Supreme Court 
ಸುದ್ದಿಗಳು

ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಮೇಲ್ವಿಚಾರಣೆಗಾಗಿ ಹೈಕೋರ್ಟ್‌ಗಳು ವಿಶೇಷ ಪೀಠ ರಚಿಸಬೇಕು: ಸುಪ್ರೀಂ

Bar & Bench

ಸಂಸದರು/ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಲೇವಾರಿಗಾಗಿ ಸುಪ್ರೀಂ ಕೋರ್ಟ್ ಗುರುವಾರ ಪ್ರಮುಖ ನಿರ್ದೇಶನಗಳನ್ನು ನೀಡಿದೆ [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸಂಸದರು/ಶಾಸಕರ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಮೇಲ್ವಿಚಾರಣೆಗಾಗಿ ವಿಶೇಷ ಪೀಠ ಆಲಿಸಬೇಕಾದ ಸ್ವಯಂ ಪ್ರೇರಿತ ಪ್ರಕರಣಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ದಾಖಲಿಸಿಕೊಳ್ಳಬೇಕು. ವಿಶೇಷ ಪೀಠವೊಂದು ಈ ಸಂಬಂಧ ರಚನೆಯಾಗಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಅಂತಹ ವಿಶೇಷ ಪೀಠದ ನೇತೃತ್ವವನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರೇ ವಹಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಸಂಸದರು/ಶಾಸಕರ ವಿರುದ್ಧ ಮರಣದಂಡನೆ ವಿಧಿಸಬಹುದಾದ ಪ್ರಕರಣಗಳಿಗೆ ಬೇರೆ ಪ್ರಕರಣಗಳಿಗಿಂತ ಹೆಚ್ಚಿನ ಆದ್ಯತೆ ನೀಡಬೇಕು. ಸಂಬಂಧಪಟ್ಟ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಅಂತಹ ಪ್ರಕರಣಗಳ ವಿಚಾರಣೆಗೆ ಸಾಕಷ್ಟು ಮೂಲಸೌಕರ್ಯ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಕೂಡ ಅದು ಇದೇ ವೇಳೆ ನಿರ್ದೇಶಿಸಿದೆ.

ಹಾಲಿ ಶಾಸಕರು ಸೇರಿದಂತೆ ತಪ್ಪಿತಸ್ಥ ರಾಜಕಾರಣಿಗಳು ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಈಗಿನ ನಿಯಮದ ಬದಲಿಗೆ ಆಜೀವ ನಿಷೇಧ ಹೇರಬೇಕೆಂದು ಕೋರಿ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಈ ತೀರ್ಪು ಬಂದಿದೆ.

ಈ ಮನವಿ ಕುರಿತಂತೆ ವಿಚಾರಣೆ ವೇಳೆ ನ್ಯಾಯಾಲಯ ನಿರ್ಧರಿಸಲಿಲ್ಲವಾದರೂ ಅಂತಹ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ನಿರ್ದೇಶನ ನೀಡಿತು. ಆಜೀವ ನಿಷೇಧ ಹೇರುವಂತೆ ಕೋರಿರುವ ಮನವಿಯನ್ನು ನಂತರ ನ್ಯಾಯಾಲಯ ಪರಿಗಣಿಸಲಿದೆ.

ಉಪಾಧ್ಯಾಯ ಅವರು ಜನಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8(3) ಅಡಿಯಲ್ಲಿ ವಿಧಿಸಲಾಗಿರುವ ಆರು ವರ್ಷಗಳ ನಿಷೇಧ ತೆಗೆದು ಹಾಕಿ ಅದನ್ನು ಆಜೀವ ನಿಷೇಧ ಎಂದು ಬದಲಿಸುವಂತೆ ಕೋರಿದ್ದಾರೆ.  ಈ ಅರ್ಜಿಗೆ ಭಾರತೀಯ ಚುನಾವಣಾ ಆಯೋಗ ಬೆಂಬಲ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅಮಿಕಸ್ ಕ್ಯೂರಿಯಾಗಿ ಕಾರ್ಯನಿರ್ವಹಿಸಿದ್ದರು.

ಗಂಭೀರ ಅಪರಾಧಗಳಿಗಾಗಿ ವ್ಯಕ್ತಿಯೊಬ್ಬರ ವಿರುದ್ಧ ಆರೋಪಟ್ಟಿ ತಯಾರಾಗಿದ್ದರೆ ಅಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಾನು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಕಳೆದ ಏಪ್ರಿಲ್‌ನಲ್ಲಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಇಂಥದ್ದೇ ಪ್ರಕರಣದ ವಿಚಾರಣೆಯೊಂದರ ವೇಳೆ ಸುಪ್ರೀಂ ಕೋರ್ಟ್ ತಿಳಿಸಿತ್ತು.