Lamborghini 
ಸುದ್ದಿಗಳು

ಲ್ಯಾಂಬೊರ್ಗಿನಿ ಕಾರು ದಾಖಲೆ ತಿರುಚಿ, ತೆರಿಗೆ ವಂಚಿಸಿದ ಆರೋಪ: ಮಾಲೀಕರ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಡೀಲರ್‌ನಿಂದ ಕಾರನ್ನು ಅರ್ಜಿದಾರರು ಖರೀದಿಸಿದ್ದಾರೆ. ₹1 ಕೋಟಿ ಜಿಎಸ್‌ಟಿ ಹಾಗೂ ₹60 ಲಕ್ಷ ರಸ್ತೆ ತೆರಿಗೆ ಪಾವತಿಸಿದ್ಧಾರೆ. ಬೆಂಗಳೂರು ಪೂರ್ವ ಆರ್‌ಟಿಒ ಕಚೇರಿಯಲ್ಲಿ ಕಾರು ನೋಂದಣಿಯಾಗಿದೆ ಮತ್ತು ನಂಬರ್‌ ನೀಡಲಾಗಿದೆ ಎಂದು ವಾದಿಸಿದ ಅರಬಟ್ಟಿ.

Bar & Bench

ದಾಖಲೆ ತಿರುಚಿ ನೋಂದಣಿ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ವಂಚಿಸಿದ ಆರೋಪದ ಮೇಲೆ ಲ್ಯಾಂಬೊರ್ಗಿನಿ ಕಾರೊಂದರ ಮಾಲೀಕರ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಪ್ರಕರಣ ಸಂಬಂಧ ನಕಲಿ ಮತ್ತು ವಂಚನೆ ಆರೋಪದ ಮೇಲೆ ತಮ್ಮ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಹಾಯ್‌ ಕಾರ್‌ ಕೇರ್‌ ಮುಖ್ಯಸ್ಥರೂ ಆದ ಲ್ಯಾಂಬೊರ್ಗಿನಿ ಕಾರ್‌ ಮಾಲೀಕ ಜೆ ರಾಮಕೃಷ್ಣಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರಕರಣ ಕುರಿತು ಹಿರಿಯ ಮೋಟಾರು ವಾಹನ ಇನ್ಸ್‌ಪೆಕ್ಟರ್‌ ಎನ್‌ ರಂಜಿತ್‌ ಅವರು ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅವರೇ ರಾಮಕೃಷ್ಣಯ್ಯ ಅವರ ಮನೆಗೆ ಹೋಗಿ ಕಾರು ಜಫ್ತಿ ಮಾಡಿ, ಅದನ್ನು ಟೋಯಿಂಗ್‌ ಮಾಡಿಕೊಂಡು ಹೋಗಿದ್ದಾರೆ. ಮೋಟಾರು ವಾಹನ ಇನ್ಸ್‌ಪೆಕ್ಟರ್‌ಗೆ ಮನೆಗೆ ಹೋಗಿ ಕಾರನ್ನು ಜಫ್ತಿ ಮಾಡುವ ಅಧಿಕಾರ ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಅರ್ಜಿದಾರರ ವಿರುದ್ಧದ ತನಿಖೆಗೆ ತಡೆ ನೀಡಿತು.

ಅಲ್ಲದೇ, ಕಾರು ತಮ್ಮ ವಶಕ್ಕೆ ನೀಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿದಾರರು ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿ ಸಲ್ಲಿಕೆಯಾದರೆ, ಅದನ್ನು ಕಾನೂನು ಪ್ರಕಾರ ಇತ್ಯರ್ಥಪಡಿಸಬೇಕು ಎಂದು ನಿರ್ದೇಶಿಸಿದೆ.

ಇನ್ಸ್‌ಪೆಕ್ಟರ್‌ಗೆ ಹಿಗ್ಗಾಮುಗ್ಗಾ ತರಾಟೆ: ಫೆಬ್ರವರಿ 7ರಂದು ಅರ್ಜಿದಾರರ ಮನೆಗೆ ಹೋಗಿ ಕಾರು ಜಫ್ತಿ ಮಾಡಿ ತೆಗೆದುಕೊಂಡು ಹೋಗಲು ಹಿರಿಯ ಮೋಟಾರು ಇನ್ಸ್‌ಪೆಕ್ಟರ್‌ ಅಧಿಕಾರ ಎಲ್ಲಿದೆ? ಕಾರು ತೆಗೆದುಕೊಂಡು ಹೋಗುವ ಅಧಿಕಾರ ಇನ್ಸ್‌ಪೆಕ್ಟರ್‌ಗೆ ಇಲ್ಲವಾದರೆ, ನಿಜವಾಗಿಯೂ ಅವರು ಕಠಿಣ ಕ್ರಮ ಎದುರಿಸುತ್ತಾರೆ. ಅವರನ್ನು ಸೇವೆಯಿಂದ ಅಮಾನತುಪಡಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗುವುದು ಎಂದು ಪೀಠ ಇದೇ ವೇಳೆ ಎಚ್ಚರಿಕೆ ನೀಡಿದೆ.

ಆರ್‌ಟಿಒ ಅಧಿಕಾರಿಗಳಿಂದ ಅಕ್ರಮ: ಇನ್ನು ವಿಚಾರಣೆ ವೇಳೆ ಕಾರು 2022ರಲ್ಲಿಯೇ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿತ್ತು. ಆದರೆ, ಆ ಹಳೆಯ ಮಾಹಿತಿಯನ್ನು ಆರ್‌ಟಿಒ ಅಧಿಕಾರಿಗಳೇ ತೆಗೆದುಹಾಕಿ, ಹೊಸ ಮಾಹಿತಿ ತುಂಬಿದ್ದಾರೆ ಎಂದು ವಕೀಲರು ವಿವರಿಸಿದರು.

ಅದಕ್ಕೆ ಆಘಾತ ವ್ಯಕ್ತಪಡಿಸಿದ ಪೀಠವು “ಏಕೆ ಈ ಪ್ರಕರಣದಲ್ಲಿ ಆರ್‌ಟಿಒ ಅಧಿಕಾರಿಗಳು ಆರೋಪಿಗಳನ್ನಾಗಿ ಮಾಡಿಲ್ಲ. ಅವರ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ. ಆರ್‌ಇಟಿ ಕಚೇರಿಯಲ್ಲಿ ಇಂತಹ ಅಕ್ರಮಗಳೇ ನಡೆಯುತ್ತದೆ. ಈಗಾಲಾದರೂ ಆನ್‌ಲೈನ್‌ ಹಾಗೂ ಕಂಪ್ಯೂಟರ್‌ ಮೂಲಕ ಕೆಲಸಗಳು ನಡೆಯುವುದರಿಂದ ಕೊಂಚಮಟ್ಟಿಗೆ ಅಕ್ರಮಗಳು ಕಡಿಮೆಯಾಗಿವೆ. ಈ ಹಿಂದೆ ಅವ್ಯವಹಾರಗಳು ಹೆಚ್ಚಾಗಿತ್ತು. ಪ್ರಕರಣದಲ್ಲಿ ತಪ್ಪಿತಸ್ಥ ಆರ್‌ಟಿಒ ಅಧಿಕಾರಿಗಳನ್ನು ಸೇರಿಸಿ, ಅವರ ವಿರುದ್ಧವೂ ತನಿಖೆ/ವಿಚಾರಣೆಗೆ ಆದೇಶಿಸಲಾಗುವುದು” ಎಂದು ತಿಳಿಸಿದರು.

ಕಾರು ಮಾಲೀಕರ ಪರ ವಕೀಲ ವೆಂಕಟೇಶ್‌ ಅರಬಟ್ಟಿ ಅವರು “ಡೀಲರ್‌ನಿಂದ ಕಾರನ್ನು ಅರ್ಜಿದಾರರು ಖರೀದಿಸಿದ್ದಾರೆ. ಒಂದು ಕೋಟಿ ರೂಪಾಯಿ ಜಿಎಸ್‌ಟಿ ಮತ್ತು ₹60 ಲಕ್ಷ ರಸ್ತೆ ತೆರಿಗೆ ಪಾವತಿಸಿದ್ಧಾರೆ. ಬೆಂಗಳೂರು ಪೂರ್ವ ಆರ್‌ಟಿಒ ಕಚೇರಿಯಲ್ಲಿ ಕಾರು ನೋಂದಣಿಯಾಗಿದೆ ಮತ್ತು ನಂಬರ್‌ ನೀಡಲಾಗಿದೆ” ಎಂದು ಸಮರ್ಥಿಸಿಕೊಂಡರು.

ಪ್ರಕರಣದ ಹಿನ್ನೆಲೆ: ಮೊದಲಿಗೆ ಹರ್ಷ ಇನ್ಫ್ರಾ ಕಾನ್ಸ್‌ ಪ್ರೈವೇಟ್‌ ಲಿಮಿಟೆಡ್‌ 2022ರಲ್ಲಿ ಪ್ರಕರಣದಲ್ಲಿ ಸಿಲುಕಿರುವ ಲ್ಯಾಂಬೋರ್ಗಿನಿ ಕಾರನ್ನು ಖರೀದಿಸಿ, ನೋಂದಣಿಗಾಗಿ ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿತ್ತು. ಅದನ್ನು ಮೂರು ವರ್ಷ ಬಳಕೆ ಮಾಡಿದ ನಂತರ ಅರ್ಜಿದಾರರಿಗೆ ಮಾರಾಟ ಮಾಡಿತ್ತು. ಅರ್ಜಿದಾರರು ಕಾರು ನೋಂದಣಿಗೆ ಸಲ್ಲಿಸಿರುವ ದಾಖಲೆಗಳನ್ನು 2025ರ ಸೆಪ್ಟೆಂಬರ್‌ನಲ್ಲಿ ಪರಿಶೀಲಿಸಿದ್ದ ಕಸ್ತೂರಿನಗರದ ಆರ್‌ಟಿಒ ಕಚೇರಿ ಅಧಿಕಾರಿಗಳಿಗೆ, ಮೂರು ವರ್ಷಗಳ ಅವಧಿಯ ರಸ್ತೆ ತೆರಿಗೆ ಮತ್ತು ₹37 ಲಕ್ಷ ಹೆಚ್ಚು ದಂಡ ಮೊತ್ತ ತಪ್ಪಿಸಲು ವಾಹನವನ್ನು ಕಡಿಮೆ ಮೌಲ್ಯೀಕರಿಸಲಾಗಿರುವುದು ತಿಳಿದು ಬಂದಿತ್ತು. ಅಲ್ಲದೆ, ದಾಖಲೆಗಳನ್ನು ತಿರುಚಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಕುರಿತು ದೂರು ದಾಖಲಿಲಾಗಿದ್ದು, ಅದನ್ನು ರದ್ದುಪಡಿಸಲು ಕೋರಿ ಕಾರು ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.