<div class="paragraphs"><p>Hijab, Supreme Court</p></div>

Hijab, Supreme Court

 
ಸುದ್ದಿಗಳು

ಹಿಜಾಬ್‌ ನಿಷೇಧ: ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ

Bar & Bench

ಶೈಕ್ಷಣಿಕ ಸಂಸ್ಥೆಗಳಿಗೆ ಧಾರ್ಮಿಕ ಸಂಕೇತ ಬಿಂಬಿಸುವ ಉಡುಪು ಧರಿಸಿ ಹೋಗುವುದಕ್ಕೆ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ಮಾಡುವುದಾಗಿ ಹೇಳಿರುವ ಕರ್ನಾಟಕ ಹೈಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಮನವಿ ಸಲ್ಲಿಸಲಾಗಿದೆ [ಡಾ. ಜೆ ಹಳ್ಳಿ ಮಸೀದಿ, ಮದರಸಾ ಮತ್ತು ವಕ್ಫ್‌ ಸಂಸ್ಥೆಗಳ ಒಕ್ಕೂಟ ಹಾಗೂ ಕರ್ನಾಟಕ ಸರ್ಕಾರ].

ಅರ್ಜಿದಾರರನ್ನು ಪ್ರತಿನಿಧಿಸಿರುವ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ನ ವಕೀಲರಾದ ರಹಮತುಲ್ಲಾ ಕೊತ್ವಾಲ್‌ ಮತ್ತು ಅದೀಲ್‌ ಅಹ್ಮದ್‌ ಅವರು ಈ ವಿಚಾರವನ್ನು ʼಬಾರ್‌ ಅಂಡ್‌ ಬೆಂಚ್‌ʼಗೆ ದೃಢಪಡಿಸಿದ್ದಾರೆ.

“ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶವು ಮುಸ್ಲಿಮ್‌ ಮತ್ತು ಮುಸ್ಲಿಮೇತರ ವಿದ್ಯಾರ್ಥಿನಿಯರ ನಡುವೆ ಭೇದಭಾವ ಸೃಷ್ಟಿಸಲಿದ್ದು, ಸಂವಿಧಾನದ ಮೂಲರಚನೆಯಾದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ” ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.

“ಹಿಜಾಬ್‌ ಧರಿಸುವುದು ಸಂವಿಧಾನದ 19(1)(ಎ) ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು 25ನೇ ವಿಧಿಯಡಿ ಖಾಸಗಿ ಹಕ್ಕು ಮತ್ತು ಆತ್ಮಸಾಕ್ಷಿ ಸ್ವಾತಂತ್ರ್ಯದ ವ್ಯಾಪ್ತಿಗೆ ಒಳಪಡಲಿದೆ. ಸೂಕ್ತ ಕಾನೂನಿನ ಬೆಂಬಲವಿಲ್ಲದೆ ಈ ಹಕ್ಕುಗಳನ್ನು ಅತಿಕ್ರಮಿಸಲಾಗದು” ಎಂದು ಆಕ್ಷೇಪಿಸಲಾಗಿದೆ.