Sushil Panduranga Mantri and Karnataka HC 
ಸುದ್ದಿಗಳು

ಮಂತ್ರಿ ಡೆವಲಪರ್ಸ್‌ನ ಸುಶೀಲ್‌, ಸ್ನೇಹಲ್‌, ಪ್ರತೀಕ್‌ ಮಂತ್ರಿ ವಿರುದ್ಧದ ಎಲ್‌ಒಸಿ ಅಮಾನತು ಮಾಡಿ ಹೈಕೋರ್ಟ್‌ ಆದೇಶ

ಬ್ಯುರೊ ಆಫ್‌ ಇಮಿಗ್ರೇಶನ್‌ ಹೊರಡಿಸಿರುವ ಲುಕ್‌ಔಟ್‌ ಸುತ್ತೋಲೆ ಪ್ರಶ್ನಿಸಿ ರಿಯಾಲ್ಟರ್‌ ಸುಶೀಲ್‌ ಮಂತ್ರಿ, ಪತ್ನಿ ಸ್ನೇಹಲ್, ಪುತ್ರ ಪ್ರತೀಕ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Bar & Bench

ಮಂತ್ರಿ ಡೆವಲಪರ್ಸ್‌ ಮುಖ್ಯಸ್ಥ ಸುಶೀಲ್‌ ಮಂತ್ರಿ, ಪತ್ನಿ ಸ್ನೇಹಲ್‌ ಹಾಗೂ ಪುತ್ರ ಪ್ರತೀಕ್‌ ವಿರುದ್ಧದ ಲುಕ್‌ಔಟ್‌ ಸುತ್ತೋಲೆಯನ್ನು ಅಮಾನತಿನಲ್ಲಿಟ್ಟು ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ. ಹೀಗಾಗಿ, ವಿದೇಶಕ್ಕೆ ತೆರಳಲು ಮಂತ್ರಿ ಕುಟುಂಬಕ್ಕೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ.

ಕೇಂದ್ರ ಗೃಹ ಇಲಾಖೆಯ ಬ್ಯುರೊ ಆಫ್‌ ಇಮಿಗ್ರೇಶನ್‌ ಹೊರಡಿಸಿರುವ ಲುಕ್‌ಔಟ್‌ ಸುತ್ತೋಲೆ ಪ್ರಶ್ನಿಸಿ ರಿಯಾಲ್ಟರ್‌ ಸುಶೀಲ್‌ ಮಂತ್ರಿ, ಪತ್ನಿ ಸ್ನೇಹಲ್ ಮತ್ತು ಪುತ್ರ ಪ್ರತೀಕ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿತು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಎಸ್‌ ಮಹೇಶ್‌ ಅವರು “ಸುಶೀಲ್‌ ಮಂತ್ರಿ ಕುಟುಂಬದ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಒಟ್ಟು ಹತ್ತು ಕ್ರಿಮಿನಲ್‌ ಪ್ರಕರಣ ದಾಖಲಾಗಿದ್ದು, ಎಲ್ಲ ಪ್ರಕರಣಗಳಿಗೂ ಹೈಕೋರ್ಟ್‌ ತಡೆಯಾಜ್ಞೆ ಆದೇಶ ಮಾಡಿದೆ. ಹೀಗಾಗಿ, ಅರ್ಜಿದಾರರ ವಿರುದ್ಧದ ಎಲ್‌ಒಸಿ ಹಿಂಪಡೆಯಬೇಕು” ಎಂದು ಕೋರಿದರು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರದೀಪ್‌ ಅವರು “ಅರ್ಜಿದಾರರ ವಿರುದ್ಧ ಹಣಕಾಸು ದುರ್ಬಳಕೆಗೆ ಸಂಬಂಧಿಸಿದಂತೆ ಹಲವು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, ವಿದೇಶಕ್ಕೆ ತೆರಳಿದರೆ ವಾಪಸಾಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಎಲ್‌ಒಸಿ ಹೊರಡಿಸಲು ಮನವಿ ಮಾಡಲಾಗಿತ್ತು. ಈಗ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳಿಗೆ ಹೈಕೋರ್ಟ್‌ ತಡೆ ವಿಧಿಸಿದೆ” ಎಂದರು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು “ರಾಜ್ಯ ಸರ್ಕಾರದ ನಿರ್ಧಾರ ಆಧರಿಸಿ ಎಲ್‌ಒಸಿ ಹಿಂಪಡೆಯಲಾಗುವುದು” ಎಂದರು.

ಎಲ್ಲರ ವಾದ ಆಲಿಸಿದ ನ್ಯಾಯಾಲಯವು “ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳ ಅಂತಿಮ ಆದೇಶಕ್ಕೆ ಒಳಪಟ್ಟು ಎಲ್‌ಒಸಿಯನ್ನು ಅಮಾನತಿನಲ್ಲಿರಿಸಲಾಗಿದೆ. ಅರ್ಜಿಗಳನ್ನು ಪುರಸ್ಕರಿಸಲಾಗಿದೆ” ಎಂದು ಆದೇಶಿಸಿತು.

ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ನಿಗದಿತ ವೇಳೆಗೆ ಫ್ಲ್ಯಾಟ್‌ಗಳನ್ನು ಹಸ್ತಾಂತರಿಸದ ಹಿನ್ನೆಲೆಯಲ್ಲಿ ಸುಶೀಲ್‌ ಮಂತ್ರಿ ಕುಟುಂಬದ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಹತ್ತು ಮತ್ತು ಸುಬ್ರಹ್ಮಣ್ಯಪುರಂ ಠಾಣೆಯಲ್ಲಿ ಒಂದು ಎಫ್‌ಐಆರ್‌ ದಾಖಲಾಗಿತ್ತು. ಸುಬ್ರಹ್ಮಣ್ಯ ಪುರಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈಚೆಗೆ ಹೈಕೋರ್ಟ್‌ ವಜಾ ಮಾಡಿತ್ತು.