ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 27ರಿಂದ ಮಂಡಳಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿರುವುದನ್ನು ಮುಂದೂಡಲು ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರಾಕರಿಸಿತು.
ಅನುದಾನರಹಿತ ಖಾಸಗಿ ಶಾಲೆಗಳ ಪರವಾಗಿ ಹಾಜರಾಗಿದ್ದ ವಕೀಲ ಎ ವೇಲನ್ ಅವರು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಕರಣದ ಕುರಿತು ಪ್ರಸ್ತಾಪಿಸಿದರು. ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ವಜಾ ಮಾಡಿತ್ತು. ಈ ಆದೇಶದಕ್ಕೆ ವಿಭಾಗೀಯ ಪೀಠವು ತಡೆ ನೀಡಿದೆ. ಈ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನು ಮಾರ್ಚ್ 27ರಂದು ಸರ್ವೋಚ್ಚ ನ್ಯಾಯಾಲಯ ನಡೆಸಲಿದೆ ಎಂದು ವೇಲನ್ ಪೀಠಕ್ಕೆ ವಿವರಿಸಿದರು.
ಆಗ ಸಿಜೆ ವರಾಳೆ ಅವರು “ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿರುವಾಗ ನೀವು ಇಲ್ಲಿ ಪ್ರಕರಣವನ್ನು ಹೇಗೆ ಪ್ರಸ್ತಾಪಿಸುತ್ತೀರಿ. ಅದಾಗ್ಯೂ, ಆದೇಶ ಮಾಡಿದ ವಿಭಾಗೀಯ ಪೀಠದಲ್ಲಿ ನಾನಿರಲಿಲ್ಲ. ನೀವು ರಿಜಿಸ್ಟ್ರಿ ಸಂಪರ್ಕಿಸಬೇಕು” ಎಂದರು.
ಆಗ ವೇಲನ್ ಅವರು “ಪ್ರಕರಣದ ಅರ್ಹತೆಯ ಮೇಲೆ ಕೋರುತ್ತಿಲ್ಲ. ವಿಚಾರಣೆಯನ್ನು ಮುಂದೂಡಬೇಕು ಎಂದಷ್ಟೇ ಕೋರುತ್ತಿದ್ದೇನೆ” ಎಂದರು. ಆಗ ಸಿಜೆ ಅವರು “ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಆಲಿಸುತ್ತಿದೆ ಎಂದಾದರೆ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಿ” ಎಂದರು. ಅಲ್ಲದೇ, “ದಯಮಾಡಿ ಪ್ರಕರಣವನ್ನು ಪ್ರಸ್ತಾಪಿಸಬೇಡಿ. ಅದು ಉತ್ತಮ ಅಭಿರುಚಿಯಿಂದ ಕೂಡಿಲ್ಲ” ಎಂದರು.
ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿರುವುದನ್ನು ಪ್ರಶ್ನಿಸಿ ಖಾಸಗಿ ಅನುದಾನರಹಿತ ಶಾಲೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿವೆ.