ಕರ್ನಾಟಕ ಹೈಕೋರ್ಟ್ ಆಡಳಿತಾತ್ಮಕ ನ್ಯಾಯಮೂರ್ತಿಗಳು ಮತ್ತು ರಿಜಿಸ್ಟ್ರಾರ್ ಜನರಲ್ ಅವರ ಮಧ್ಯಪ್ರವೇಶದಿಂದಾಗಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ಹಾಕಲಾಗಿದ್ದ ʼನಿರ್ಬಂಧಿತ ಪ್ರವೇಶʼ ಫಲಕ ವಿವಾದ ಬಗೆಹರಿದಿದೆ.
ಸಾರ್ವಜನಿಕ ಸ್ಥಳವಾದ ಮುಖ್ಯ ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಂತೆಯೇ, ನ್ಯಾಯವಾದಿಗಳಿಗೆ ಕೂಡ ಪ್ರವೇಶಾವಕಾಶ ಇಲ್ಲದಿರುವುದಕ್ಕೆ ಮಂಗಳೂರು ವಕೀಲರ ಸಂಘ ಇಂದು ಬೆಳಿಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಸಮಸ್ಯೆ ಬಗ್ಗೆ ʼಬಾರ್ ಅಂಡ್ ಬೆಂಚ್ʼ ಜೊತೆ ಮಾತನಾಡಿದ್ದ ಸಂಘದ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ಅವರು “ಶನಿವಾರ ಫಲಕ ವಕೀಲರ ಗಮನಕ್ಕೆ ಬಂದ ವೇಳೆ ಅಸಮಾಧಾನ ವ್ಯಕ್ತವಾಗಿತ್ತು. ಸಂಘದ ತುರ್ತು ಸಮಿತಿ ನ್ಯಾಯಾಧೀಶ ರವೀಂದ್ರ ಎಂ ಜೋಷಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಆದರೆ ಅದು ಫಲಪ್ರದವಾಗದೇ ಇದ್ದುದರಿಂದ ಮಂಗಳವಾರ ಸಂಘದ ಸರ್ವ ಸದಸ್ಯರ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದರು.
ಆದರೆ ಸಂಜೆಯ ಹೊತ್ತಿಗೆ ವಿವಾದಕ್ಕೆ ತೆರೆ ಬಿದ್ದಿದೆ. “ರಿಜಿಸ್ಟ್ರಾರ್ ಜನರಲ್ ಅವರು ನ್ಯಾಯಾಧೀಶರು ಮತ್ತು ವಕೀಲ ವರ್ಗದ ನಡುವಣ ಸಂಘರ್ಷಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದ್ದಾರೆ. ಫಲಕ ಬದಲಾವಣೆ ಮಾಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ. ವಕೀಲರು ಮುಖ್ಯದ್ವಾರ ಬಳಕೆಯನ್ನು ಮುಂದುವರೆಸಬಹುದು” ಎಂದು ಸಂಘದ ಮಾಧ್ಯಮ ಪ್ರಕಟಣೆ ತಿಳಿಸಿದೆ.