ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳ ಕುರಿತು ನಿರ್ಧಾರ ಮಾಡುವವರೆಗೆ ಶಿಕ್ಷಣ ಸಂಸ್ಥೆಗಳು ಆರಂಭವಾಗಬೇಕು. ಆದರೆ, ಯಾವುದೇ ಧಾರ್ಮಿಕ ಸಂಕೇತ ಇರುವ ಉಡುಪನ್ನು ಯಾರೂ ಧರಿಸದಂತೆ ಮಧ್ಯಂತರ ಆದೇಶ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಗುರುವಾರ ಹೇಳಿದ್ದು (ಇನ್ನೂ ಆದೇಶ ಹೊರಡಿಸಿಲ್ಲ) ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.
ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ತಮ್ಮ ಪೋಷಕರ ಮೂಲಕ ಸಲ್ಲಿಸಿರುವ ಐದು ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೂರ್ಣ ಪೀಠವು ವಿಚಾರಣೆ ನಡೆಸಿತು.
“ಈ ಪ್ರಕರಣವನ್ನು ನಾವು ನಿರ್ಧರಿಸಬೇಕು ಎಂದರೆ ನೀವು ನಮಗೆ ಸಹಕರಿಸಬೇಕು. ಎಲ್ಲಾ ತರಹದ ಆಚರಣೆಗಳಿಂದ (ಧಾರ್ಮಿಕ ಉಡುಪು ಧರಿಸುವುದು) ದೂರವಿರುವಂತೆ ನಾವು ಎಲ್ಲರನ್ನೂ ನಿರ್ಬಂಧಿಸುತ್ತೇವೆ” ಎಂದು ಪೀಠವು ಹೇಳಿತು.
“ಶಿಕ್ಷಣ ಸಂಸ್ಥೆಗಳು ಪುನಾರಂಭವಾಗಬೇಕು. ಪ್ರಕರಣ ನಿರ್ಧಾರವಾಗುವವರೆಗೆ ವಿದ್ಯಾರ್ಥಿಗಳು ಮತ್ತು ಸಂಬಂಧಪಟ್ಟವರು ಯಾವುದೇ ತೆರನಾದ ಧಾರ್ಮಿಕ ಉಡುಪು ಅಥವಾ ಶಿರ ವಸ್ತ್ರ ಹಾಕಬಾರದು. ಈ ವಿಚಾರದಲ್ಲಿ ಎಲ್ಲರನ್ನೂ ನಾವು ನಿರ್ಬಂಧಿಸುತ್ತೇವೆ. ಶಾಂತಿ ಮತ್ತು ನೆಮ್ಮದಿ ಮುಖ್ಯ. ಅನುಕೂಲಕರವಲ್ಲದ ಧಾರ್ಮಿಕ ವಸ್ತುಗಳನ್ನು ಧರಿಸಲು ಒತ್ತಾಯಿಸಬಾರದು” ಎಂದು ಪೀಠವು ಮೌಖಿಕವಾಗಿ ಹೇಳಿತು.
ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲರಾದ ದೇವದತ್ ಕಾಮತ್ ಮತ್ತು ಸಂಜಯ್ ಹೆಗಡೆ ಅವರು ಆಕ್ಷೇಪ ವ್ಯಕ್ತಪಡಿಸಿದರು. “ವಿದ್ಯಾರ್ಥಿಗಳ ದೃಷ್ಟಿಯಿಂದ ಪೀಠ ಹೇಳುತ್ತಿರುವುದು ಸಂವಿಧಾನದ ೨೫ನೇ ವಿಧಿಯ ಅಮಾನತಿಗೆ ಸಮನಾಗಿದೆ. ಆಹಾರ ಮತ್ತು ನೀರಿನ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಲು ನಮಗೆ ಹೇಳಲಾಗುತ್ತಿದೆ. ಶಿಕ್ಷಣ ಮತ್ತು ಆತ್ಮಸಾಕ್ಷಿಯ ನಡುವೆ ಒಂದನ್ನು ಆಯ್ಕೆ ಮಾಡಲು ಸೂಚಿಸಲಾಗುತ್ತಿದೆ. ನನ್ನ ಆಕ್ಷೇಪಣೆಯನ್ನು ಆದೇಶದಲ್ಲಿ ದಾಖಲಿಸಿಕೊಳ್ಳಬೇಕು” ಎಂದು ಪೀಠವನ್ನು ಕಾಮತ್ ಅವರು ಕೋರಿದರು.