Hijab Ban, Karnataka High Court

 
ಸುದ್ದಿಗಳು

ಶಾಸಕರ ಸಮಿತಿಯು ಸಾರ್ವಜನಿಕ ಸುವ್ಯವಸ್ಥೆ, ಮೂಲಭೂತ ಹಕ್ಕುಗಳನ್ನು ನಿರ್ಧರಿಸಲಾಗದು: ಹಿರಿಯ ವಕೀಲ ಕಾಮತ್‌

ಹಿಜಾಬ್‌ ಧರಿಸುವುದಕ್ಕೆ ವಿನಾಯಿತಿ ನೀಡಬೇಕೆ ಎಂಬುದನ್ನು ಕಾಲೇಜು ಅಭಿವೃದ್ದಿಗೆ ಸಮಿತಿಗೆ ಬಿಟ್ಟಿದ್ದಾರೆ. ಸಿಡಿಸಿಗೆ ಇದನ್ನು ಬಿಡುವುದು ಕಾನೂನುಬಾಹಿರ. ಸಾರ್ವಜನಿಕ ಸುವ್ಯವಸ್ಥೆಯು ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಪ್ರತಿಪಾದಿಸಿದ ಕಾಮತ್‌.

Bar & Bench

“ಶಾಸಕರನ್ನು ಒಳಗೊಂಡ ಕಾಲೇಜು ಅಭಿವೃದ್ಧಿ ಸಮಿತಿಯು (ಸಿಡಿಸಿ) ಸಾರ್ವಜನಿಕ ಸುವ್ಯವಸ್ಥೆ ಮತ್ತು ಮೂಲಭೂತ ಹಕ್ಕುಗಳ ಕುರಿತು ನಿರ್ಧರಿಸಲಾಗದು. ಅದು ಸರ್ಕಾರದ ಕೆಲಸ” ಎಂದು ಹಿಜಾಬ್‌ ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ಸೋಮವಾರ ಬಲವಾಗಿ ವಾದಿಸಿದರು.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠ ಇಂದು ಮುಂದುವರೆಸಿತು.

“ಹಿಜಾಬ್‌ ಧರಿಸುವುದಕ್ಕೆ ವಿನಾಯಿತಿ ನೀಡಬೇಕೆ ಎಂಬುದನ್ನು ಸಿಡಿಸಿಗೆ ಬಿಟ್ಟಿದ್ದಾರೆ. ಸಿಡಿಸಿಗೆ ಇದನ್ನು ಬಿಡುವುದು ಕಾನೂನುಬಾಹಿರ. ಸಾರ್ವಜನಿಕ ಸುವ್ಯವಸ್ಥೆಯು ಸರ್ಕಾರದ ಜವಾಬ್ದಾರಿ” ಎಂದು ಪ್ರತಿಪಾದಿಸಿದರು.

“ಹಾಗಾದರೆ, ಸಾರ್ವಜನಿಕ ಸುವ್ಯವಸ್ಥೆ ಎಂದರೇನು. ಆಕ್ಷೇಪಾರ್ಹ ಸರ್ಕಾರದ ಆದೇಶದ ಮೂಲಕ ರಾಜ್ಯ ಸರ್ಕಾರವು 25ನೇ ವಿಧಿಯನ್ನು ನಿರ್ಬಂಧಿಸಿದೆಯೋ ಅಥವಾ ಇಲ್ಲವೋ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಪ್ರಶ್ನಿಸಿದರು. ಇದಕ್ಕೆ ಕಾಮತ್‌ ಅವರು “ದಾರಿಯಲ್ಲಿ ನಾನು ನಡೆದು ಹೋಗುತ್ತಿರುವಾಗ ಕೆಲವರು ನನ್ನನ್ನು ಸುತ್ತುವರಿದ ರೇಗಿಸಿದ ಮಾತ್ರಕ್ಕೆ ಸಾರ್ವಜನಿಕ ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದು ಸರ್ಕಾರವು ಓಡಾಡುವುದನ್ನು ನಿರ್ಬಂಧಿಸಲಾಗದು” ಎಂದು ಪ್ರತಿಕ್ರಿಯಿಸಿದರು.

“ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುವುದನ್ನು ಖಾತರಿಪಡಿಸುವ ಕರ್ತವ್ಯವನ್ನು ಸರ್ಕಾರ ನಿಭಾಯಿಸಬೇಕು. ಒಂದು ವರ್ಗವು ಮತ್ತೊಂದು ವರ್ಗದ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಬಿಡದಿರುವುದು ಮೂಲಭೂತ ಹಕ್ಕಿನ ನಿರ್ಬಂಧಿಸಲು ಆಧಾರವಾಗಲಾರದು” ಎಂದರು.

“ಸಮವಸ್ತ್ರಕ್ಕೆ ಪೂರಕವಾದ ಹಿಜಾಬ್‌ ಅನ್ನೇ ವಿದ್ಯಾರ್ಥಿನಿಯರು ಧರಿಸುತ್ತಿದ್ದಾರೆ. ಬೇರೊಂದು ಬಣ್ಣದ ಸ್ಕಾರ್ಫ್‌ ಧರಿಸುತ್ತೇವೆ ಎಂದು ನಾವು ಹೇಳಿಲ್ಲ. ಸಮವಸ್ತ್ರದ ಬಣ್ಣದ ಸ್ಕಾರ್ಫ್‌ ಹಾಕಿಕೊಳ್ಳುತ್ತೇವೆ ಎಂದಿದ್ದೇವೆ” ಎಂದರು.

ಮೂಲ ಧಾರ್ಮಿಕ ಆಚರಣೆಗಳು ರಾಜ್ಯ ಸರ್ಕಾರದ ನಿರ್ಬಂಧಕ್ಕೆ ಒಳಪಟ್ಟಿರುತ್ತವೆಯೇ ಎಂಬ ನ್ಯಾ. ದೀಕ್ಷಿತ್‌ ಅವರ ಪ್ರಶ್ನೆಗೆ “ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಮತ್ತು ನೈತಿಕತೆಯ ವಿಷಯ ಮಾತ್ರವೇ ಅಲ್ಲದೆ ಧಾರ್ಮಿಕ ಆಚರಣೆಯೊಂದಿಗೆ ಸಂಬಂಧ ಹೊಂದಿರುವ ಯಾವುದೇ ಆರ್ಥಿಕ, ರಾಜಕೀಯ ಅಥವಾ ಇತರ ಜಾತ್ಯತೀತ ಚಟುವಟಿಕೆಗಳನ್ನು ನಿರ್ಬಂಧಿಸುವ ಕಾನೂನನ್ನು ರಾಜ್ಯ ಸರ್ಕಾರ ಮಾಡಬಹುದು. ಆದರೆ ಇದು ಮೂಲ (ಕೋರ್) ಧಾರ್ಮಿಕ ಆಚರಣೆಗಳಿಗೆ ಅನ್ವಯಿಸದು. ಈ ಮೂಲ ಆಚರಣೆಗಳು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದಾಗ ಮಾತ್ರ ಅವನ್ನು ಸರ್ಕಾಋವು ನಿಯಂತ್ರಿಸಬಹುದು” ಎಂದರು.

“ಸಾರ್ವಜನಿಕ ಸುವ್ಯವಸ್ಥೆ ಎಂಬುದು ಕಾರ್ಯಾಂಗದ ಕೆಲಸವಾಗಿದ್ದು, ಶಾಸಕರ ಸಮಿತಿಯದ್ದಲ್ಲ. ಇದು ಕಾನೂನುಬಾಹಿರ ಸಮಿತಿ. ಇದು ಶಾಸನದ ಮಿತಿಯಿಂದ ಹೊರಗಿದೆ” ಎಂದು ಹೇಳುವ ಮೂಲಕ ಸಿಡಿಸಿ ಅಧಿಕಾರವನ್ನು ಪ್ರಶ್ನಿಸಿದರು.

“ಸಿಡಿಸಿ ಸಮವಸ್ತ್ರವನ್ನು ಸೂಚಿಸುವ ಬಗ್ಗೆ ಮಾತ್ರ ಆದೇಶದಲ್ಲಿ ಹೇಳಲಾಗಿದೆ. ಅಲ್ಲಿ ಸಾರ್ವಜನಿಕ ಸುವ್ಯಸ್ಥೆಯ ಪ್ರಶ್ನೆಯ ಬಗ್ಗೆ ಹೇಳಿಲ್ಲ. ಅದನ್ನು ನೀವು ಊಹಿಸಿಕೊಳ್ಳಬೇಡಿ” ಎಂದು ಸಿಜೆ ಅವಸ್ಥಿ ಹೇಳಿದರು. . ಇದಕ್ಕೆ ಕಾಮತ್‌ ಅವರು “ಹಾಗಾದರೆ ಅವರು ಸಾರ್ವಜನಿಕ ಸುವ್ಯವಸ್ಥೆಯ ವಿಚಾರದಲ್ಲಿ ನಿರ್ಬಂಧ ವಿಧಿಸಲಾಗದು. ಯಾವುದೇ ತೆರನಾದ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಇಲ್ಲ ಎಂದು ಸರ್ಕಾರ ಹೇಳಿದರೆ ನನಗೆ ಸಂತೋಷ. ಸರ್ಕಾರದ ಆದೇಶ ರದ್ದಾಗಬೇಕು” ಎಂದರು. ಆದರೆ ಮುಂದೆ ಅವರು ಸರ್ಕಾರದ ಆದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿರುವ ಬಗ್ಗೆ ಪೀಠದ ಗಮನಸೆಳೆದರು. ಈ ವೇಳೆ ಸರ್ಕಾರದ ಮೂಲ ಆದೇಶವನ್ನು ಪರಿಶೀಲಿಸಿ ಅದರಲ್ಲಿ ಸಾರ್ವಜನಿಕ ಸುವ್ಯವಸ್ಥೆ ಎಂದಿರುವುದನ್ನು ಪೀಠವು ಖಚಿತಪಡಿಸಿಕೊಂಡಿತು.

ಮಾಧ್ಯಮ ನಿರ್ಬಂಧಕ್ಕೆ ಕೋರಿಕೆ

ವಿಚಾರಣೆಯ ಅಂತ್ಯದಲ್ಲಿ ವಕೀಲರೊಬ್ಬರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿದರು. ಇದಕ್ಕೆ ಪೀಠವು “ಯೂಟ್ಯೂಬ್‌ನಲ್ಲಿ ವಿಚಾರಣೆಯನ್ನು ಮಾತ್ರ ನಾವು ನಿಲ್ಲಿಸಬಹುದು. ಅದು ಎಲ್ಲ ಪಕ್ಷಕಾರರೂ ಒಪ್ಪಿದರೆ. ಇದು ಮಾತ್ರ ನಮ್ಮ ಕೈಯಲ್ಲಿದೆ. ಮಾಧ್ಯಮಗಳನ್ನು ನಿರ್ಬಂಧಿಸಲಾಗದು” ಎಂದರು. ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಲಾಗಿದೆ.