High Court of Karnataka 
ಸುದ್ದಿಗಳು

5 ಮತ್ತು 8ನೇ ತರಗತಿ ಮಂಡಳಿ ಪರೀಕ್ಷೆ ಮುಂದೂಡಲು ಮತ್ತೊಮ್ಮೆ ನಿರಾಕರಿಸಿದ ಹೈಕೋರ್ಟ್‌

ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ಇದೆ. ಆದ್ದರಿಂದ, ಪರೀಕ್ಷೆ ಮುಂದೂಡಬೇಕೆಂಬ ಮನವಿ ಸಂಬಂಧ ಹೈಕೋರ್ಟ್ ಯಾವುದೇ ತೀರ್ಮಾನ ಕೈಗೊಳ್ಳಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಏನು ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದ ಹೈಕೋರ್ಟ್‌.

Bar & Bench

ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಇದೇ 27ರಿಂದ ನಡೆಯಲಿರುವ ರಾಜ್ಯ ಮಟ್ಟದ ಮೌಲ್ಯಾಂಕನ (ಬೋರ್ಡ್) ಪರೀಕ್ಷೆಗಳನ್ನು ಮುಂದೂಡಲು ಕರ್ನಾಟಕ ಹೈಕೋರ್ಟ್ ಗುರುವಾರ ಮತ್ತೊಮ್ಮೆ ನಿರಾಕರಿಸಿದೆ.

ಮಂಡಳಿ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಪ್ರತಿವಾದಿಗಳಲ್ಲೊಬ್ಬರಾದ ಕರ್ನಾಟಕ ರಾಜ್ಯ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟದ (ಕುಸ್ಮಾ) ಪರ ವಕೀಲ ಕೆ ವಿ ಧನಂಜಯ ಅವರು ಮೆಮೊ ಸಲ್ಲಿಸಿ, 5 ಮತ್ತು 8ನೇ ತರಗತಿಗಳಿಗೆ ಮಾರ್ಚ್‌ 27ರಿಂದ ಮಂಡಳಿ ಪರೀಕ್ಷೆ ಆರಂಭವಾಗಲಿವೆ. ಪರೀಕ್ಷೆ ನಡೆಸಲು ಸರ್ಕಾರಕ್ಕೆ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಆ ಅರ್ಜಿಗಳನ್ನೂ ಮಾರ್ಚ್‌ 27ರಂದೇ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಪರೀಕ್ಷೆ ಹಾಗೂ ಸುಪ್ರೀಂ ಕೋರ್ಟ್ ವಿಚಾರಣೆ ಒಂದೇ ದಿನ ಇರುವುದರಿಂದ ಪರೀಕ್ಷೆಗಳನ್ನು 1 ವಾರದ ಮಟ್ಟಿಗೆ ಮುಂದೂಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪೀಠವು ಸದ್ಯ ಪ್ರಕರಣ ಸುಪ್ರೀಂ ಕೋರ್ಟ್ ಮುಂದೆ ಇದೆ. ಆದ್ದರಿಂದ, ಪರೀಕ್ಷೆ ಮುಂದೂಡಬೇಕೆಂಬ ಮನವಿ ಸಂಬಂಧ ಹೈಕೋರ್ಟ್ ಯಾವುದೇ ತೀರ್ಮಾನ ಕೈಗೊಳ್ಳಲು ಅವಕಾಶವಿಲ್ಲ. ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿ, ಕುಸ್ಮಾ ಮನವಿ ಪುರಸ್ಕರಿಸಲು ನಿರಾಕರಿಸಿತು.

ಮಾರ್ಚ್‌ 27ರಿಂದ ನಿಗದಿಯಾಗಿರುವ ಪರೀಕ್ಷೆ ಮುಂದೂಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಖಾಸಗಿ ಅನುದಾನರಹಿತ ಶಾಲೆಗಳು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಾರ್ಚ್‌ 21ರಂದು ಮನವಿ ಮಾಡಿದ್ದವು. ಆದರೆ, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ ಎಂಬ ಕಾರಣಕ್ಕೆ ಮನವಿ ಪುರಸ್ಕರಿಸಲು ವಿಭಾಗೀಯ ಪೀಠವು ನಿರಾಕರಿಸಿತ್ತು. ಇದೀಗ, ಎರಡನೇ ಬಾರಿಗೆ ಪರೀಕ್ಷೆ ಮುಂದೂಡಲು ಹೈಕೋರ್ಟ್ ನಿರಾಕರಿಸಿದಂತಾಗಿದೆ.