

ಲ್ಯಾಂಬೊರ್ಗಿನಿ ಕಾರಿಗೆ ಪಾವತಿಸಿರುವ ಮೋಟಾರು ವಾಹನ ಶುಲ್ಕ ₹1.05 ಕೋಟಿಯಿಂದ ಹತ್ತು ಅನಾಥಾಶ್ರಮಗಳು ನಡೆಯುತ್ತಿದ್ದವು ಎಂದು ಮೌಖಿಕವಾಗಿ ಹೇಳಿರುವ ಕರ್ನಾಟಕ ಹೈಕೋರ್ಟ್ ಕಾರನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಓಡಿಸಿದ ಆರೋಪದ ಸಂಬಂಧ ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಿದೆ.
ಬೆಂಗಳೂರಿನ ಸಿ ವಿ ರಾಮನ್ ನಗರದ ಬಿ ಆರ್ ಚಿರಂತನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠವು “ಅರ್ಜಿದಾರರು ಶಬ್ದ ಮಾಲಿನ್ಯಕ್ಕೆ ಕಾರಣವಾಗಿರುವ ಸೈಲೆನ್ಸರ್ ಬದಲಾಯಿಸಿದ್ದು, ಅದಕ್ಕೂ ದಂಡ ಪಾವತಿಸಿದ್ದಾರೆ. ವೇಗದ ಚಾಲನೆಗೂ ದಂಡ ಪಾವತಿಸಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ. ಪ್ರಕರಣದ ಇತ್ಯರ್ಥದ ಸಂದರ್ಭದಲ್ಲಿ ಸೂಕ್ತ ಆದೇಶ ಮಾಡಲಾಗುವುದು” ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ರಜತ್ ಅವರು “ಬೆಂಗಳೂರು-ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದ ಸಮೀಪ ವೇಗದ ಚಾಲನೆ ಮಾಡಿದ ಆರೋಪದ ಸಂಬಂಧ ಎಕ್ಸ್‌ನಲ್ಲಿ ವೈರಲ್ ಆಗಿದ್ದ ವಿಡಿಯೊ ಆಧರಿಸಿ ಲ್ಯಾಂಬೊರ್ಗಿನಿ ಕಾರು ಚಾಲಕ ಚಿರಂತನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದರು.
“ವೇಗವಾಗಿ ಲ್ಯಾಂಬೊರ್ಗಿನಿ ಕಾರನ್ನು ಓಡಿಸುತ್ತಿದ್ದ ಮತ್ತು ದೋಷಪೂರಿತ ಸೈಲೆನ್ಸರ್ ಅಳವಡಿಸಿದ್ದ ಆರೋಪದ ಮೇಲೆ ಚಾಲಕನ ವಿರುದ್ಧ ಮೋಟಾರು ವಾಹನ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ಲ್ಯಾಂಬೊರ್ಗಿನಿ ಶೋರೂಮ್ ವತಿಯಿಂದ ಮಡಿಕೇರಿಯಲ್ಲಿ 2025ರ ಡಿಸೆಂಬರ್ 14ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು 13 ಲ್ಯಾಂಬೊರ್ಗಿನಿ ಕಾರುಗಳು ಹೊರಟಿದ್ದವು. ಈ ಪೈಕಿ ಅರ್ಜಿದಾರರ ಕಾರು ಕೊನೆಯದಾಗಿತ್ತು. ಬೆಂಗಳೂರು ಟ್ರಾಫಿಕ್‌ನಲ್ಲಿ ಗಂಟೆ 200 ಕಿಲೋ ಮೀಟರ್ ವೇಗದಲ್ಲಿ ವಾಹನ ಓಡಿಸುವುದು ಅಸಾಧ್ಯ. ಇಲ್ಲಿ ಸ್ವಯಂಪ್ರೇರಿತವಾಗಿ ಸಂಚಾರಿ ಪೊಲೀಸರು ಎಕ್ಸ್‌ನಲ್ಲಿ ವಿಡಿಯೋ ನೋಡಿ ಒಂದೂವರೆ ತಿಂಗಳ ಬಳಿಕ ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ ಅರ್ಜಿದಾರರು ಶಬ್ದ ಮಾಲಿನ್ಯ ಉಂಟು ಮಾಡಿದ ಆರೋಪಕ್ಕಾಗಿ ₹8,500 ರೂಪಾಯಿ ದಂಡ ಪಾವತಿಸಿ, ಸೈಲೆನ್ಸರ್ ಬದಲಿಸಿದ್ದಾರೆ. 60-70 ವೇಗದಲ್ಲಿ ಕಾರು ಓಡಿಸಿರುವುದು ವೇಗದ ಕಾರು ಚಾಲನೆ ಎಂದಾದರೆ ದೇಶದ ಅರ್ಧ ಜನಸಂಖ್ಯೆಯ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ವೇಗ ಚಾಲನೆಗೆ ಹೆಚ್ಚೆಂದರೆ ಒಂದು ಸಾವಿರ ದಂಡ ವಿಧಿಸಬಹುದು. ದೇಶಾದ್ಯಂತ ಎಲ್ಲಾ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಲ್ಯಾಂಬೊರ್ಗಿಯನ್ನು ಟಾರ್ಗೆಟ್ ಮಾಡಿವೆ. ಲ್ಯಾಂಬೊರ್ಗಿನಿ ಹೊರತುಪಡಿಸಿ ಬೇರೆ ಯಾವುದೇ ವಾಹನವಾಗಿದ್ದರೂ ಇದು ವಿಚಾರವೇ ಆಗುತ್ತಿರಲಿಲ್ಲ” ಎಂದರು.
ಒಂದು ಹಂತದಲ್ಲಿ ಪೀಠವು “ನಿಮ್ಮ ವಿರುದ್ಧದ ಆರೋಪಕ್ಕಾಗಿ ಲ್ಯಾಂಬೊರ್ಗಿನಿ ಕಾರು ತೆಗೆದುಕೊಂಡು ಹೋಗಿ ಪಾರ್ಕ್ ಮಾಡಿ, ಸಮಾಜ ಸೇವೆ (ಕಮ್ಯುನಿಟಿ ಸರ್ವೀಸ್) ಮಾಡಿ ಆನಂತರ ಲ್ಯಾಂಬೊರ್ಗಿನಿ ಕಾರನಲ್ಲಿ ವಾಪಸ್ ಹೋಗಿ. ಬಿಎನ್‌ಎಸ್ ಅಡಿ ಇಂಥ ಅಪರಾಧಗಳಿಗೆ ಸಮುದಾಯ ಸೇವೆ ಮಾಡುವ ಶಿಕ್ಷೆ ವಿಧಿಸಬಹುದು” ಎಂದು ಹೇಳಿತು. ಅಲ್ಲದೇ, “ರಾಜರಾಜೇಶ್ವರಿ ನಗರದಲ್ಲಿನ ಟ್ರಾಫಿಕ್ ನೋಡಿದರೆ ವೇಗವಾಗಿ ಹೇಗೆ ಕಾರು ಚಾಲನೆ ಮಾಡಲು ಸಾಧ್ಯ” ಎಂದು ಪೀಠವು ಪ್ರಾಸಿಕ್ಯೂಷನ್‌ಗೆ ಪ್ರಶ್ನಿಸಿತು. ಅದಕ್ಕೆ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಮತ್ತು ರಜತ್ ಇಬ್ಬರೂ ವಿಡಿಯೋವನ್ನು ಪೀಠಕ್ಕೆ ತೋರಿದರು.
ಈ ನಡುವೆ ವಕೀಲರ ರಜತ್ ಅವರು “ಅರ್ಜಿದಾರರ ಲ್ಯಾಂಬೊರ್ಗಿನಿಯು ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. ಅದಕ್ಕಾಗಿ ಪ್ರಕರಣ ದಾಖಲಿಸಿರಬಹುದು” ಎಂದರು. ಅದಕ್ಕೆ ಜಗದೀಶ್ ಅವರು “ಅದು ಇನ್ನೊಂದು ಅಪರಾಧ” ಎಂದರು. ಇದಕ್ಕೆ ರಜತ್ ಅವರು “2025ರ ಸೆಪ್ಟೆಂಬರ್‌ನಲ್ಲಿ ಮೋಟಾರು ವಾಹನ ಶುಲ್ಕ ₹1.05 ಕೋಟಿ ಪಾವತಿಸಲಾಗಿದೆ” ಎಂದರು. ಅದಕ್ಕೆ ಪೀಠವು “ಇರಲಿ ಬಿಡಿ, 10 ಅನಾಥಾಶ್ರಮಗಳು ನಡೆಯುತ್ತಿದ್ದವು” ಎಂದು ಮೌಖಿಕವಾಗಿ ಹೇಳಿತು.
ಪ್ರಕರಣದ ಹಿನ್ನೆಲೆ: ಮನುಷ್ಯನ ಪ್ರಾಣಕ್ಕೆ ಹಾನಿಯಾಗುವಂಥ ಸೈಲೆನ್ಸರ್ ಅಳವಡಿಸಿಕೊಂಡಿರುವ ಲ್ಯಾಂಬೊರ್ಗಿನಿ ಕಾರನ್ನು ಮೈಸೂರು ರಸ್ತೆ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿರುವ ವಿಡಿಯೊವನ್ನು ಸನಾತನ ಎಂಬ ಎಕ್ಸ್ ಖಾತೆಯಲ್ಲಿ ವೀಕ್ಷಿಸಿರುವುದಾಗಿ ಕರ್ತವ್ಯನಿರತ ಪಿಎಸ್‌ಐ ಆರ್ ರಾಮಸ್ವಾಮಿ ದೂರು ನೀಡಿದ್ದರು. ಇದರ ಅನ್ವಯ ಬೆಂಗಳೂರಿನ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಜನವರಿ 20ರಂದು -281 ಮತ್ತು ಭಾರತೀಯ ಮೋಟಾರು ವಾಹನಗಳ ಕಾಯಿದೆ 120 ಮತ್ತು177ರ ಅಡಿ ಚಿರಂತನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.