Bitcoin Representative Image
ಸುದ್ದಿಗಳು

ಹ್ಯಾಕರ್ ಶ್ರೀಕಿ ಸಹೋದರ ಸುದರ್ಶನ್‌ ವಿರುದ್ಧ ಇಡಿ ಸಮನ್ಸ್‌, ಎಲ್‌ಒಸಿ ರದ್ದುಪಡಿಸಿದ ಹೈಕೋರ್ಟ್‌

ತನ್ನ ವಿರುದ್ಧ ಪಿಎಂಎಲ್‌ಎ ಪ್ರಕ್ರಿಯೆ ಮತ್ತು ಎಲ್‌ಒಸಿ ರದ್ದುಪಡಿಸುವಂತೆ ಕೋರಿ ಸುದರ್ಶನ್‌ ರಮೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

Bar & Bench

ಬಿಟ್‌ಕಾಯಿನ್‌ ಹ್ಯಾಕಿಂಗ್ ಹಗರಣದ ರೂವಾರಿ ಎನ್ನಲಾದ ಶ್ರೀಕಿ ಅಲಿಯಾಸ್‌ ಶ್ರೀ ಕೃಷ್ಣನ ಸಹೋದರ ಸುದರ್ಶನ್‌ ರಮೇಶ್‌ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಆರಂಭಿಸಿದ್ದ ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ತನ್ನ ವಿರುದ್ಧ ಪಿಎಂಎಲ್‌ಎ ಪ್ರಕ್ರಿಯೆ ಮತ್ತು ಎಲ್‌ಒಸಿ ರದ್ದುಪಡಿಸುವಂತೆ ಕೋರಿ ಸುದರ್ಶನ್‌ ರಮೇಶ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಅಲ್ಲದೇ, ಕೇಂದ್ರ ಗೃಹ ಇಲಾಖೆಯ ಬ್ಯೂರೋ ಆಫ್‌ ಇಮಿಗ್ರೇಷನ್‌ ಸುದರ್ಶನ್‌ ವಿರುದ್ಧ ಹೊರಡಿಸಿರುವ ಲುಕ್‌ಔಟ್‌ ಸುತ್ತೋಲೆಯನ್ನು (ಎಲ್‌ಒಸಿ) ಅನುಷ್ಠಾನಗೊಳಿಸಲಾಗದು ಹಾಗೂ ಅವರ ಪಾಸ್‌ಪೋರ್ಟ್‌ ಮೇಲೆ ರದ್ದುಪಡಿಸಲಾಗಿದೆ ಎಂದು ನೀಡಲಾಗಿರುವ ಹಿಂಬರಹವನ್ನು ಬ್ಯುರೊ ಆಫ್‌ ಇಮಿಗ್ರೇಷನ್‌ ತೆಗೆದು ಹಾಕಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ತನಿಖೆಯ ಸಂದರ್ಭದಲ್ಲಿ ಆಕ್ಷೇಪಾರ್ಹವಾದ ವಿಚಾರಗಳು ಕಂಡುಬಂದಲ್ಲಿ ಜಾರಿ ನಿರ್ದೇಶನಾಲಯವು ಸಮನ್ಸ್‌ ನೀಡಿದರೆ ಅರ್ಜಿದಾರರು ಹಾಜರಾಗಬೇಕು. ಇಮೇಲ್‌ ಐಡಿ, ಸಂಪರ್ಕ ವಿವರ ಮತ್ತು ಶಾಶ್ವತ ವಸತಿ ವಿಳಾಸವನ್ನು ಅರ್ಜಿದಾರರು ನೀಡಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅನುಮಾನದ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಎಲ್‌ಒಸಿ ಮುಂದುವರಿಯುವುದು ಕಾನೂನು ದುರ್ಬಳಕೆಯಾಗಲಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಸುದರ್ಶನ್‌ ರಮೇಶ್‌ ಅವರು 12.08.2021ರಂದು ನೆದರ್‌ಲ್ಯಾಂಡ್‌ನಿಂದ ಭಾರತಕ್ಕೆ ಬಂದಿದ್ದರು. ಸುದರ್ಶನ್‌ಗೆ ಪಿಎಂಎಲ್‌ಎ ಸೆಕ್ಷನ್‌ 50ರ ಅಡಿ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ 29.12.2021, 30.12.2021 ಮತ್ತು 01.01.2022ರಂದು ವಿಚಾರಣೆಗೆ ಹಾಜರಾಗಿದ್ದರು. ಅಂದು ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು.

ತದನಂತರ 13.01.2022ರಂದು ನೆದರ್‌ಲ್ಯಾಂಡ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಸುದರ್ಶನ್‌ ತೆರಳಿದ್ದಾಗ ಇಮಿಗ್ರೇಷನ್‌ ಅಧಿಕಾರಿಗಳು ಅವರನ್ನು ತಡೆದಿದ್ದರು. ಅವರ ಪಾಸ್‌ಪೋರ್ಟ್‌ಗೆ ಕ್ಯಾನ್ಸಲ್‌ ಹಿಂಬರಹ ನೀಡಲಾಗಿತ್ತು. ಆದರೆ, ಎಲ್‌ಒಸಿ ಪ್ರತಿಯನ್ನು ಅರ್ಜಿದಾರರಿಗೆ ನೀಡಿರಲಿಲ್ಲ. ಅಲ್ಲದೆ, ಪಿಎಂಎಲ್‌ಎ ಅಡಿ ಸಮನ್ಸ್‌ ಜಾರಿ ಮಾಡಲಾಗಿತ್ತು. ಈಗ ಎಲ್‌ಒಸಿ ಮತ್ತು ಪಿಎಂಎಲ್‌ಎ ಅಡಿ ನೀಡಲಾಗಿದ್ದ ಸಮನ್ಸ್‌ ಅನ್ನು ನ್ಯಾಯಾಲಯ ರದ್ದುಪಡಿಸಿದೆ.

ಅರ್ಜಿದಾರ ಸುದರ್ಶನ್‌ ಪರವಾಗಿ ಹಿರಿಯ ವಕೀಲ ಸಂದೇಶ್‌ ಚೌಟ ವಾದಿಸಿದ್ದರು. ವಕೀಲ ಎನ್‌ ಗೌರವ್‌ ವಕಾಲತ್ತು ವಹಿಸಿದ್ದರು. ಪ್ರತಿವಾದಿಗಳ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಸುಂದರೇಶನ್‌, ವಕೀಲ ಮಧುಕರ್‌ ದೇಶಪಾಂಡೆ, ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ವಾದಿಸಿದ್ದರು.

Sudershan Ramesh Vs UoI.pdf
Preview