Delhi High Court, Justice Manmohan and Justice Navin Chawla

 
ಸುದ್ದಿಗಳು

ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ತೀರ್ಪು ಪರಾಮರ್ಶಿಸುವ ಅಧಿಕಾರ ಉಚ್ಚ ನ್ಯಾಯಾಲಗಳಿಗೆ ಇದೆ: ದೆಹಲಿ ಹೈಕೋರ್ಟ್

ನ್ಯಾಯಾಂಗ ಪರಿಶೀಲನೆಯ ಅಧಿಕಾರವು ಸಂವಿಧಾನದ ಮೂಲ ರಚನೆಯ ಭಾಗವಾಗಿದ್ದು ತನಗೆ ನೀಡಲಾಗಿರುವ ರಿಟ್ ಅಧಿಕಾರ ವ್ಯಾಪ್ತಿಯನ್ನು ಶಾಸಕಾಂಗ ಅಥವಾ ಸಾಂವಿಧಾನಿಕ ತಿದ್ದುಪಡಿಗಳಿಂದ ಕಸಿದುಕೊಳ್ಳಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

Bar & Bench

ಸಂವಿಧಾನದ 226ನೇ ವಿಧಿಯಡಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗಳು ನೀಡುವ ಆದೇಶ ಮತ್ತು ತೀರ್ಪನ್ನು ಪರಾಮರ್ಶಿಸುವ ಅಧಿಕಾರ ಉಚ್ಚ ನ್ಯಾಯಾಲಯಗಳಿಗೆ ಇದೆ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ [ವಿಂಗ್ ಕಮಾಂಡರ್ ಶ್ಯಾಮ್ ನೈತಾನಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಕಾಯಿದೆಯು ಸಂವಿಧಾನದ 227 (4) ರ ಅಡಿಯಲ್ಲಿ ಹೈಕೋರ್ಟ್‌ಗಳ ಆಡಳಿತಾತ್ಮಕ ಮೇಲ್ವಿಚಾರಣೆಯನ್ನು ಹೊರಗಿಡುತ್ತದೆಯಾದರೂ ನ್ಯಾಯಾಂಗ ಮೇಲ್ವಿಚಾರಣೆಯನ್ನಲ್ಲ. ಅದರಲ್ಲಿಯೂ 226ನೇ ವಿಧಿಯಡಿಯ ನ್ಯಾಯಿಕ ವ್ಯಾಪ್ತಿಯನ್ನಂತೂ ಖಂಡಿತವಾಗಿಯೂ ಅಲ್ಲ ಎಂದು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನವೀನ್ ಚಾವ್ಲಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಹೈಕೋರ್ಟ್‌ಗಳಿಂದ ಸಂಪೂರ್ಣವಾಗಿ ಕಸಿದುಕೊಳ್ಳಲಾಗಿದ್ದು ಸಶಸ್ತ್ರ ಪಡೆಗಳ ನ್ಯಾಯಮಂಡಳಿಗಳ ಆದೇಶದ ವಿರುದ್ಧ ಹೈಕೋರ್ಟ್‌ ಸಂಪರ್ಕಿಸುವ ಹಕ್ಕು ದಾವೆದಾರರಿಗೆ ಇಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ರಿಟ್‌ ನ್ಯಾಯಾಲಯವಾಗಿ ತನ್ನ ಪಾತ್ರ ಮೇಲ್ಮನವಿ ನ್ಯಾಯಾಲಯಕ್ಕಿಂತ ಭಿನ್ನ ಮತ್ತು ವಿಶಿಷ್ಟವಾಗಿದೆ ಎಂದು ತಿಳಿಸಿದ ಪೀಠ ಕೇಂದ್ರ ಸರ್ಕಾರ ಮಂಡಿಸಿದ್ದ ಆಕ್ಷೇಪಗಳನ್ನು ತಿರಸ್ಕರಿಸಿ ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ರೋಸ್ಟರ್‌ ನ್ಯಾಯಾಲಯಕ್ಕೆ ಪಟ್ಟಿ ಮಾಡಿತು.