ಸುದ್ದಿಗಳು

ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತದ ತನಿಖೆಗೆ ಉನ್ನತ ಮಟ್ಟದ ಸಮಿತಿ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ವಿವರಣೆ

ಮಳೆಗಾಲದ ಮೊದಲು ಪ್ರತಿ ವರ್ಷ ವಿಮಾನ ನಿಲ್ದಾಣದ ಕಟ್ಟಡಗಳ ಸಿವಿಲ್, ವಿದ್ಯುತ್ ಮತ್ತು ತಾಂತ್ರಿಕ ಅಂಶಗಳ ಸಂಪೂರ್ಣ ಮೌಲ್ಯಮಾಪನ ಕೈಗೊಳ್ಳಲು ಎಲ್ಲಾ ವಿಮಾನ ನಿಲ್ದಾಣ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.

Bar & Bench

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ವಿವರಣೆ ನೀಡಿದೆ [ಸಿವಿಲ್ ಸೇಫ್ಟಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು  ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ರಚಿಸಿರುವ ಸಮಿತಿಯಲ್ಲಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ತಜ್ಞರಿದ್ದಾರೆ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠಕ್ಕೆ ಮಾಹಿತಿ ನೀಡಲಾಯಿತು.

ದೆಹಲಿ, ಜಬಲ್‌ಪುರ ಮತ್ತು ರಾಜ್‌ಕೋಟ್ ವಿಮಾನ ನಿಲ್ದಾಣಗಳಲ್ಲಿನ ಘಟನೆಗಳ ಬಗ್ಗೆ ಸರ್ಕಾರ ಗಮನಹರಿಸಿದೆ. ಐಐಟಿಯಂತಹ ಸಂಸ್ಥೆ ರೀತಿಯ ಮೂರನೇ ಸಂಸ್ಥೆಗಳಿಂದ ವಿಮಾನ ನಿಲ್ದಾಣದ ಕಟ್ಟಡಗಳ ಮೌಲ್ಯಮಾಪನ ನಡೆಸಲು ದೇಶದ ಎಲ್ಲಾ ವಿಮಾನ ನಿಲ್ದಾಣ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ವಿವರಿಸಲಾಗಿದೆ.

ಮಳೆಗಾಲ ಪ್ರಾರಂಭವಾಗುವ ಮೊದಲು ಪ್ರತಿ ವರ್ಷ ವಿಮಾನ ನಿಲ್ದಾಣದ ಕಟ್ಟಡಗಳ ಸಿವಿಲ್, ಎಲೆಕ್ಟ್ರಿಕಲ್ ಮತ್ತು ತಾಂತ್ರಿಕ ಅಂಶಗಳ ಸಂಪೂರ್ಣ ಮೌಲ್ಯಮಾಪನ ಕೈಗೊಳ್ಳಲು ಎಲ್ಲಾ ವಿಮಾನ ನಿಲ್ದಾಣ ನಿರ್ವಾಹಕರಿಗೆ ಸೂಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದ ಸಾವು ಎಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇತ್ತೀಚೆಗೆ ವಿಮಾನ ನಿಲ್ದಾಣಗಳಲ್ಲಿ ಸಂಭವಿಸಿದ ದುರ್ಘಟನೆಗಳ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಒದಗಿಸಿದೆ.

ಭಾರೀ ಮಳೆಯಿಂದಾಗಿ ದೆಹಲಿ, ಜಬಲ್‌ಪುರ್ ಮತ್ತು ರಾಜ್‌ಕೋಟ್‌ನ ವಿಮಾನ ನಿಲ್ದಾಣಗಳಲ್ಲಿ ಮೇಲ್ಛಾವಣಿ ಕುಸಿದಿತ್ತು. ಜೂನ್ 27 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕುಸಿದು ಒಂದು ಸಾವು ಸಂಭವಿಸಿತ್ತು, ಎಂಟು ಮಂದಿ ಗಾಯಗೊಂಡಿದ್ದರು.