ಸುದ್ದಿಗಳು

ದಿಶಾ ರವಿ ಪ್ರಕರಣದ ಆದೇಶದಿಂದ ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್ ಪಾಠ ಕಲಿಯಬೇಕಿದೆ: ಮಾಜಿ ಅಟಾರ್ನಿ ಜನರಲ್ ರೋಹಟ್ಗಿ

Bar & Bench

ಸ್ವಾತಂತ್ರ್ಯ ಮತ್ತು ಜಾಮೀನು ಅರ್ಜಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸುವಾಗ ಹೈಕೋರ್ಟ್‌ಗಳು ಮತ್ತು ಸುಪ್ರೀಂಕೋರ್ಟ್‌, ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ನೀಡಿದ ಆದೇಶವನ್ನು ಅನುಸರಿಸಬೇಕು ಎಂದು ಮಾಜಿ ಅಟಾರ್ನಿ ಜನರಲ್‌ ಮುಕುಲ್‌ ರೋಹಟ್ಗಿ ಬುಧವಾರ ಅಭಿಪ್ರಾಯಪಟ್ಟರು.

ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯಗಳು, ವಿಶೇಷವಾಗಿ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ಜಾಮೀನಿಗೆ ಸಂಬಂಧಿಸಿದ ನ್ಯಾಯಾಶಾಸ್ತ್ರವನ್ನು ತಲೆಕೆಳಗು ಮಾಡಿ ಜಾಮೀನು ನೀಡಲು ಹಿಂದೇಟು ಹಾಕುತ್ತಿವೆ ಎಂದು ಅವರು ಈ ವೇಳೆ ವಿಷಾದ ವ್ಯಕ್ತಪಡಿಸಿದರು.

“ಇದು ಜಿಲ್ಲಾ ನ್ಯಾಯಾಧೀಶರ ಧೈರ್ಯಶಾಲಿ ನಿರ್ಧಾರ. ಉನ್ನತ ನ್ಯಾಯಾಲಯಗಳು ಇದರಿಂದ ಕಲಿಯಬೇಕಾದದ್ದು ಇದೆ. ನ್ಯಾಯಾಂಗದ ಬಗ್ಗೆ ತುಂಬಾ ಗೌರವದಿಂದ ಹೇಳುವುದಾದರೆ ಈ ನಿಟ್ಟಿನಲ್ಲಿ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ ಹಿಂದೆ ಉಳಿದಿವೆ. ಅವುಗಳು ಈ ರೀತಿ ಜಾಮೀನು ನೀಡದಿರುವುದನ್ನು ಒಂದು ರೀತಿಯ ಶಿಕ್ಷೆಯಂತೆ ಮಾಡಿವೆ,” ಎಂದು ರೋಹಟ್ಗಿ ಅವರು ಇಂಡಿಯಾ ಟುಡೇ ನಿರೂಪಕ ರಾಜದೀಪ್‌ ಸರ್ದೇಸಾಯಿ ಅವರೊಂದಿಗೆ ನಡೆದ ಟಿವಿ ಚರ್ಚೆಯಲ್ಲಿ ತಿಳಿಸಿದ್ದಾರೆ.

ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಫೆಬ್ರವರಿ 23 ರಂದು ಟೂಲ್‌ಕಿಟ್ ಎಫ್ಐಆರ್ ಪ್ರಕರಣದಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಜಾಮೀನು ಮಂಜೂರು ಮಾಡಿದ್ದರು. 18 ಪುಟಗಳ ತೀರ್ಪಿನಲ್ಲಿ ನ್ಯಾ. ರಾಣಾ ಅವರು “ಸರ್ಕಾರವನ್ನು ಒಪ್ಪದ ಕಾರಣಕ್ಕೆ ಪ್ರಜೆಗಳನ್ನು ಸೆರೆಮನೆಯಲ್ಲಿಡಲಾಗದು” ಎಂದು ಹೇಳಿದ್ದರು.

ಇದನ್ನು ಧೈರ್ಯಶಾಲಿ ಮತ್ತು ದಿಟ್ಟ ನಿರ್ಧಾರ ಎಂದು ರೋಹಟ್ಗಿ ಮುಕ್ತಕಂಠದಿಂದ ಹೊಗಳಿದ್ದಾರೆ. "ಜಿಲ್ಲಾ ನ್ಯಾಯಾಲಯದಿಂದ ಇಂತಹ ಧೈರ್ಯಶಾಲಿ ಮತ್ತು ದಿಟ್ಟ ತೀರ್ಪು ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ತೀರ್ಪಿಗೆ ಮತ್ತು ನ್ಯಾಯಾಲಯ ಸ್ವಾತಂತ್ರ್ಯದ ಪತಾಕೆಯನ್ನು ಎತ್ತಿ ಹಿಡಿದಿರುವುದಕ್ಕೆ ಪೂರ್ಣ ಅಂಕಗಳು” ಎಂದು ಅವರು ಹೇಳಿದರು.

ಮುಗ್ಧತೆಯ ಪೂರ್ವಕಲ್ಪನೆ (ಅಪರಾಧ ನಿರೂಪಿತವಾಗುವವರೆಗೆ ಆರೋಪಿಯು ಪ್ರಕರಣದಲ್ಲಿ ಮುಗ್ಧ ಎಂದು ಭಾವಿಸುವ ಪರಿಕಲ್ಪನೆ) ಸಂವಿಧಾನದ ಮೂಲಭೂತ ಅಂಶಗಳಲ್ಲಿ ಒಂದಾದರೂ ಕಳೆದ ಹತ್ತು ವರ್ಷಗಳಲ್ಲಿ ಇದಕ್ಕೆ ಸಂಪೂರ್ಣ ತಿಲಾಂಜಲಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. “1980, 90 ಮತ್ತು 2000 ರ ದಶಕಗಳಿಂದ ನಿಧಾನವಾಗಿ ಈ ಮುಗ್ಧತೆಯ ಪೂರ್ವಕಲ್ಪನೆ ಬದಲಾಗಿದೆ. ಭಯೋತ್ಪಾದನಾ ಪ್ರಕರಣಗಳಲ್ಲಿ ಈ ಬದಲಾವಣೆ ಮೊದಲು ಕಂಡಿತು. ದೇಶದ ಭದ್ರತೆ ಮುಖ್ಯವಾದ್ದರಿಂದ ಇದನ್ನು ಸುಪ್ರೀಂಕೋರ್ಟ್‌ ಅಂಗೀಕರಿಸಿತು. ಆದರೆ ಆದರೆ ಕಳೆದ 10 ವರ್ಷಗಳಲ್ಲಿ ಮುಗ್ಧತೆಯ ಪೂರ್ವಕಲ್ಪನೆಗೆ ಪೂರ್ಣ ತಿಲಾಂಜಲಿ ಹಾಡಲಾಗಿದ್ದು ಜಿಎಸ್‌ಟಿ ಕಾಯಿದೆ ಉಲ್ಲಂಘನೆಯಂತಹ ಕ್ಷುಲ್ಲಕ ಪ್ರಕರಣಗಳಲ್ಲೂ ಇದಕ್ಕೆ ತಿಲಾಂಜಲಿ ನೀಡಲಾಗಿದೆ” ಎಂದು ಅವರು ವಿವರಿಸಿದ್ದಾರೆ.

ಚಿಲ್ಲರೆ ಪ್ರಕರಣಗಳಲ್ಲಿ ಕೂಡ ಗಂಭೀರ ಆರೋಪ ಮಾಡಿದ ಆಪಾದನೆ ಪೊಲೀಸರ ಮೇಲೆ ಇರುತ್ತದೆ ಎಂದ ರೋಹಟ್ಗಿ ಅವರು "ನಾನು ಕಂಡುಕೊಂಡದ್ದೇನೆಂದರೆ, ಶಿಕ್ಷೆಯ ರಣೋತ್ಸಾಹಿ ಪೊಲೀಸರು ಎಫ್ಐಆರ್‌ನಲ್ಲಿ ದೇಶದ್ರೋಹ ಅಥವಾ ಕೊಲೆ ಆರೋಪದಂತಹ ಗಂಭೀರ ಆರೋಪ ಹೊರಿಸುತ್ತಾರೆ ಇಲ್ಲವೇ ಹಣೆಪಟ್ಟಿ ಹಚ್ಚುತ್ತಾರೆ. ಅದಾದ ಮರುಕ್ಷಣವೇ, ನ್ಯಾಯಾಧೀಶರು ಕೈಚೆಲ್ಲಿ ಯಾವಾಗ ಜಾಮೀನು ನೀಡಬೇಕಿತ್ತೋ ಆಗ ಜಾಮೀನು ನೀಡುವುದಿಲ್ಲ” ಎಂದು ಹೇಳಿದರು.

ಚರ್ಚೆಯ ಮಧ್ಯೆ ಮಾತನಾಡಿದ ರಾಜದೀಪ್‌ ಸರ್ದೇಸಾಯಿ “ಪೊಲೀಸರು ರಾಜಕೀಯ ದಣಿಗಳಿಂದ ಸೂಚನೆ ಪಡೆಯುತ್ತಾರೆ” ಎಂದರು. ಆಗ ರೋಹಟ್ಗಿ “ಆ ಚರ್ಚೆಗೆ ಎಳೆಸಲು ಬಯಸುವುದಿಲ್ಲ” ಎನ್ನುತ್ತಾ “ಎಫ್‌ಐಆರ್‌ ಸಿದ್ಧಪಡಿಸುವುದು ಪೊಲೀಸರೇ ವಿನಾ ಸರ್ಕಾರವಲ್ಲ. ಐದು ವರ್ಷದೊಳಗಿನ ಸಣ್ಣ ಅಪರಾಧ ಪ್ರಕರಣಗಳನ್ನು ಹತ್ತು ವರ್ಷದವರೆಗಿನ ಶಿಕ್ಷೆಗೆ ಒಳಪಡಿಸಬಹುದಾದ ಗಂಭೀರ ಅಪರಾಧ ಎಂದು ನ್ಯಾಯಾಧೀಶರು ಪರಿಗಣಿಸುತ್ತಾರೆ. ಕಾರು ಅಪಘಾತದಂತಹ ಪ್ರಕರಣಗಳಲ್ಲಿಯೂ ಕೊಲೆ ಯತ್ನದ ಆಪಾದನೆ ಹೊರಿಸಿಬಿಡುತ್ತಾರೆ. ಇದನ್ನು ನಿಮಗೆ ನಂಬಲು ಸಾಧ್ಯವೇ?” ಎಂದು ಮರು ಪ್ರಶ್ನಿಸಿದರು.

“ನ್ಯಾಯಾಂಗ ಜಾಮೀನು ನೀಡಲು ಬಹಳ ಸಮಯ ತೆಗೆದುಕೊಳ್ಳುತ್ತಿದ್ದು ಆ ಹೊತ್ತಿಗೆ ಆರೋಪಿಗಳು 30 ರಿಂದ 90 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಜೈಲಿನಲ್ಲಿ ಕಳೆದಿರುತ್ತಾರೆ, ಆ ವ್ಯಕ್ತಿ ಖುಲಾಸೆಗೊಳ್ಳಬಹುದಾದ್ದರಿಂದ ಅವರಿಗೆ ಕಹಿ ಅನುಭವವಾಗಲಿ ಎಂಬ ಭಾವನೆ ಇದರ ಹಿಂದೆ ಇದೆ…” ಎಂದರು.

“ಕಡತ ರವಾನಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರವೃತ್ತಿಯನ್ನು ಅಧಿಕಾರಿಶಾಹಿಯಲ್ಲಿ ಕಾಣುತ್ತಿದ್ದೆವು. ಈಗ ಅದೇ ರೀತಿ ನ್ಯಾಯಾಂಗದಲ್ಲಿಯೂ ನಡೆಯುತ್ತಿದೆ. ಮೊದಲ ನ್ಯಾಯಾಲಯ ನೀನು ಜಿಲ್ಲಾ ನ್ಯಾಯಾಲಯಕ್ಕೆ ಹೋಗು ಎನ್ನುತ್ತದೆ. ಜಿಲ್ಲಾ ನ್ಯಾಯಾಲಯ ಹೈಕೋರ್ಟ್‌ ಅಥವಾ ಸುಪ್ರೀಂಕೋರ್ಟ್‌ವರೆಗೆ ಹೋಗು ಎನ್ನುತ್ತದೆ. ನೀನು ಸ್ವಲ್ಪ ಸಮಯ ಕಾಯದ ಹೊರತು ಜಾಮೀನು ಸಿಗುವುದಿಲ್ಲ ಎಂಬುದು ಈಗಿನ ಮನಸ್ಥಿತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾಮೀನು ಎನ್ನುವುದು ನಿಯಮವಾಗಬೇಕೇ ಹೊರತು ಅಪವಾದವಾಗಬಾರದು ಎಂದು ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು 1978ರಲ್ಲಿ ರೂಪಿಸಿದ್ದ ಸ್ಥಿತಿಗೆ ನ್ಯಾಯಾಂಗ ಮರಳಬೇಕಾಗಿದೆ ಎಂದು ರೋಹಟ್ಗಿ ಪ್ರತಿಪಾದಿಸಿದರು. “ಅವರು (ನ್ಯಾಯಾಧೀಶ ಧರ್ಮೇಂದರ್ ರಾಣಾ) ನ್ಯಾಯ ಪತಾಕೆ ಎತ್ತಿ ಹಿಡಿದಿದ್ದಾರೆ ಉನ್ನತ ನ್ಯಾಯಾಲಯಗಳು ಇದರಿಂದ ಕಲಿಯಬೇಕಾದದ್ದು ಇದೆ ಮತ್ತು ನ್ಯಾ. ಕೃಷ್ಣ ಅಯ್ಯರ್ 1978 ರಲ್ಲಿ ಹೇಳಿದ್ದಕ್ಕೆ ಹಿಂತಿರುಗಬೇಕು. ಅದನ್ನು ಸಂಪೂರ್ಣ ಸಮಾಧಿ ಮಾಡಲಾಗದಿದ್ದರೂ ಕಳೆದ ಕೆಲ ವರ್ಷದಿಂದ ಅದನ್ನು ಅನುಸರಿಸುತ್ತಿಲ್ಲ” ಎಂದು ಅವರು ಹೇಳಿದರು.