಷಿ ನೀಡಿದ್ದರು.

ಅರ್ಜಿಯಲ್ಲಿ ಕೋರಿಕೆ ಏನು: ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ (ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್) ನಿಯಮಗಳು-2024ರ ಅನ್ವಯ ಎಲ್ಲ ವರ್ಗದ ಗ್ರಾಹಕರೂ ಪ್ರೀ ಪೇಯ್ಡ್‌ ಮೀಟರ್‌ಗಳನ್ನು ಪಡೆಯಲು ಅವಕಾಶ ಇದೆ. ಈ ಕ್ರಮ 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಯಮ ರೂಪಿಸಲಾಗಿದೆ. ಈ ಪ್ರಕ್ರಿಯೆ ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಎಂದು ತಿಳಿಸಲಾಗಿದೆ. ನಮ್ಮ ಸಂಪರ್ಕ ಶಾಶ್ವತವಾದದ್ದು. ಆದರೆ, ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರವೊಂದನ್ನು ನೀಡಿದ್ದಾರೆ. ಈ ಮೀಟರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಹೊರ ಭಾಗದ ಏಜೆನ್ಸಿಗಳ ಮೂಲಕ ₹2 ಸಾವಿರ ಬೆಲೆಯ ಮೀಟರ್‌ ಅನ್ನು ₹10 ಸಾವಿರಕ್ಕೆ ಖರೀದಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.