ಹಿಜಾಬ್‌ ಪ್ರಕರಣ: ಹಿರಿಯ ವಕೀಲರಾದ ಸಂಜಯ್‌ ಹೆಗಡೆ, ದೇವದತ್‌ ಕಾಮತ್‌ ಅವರ ವಾದದ ತಿರುಳೇನು?

ರಾಜ್ಯ ಸರ್ಕಾರವು ಬೆಂಕಿಯ ಜೊತೆ ಆಟವಾಡುತ್ತಿದೆ. ಹಿಜಾಬ್‌, ಧಾರ್ಮಿಕ ವಿಧಾನದ ಭಾಗವಲ್ಲ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ನಮ್ಮ ಮೂಲಭೂತ ಹಕ್ಕುಗಳು ಶಾಲಾ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿವೆಯೇ? ಎಂದು ಪ್ರಶ್ನಿಸಿದ ಕಾಮತ್‌.
Karnataka High Court, Sanjay Hegde and Devadutt Kamat

Karnataka High Court, Sanjay Hegde and Devadutt Kamat

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಜಾಗತಿಕ ಗಮನಸೆಳೆದಿರುವ ಪ್ರಕರಣದ ವಿಚಾರಣೆ ಗುರುವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಿತು. ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಪೋಷಕರ ಮೂಲಕ ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಪೂರ್ಣ ಪೀಠವು ಗುರುವಾರ ಎರಡು ತಾಸುಗಳಷ್ಟು ಸುದೀರ್ಘ ಕಾಲ ವಿಚಾರಣೆ ನಡೆಸಿತು.

ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರ ಕೊಠಡಿಯು ಹಿರಿಕಿರಿಯ ವಕೀಲರಿಂದ ಕಿಕ್ಕಿರಿದು ತುಂಬಿತ್ತು. ಕುಳಿತುಕೊಳ್ಳಲು ಕುರ್ಚಿಗಳು ಇಲ್ಲದೇ ಇದ್ದುದರಿಂದ ಸಾಕಷ್ಟು ಮಂದಿ ನಿಲುಗಾಲಲ್ಲಿ ನಿಂತು ವಾದ-ಪ್ರತಿವಾದ ಆಲಿಸಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಕರ್ನಾಟಕ ಮೂಲದ ಸಂಜಯ್‌ ಹೆಗಡೆ ಮತ್ತು ದೇವದತ್‌ ಕಾಮತ್‌, ಕಾಲೇಜು ಅಭಿವೃದ್ಧಿ ಸಮಿತಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಕೇರಳ ಮೂಲದ ಅರ್ಜಿದಾರರ ಪರವಾಗಿದ್ದ ವಕೀಲ ಕಾಳೀಶ್ವರಂ ರಾಜ್‌ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ಸೂಚನೆಯಂತೆ ಮೊದಲಿಗೆ ಹಿರಿಯ ವಕೀಲ ಸಂಜಯ್‌ ಹೆಗಡೆ ಮತ್ತು ದೇವದತ್‌ ಕಾಮತ್‌ ಅವರು ವಾದ ಮಂಡಿಸಿದರು. ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಸಂಜಯ್‌ ಹೆಗಡೆ ವಾದದ ಪ್ರಮುಖ ಅಂಶಗಳು:

  • ಸಮಯಕ್ಕೆ ಸರಿಯಾಗಿ ಹಿಜಾಬ್‌ ಧರಿಸುವ ಈ ಸಣ್ಣ ಪ್ರಕರಣವನ್ನು ನಿಯಂತ್ರಿಸುವ ಬದಲು ಅದನ್ನು ನಿಯಂತ್ರಣ ತಪ್ಪಲು ಬಿಡಲಾಗಿದೆ.

  • ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಅರ್ಜಿದಾರರು ಕಾಲೇಜಿನಲ್ಲಿ ತಾರತಮ್ಯ ಅನುಭವಿಸುತ್ತಿದ್ದಾರೆ. ಅವರಿಗೆ ಹಾಜರಾತಿ ನೀಡದೇ ತರಗತಿಯಿಂದ ಹೊರಗೆ ಕೂರುವಂತೆ ಮಾಡಲಾಗಿದೆ.

  • ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನಿಬಂಧನೆ ಇಲ್ಲ.

  • ಕಾಲೇಜುಗಳಲ್ಲಿ ಸಮವಸ್ತ್ರವನ್ನು ತಮಿಳುನಾಡಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಿತು. ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಮಾಡುವುದರಿಂದ ಫ್ಯಾಶನ್‌ ಶೋ ಮತ್ತಿತರ ಚಟುವಟಿಕೆಗಳಿಗೆ ತಡೆಯಾಗುತ್ತದೆ ಎಂಬ ನಂಬಿಕೆ ಇದೆ.

  • ಎರಡು ರೀತಿಯ ನಿಯಮಗಳಿವೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ಸುಧಾರಣೆ) ನಿಯಮಗಳು 1995, ನಿಯಮ 11. ಸಮವಸ್ತ್ರ ಬಟ್ಟೆ, ಪಠ್ಯಪುಸಕ್ತ ಇತ್ಯಾದಿ ನಿಬಂಧನೆ. ಇವುಗಳು ಶಾಲೆಗಳಿಗೆ ಮೀಸಲಾದವು. ನಿಯಮ 3 ಅನ್ನು ಉಲ್ಲೇಖಿಸಿ - ವಿಭಾಗ 2- ರ ಷರತ್ತು (25) ಮತ್ತು (32) ಉದ್ದೇಶಕ್ಕಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ತರಗತಿಗಳ ವಿವರಣೆಯಾಗಿದೆ.

  • (ಎ) 'ಪ್ರಾಥಮಿಕ ಶಿಕ್ಷಣ' ಒಂದರಿಂದ ಏಳನೇ ತರಗತಿ ಹೊಂದಿರಬೇಕು; ಒಂದರಿಂದ ನಾಲ್ಕನೇ ತರಗತಿಗೆ ಪ್ರಾಥಮಿಕ ಮತ್ತು ಐದರಿಂದ ಏಳನೇ ತರಗತಿವರೆಗೆ ಹಿರಿಯ ಪ್ರಾಥಮಿಕ; (ಬಿ) 'ಪ್ರೌಢ ಶಿಕ್ಷಣ'ವು ಎಂಟರಿಂದ ಹತ್ತನೇ ತರಗತಿಗಳನ್ನು ಹೊಂದಿರಬೇಕು; ಆದ್ದರಿಂದ ಸರ್ಕಾರದ ಆದೇಶವು ಪದವಿ ಪೂರ್ವ ಶಿಕ್ಷಣದ ತರಗತಿಗೆ ಅನ್ವಯಿಸುವುದಿಲ್ಲ.

  • ನಿಯಮ ಉಲ್ಲಂಘನೆಗೆ ದಂಡ ವಿಧಿಸಬೇಕು ಎಂದು ಹೇಳಲಾಗಿಲ್ಲ. ದಂಡ ವಿಧಿಸಬೇಕಾಗಿದ್ದರೂ ಸಹ ಮಕ್ಕಳನ್ನು ತರಗತಿಗಳಿಂದ ದೂರವಿಡುವುದು ಪ್ರಮಾಣಾನುಗುಣವಾದ ದಂಡವೇ ಎಂಬುದನ್ನು ಪೀಠ ಪರಿಶೀಲಿಸಬೇಕು. ಕಾಯಿದೆಯ ಸೆಕ್ಷನ್ 17ರ ಉಲ್ಲಂಘನೆಗಾಗಿ ವಿಸ್ತೃತ ನೆಲೆಯಲ್ಲಿ ದಂಡ ವಿಧಿಸಲಾಗುತ್ತದೆ. ಪರೀಕ್ಷೆಯಲ್ಲಿ ನಕಲು ಮಾಡುವುದು, ರ್ಯಾಗಿಂಗ್ ಮಾಡುವುದು ಇತ್ಯಾದಿಗಳಿಗೆ ದಂಡವಿದೆ. ಆದರೆ, ಸಮವಸ್ತ್ರಕ್ಕೆ ಅವಕಾಶ ಇಲ್ಲದ ಕಾರಣ ಏಕರೂಪದ ವಸ್ತ್ರ ಸಂಹಿತೆ ಉಲ್ಲಂಘನೆಗೆ ದಂಡ ವಿಧಿಸಲು ಅವಕಾಶವಿಲ್ಲ.

  • ಉಡುಗೆ-ತೊಡುಗೆ, ಊಟ-ತಿಂಡಿ, ನಂಬಿಕೆ ಏನೇ ಇರಲಿ, ಅವರೆಲ್ಲರೂ ನಮ್ಮ ಹೆಣ್ಣು ಮಕ್ಕಳು. ಇದು ಕೇವಲ ಅಗತ್ಯ ಧಾರ್ಮಿಕ ಆಚರಣೆಯ ಬಗ್ಗೆ ಅಲ್ಲ. ಇದು ಅಗತ್ಯ ಶಿಕ್ಷಣ ಹಕ್ಕುಗಳ ಪ್ರಕರಣ. ವಿದ್ಯಾರ್ಥಿಗಳು ಕಾಲೇಜಿಗೆ ಮರಳಬೇಕು ಎಂದು ಹೇಳುವುದು ಸುಲಭ. ನ್ಯಾಯಾಲಯವು ಪ್ರಕರಣವನ್ನು ನಿರ್ಧರಿಸುವವರೆಗೆ ಮಧ್ಯಮ ಮಾರ್ಗವನ್ನು ಅನುಸರಿಸುವುದು ವಿವೇಕ.

  • ವಕೀಲನಾಗಿ ನನ್ನ ಧಾರ್ಮಿಕ ನಂಬಿಕೆಯಲ್ಲಿ ಭಾರತದ ಸಂವಿಧಾನವು ಸರ್ವೋಚ್ಚವಾಗಿದೆ. 14, 21ನೇ ವಿಧಿಗಳ ಬಗ್ಗೆ ಬಹು ವ್ಯಾಖ್ಯಾನಗಳು ಇರಬಹುದು. ಆದರೆ ಅದು ಎಲ್ಲರಿಗೂ ಅನ್ವಯಿಸುವ ಪ್ರಶ್ನೆಯೇ ಇಲ್ಲ.

  • ಭಾರತದ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುವ ರಾಜ್ಯ ಕರ್ನಾಟಕ. ಇಲ್ಲಿ ಇಂಥದ್ದಕ್ಕೆ ಅವಕಾಶ ಮಾಡಿಕೊಡಲಾಗದು.

  • ಪ್ರಕರಣವನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ (ಸಿಡಿಸಿ) ಬಿಡಬೇಕು ಎಂಬುದು ಸರಿಯಲ್ಲ. ಈ ವಿಚಾರದಲ್ಲಿ ನಾನು ಕಾಮತ್‌ ಅವರಿಗೆ ಬೆಂಬಲ ಸೂಚಿಸುತ್ತೇನೆ. ಸ್ಥಳೀಯ ಶಾಸಕರು, ಸಿಡಿಸಿಗೆ ತಮ್ಮದೇ ಆದ ಲೆಕ್ಕಾಚಾರಗಳು ಇರುತ್ತವೆ.

  • ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ವಿದ್ಯಾರ್ಥಿಯಾಗಿದ್ದಾಗ ಅವರನ್ನು ಶಾಲೆಯಲ್ಲಿ ಪ್ರತ್ಯೇಕವಾಗಿ ಕೂಡಿಸಲಾಗಿತ್ತು. ಗಣರಾಜ್ಯವಾದ ಹಲವು ವರ್ಷಗಳ ಬಳಿಕ ಈ ರೀತಿಯ ಪ್ರತ್ಯೇಕತೆ ಬೇಡ. ನಮ್ಮ ರೀತಿಯ ದೇಶ ಮತ್ತೊಂದಿಲ್ಲ. ನಮ್ಮದು ಹಲವು ರೀತಿಯ ಪ್ರಭಾವಗಳಿಗೆ ಒಳಗಾಗಿರುವ ಮತ್ತು ಜನರನ್ನು ಒಳಗೊಂಡಿರುವ ರಾಷ್ಟ್ರ.

  • ನಮ್ಮ ಸಂಪ್ರದಾಯವು ಸಹನೆ ಬೋಧಿಸುತ್ತದೆ; ಸಹಿಷ್ಣುತೆ ನಮ್ಮ ತತ್ವ; ನಮ್ಮ ಸಂವಿಧಾನದಲ್ಲಿ ಸಹಿಷ್ಣುತೆ ಅಡಕಗೊಳಿಸಲಾಗಿದೆ; ನಾವು ಅದನ್ನು ದುರ್ಬಲಗೊಳಿಸಬಾರದು ಎಂದು ಬಿಜೊ ಇಮ್ಯಾನ್ಯುಲ್‌ ಪ್ರಕರಣ ಉಲ್ಲೇಖಿಸಿದ ಸಂಜಯ್‌ ಹೆಗಡೆ.

  • ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರಕ್ಕೆ ಎಜಿ ಜೊತೆ ಕುಳಿತು ಚರ್ಚಿಸಲು ಸಿದ್ಧ. ಹಿಜಾಬ್‌ ಧರಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನ ಮತ್ತು ಆತ್ಮಸಾಕ್ಷಿಯ ವ್ಯಾಪ್ತಿಗೆ ಬರುತ್ತದೆ.

  • ಸಾಂವಿಧಾನಿಕ ಸಮಸ್ಯೆಗಳನ್ನು ನಿರ್ಧರಿಸದೆ ಶಾಸನಬದ್ಧ ಪ್ರಶ್ನೆಗಳ ಆಧಾರದ ಮೇಲೆ ಪ್ರಕರಣವನ್ನು ನಿರ್ಧರಿಸಲು ಸಾಧ್ಯವಾದರೆ, ಅದನ್ನು ನಿರ್ಧರಿಸಬೇಕು ಎಂದು ನನ್ನ ಅಭಿಪ್ರಾಯ.

  • ಸಾಂವಿಧಾನಿಕ ಹಕ್ಕುಗಳ ವಿಚಾರವನ್ನು ಅವರು ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಅವುಗಳನ್ನು ರಾಜಕಾರಣಿಗಳು ಅಥವಾ ಸಂಸದರಿಗೆ ಬಿಡಲಾಗದು. ಅಂತಿಮವಾಗಿ ಸಂವಿಧಾನ ಎಲ್ಲಾ ಪ್ರಜೆಗಳನ್ನು ರಕ್ಷಿಸುತ್ತದೆ.

  • ಸದರಿ ಪ್ರಕರಣದಲ್ಲಿ ಸಂಸ್ಥೆಯು ಸರ್ಕಾರದ ಕಾಲೇಜಾಗಿದೆ. ಇದು ರಾಜ್ಯ ಮತ್ತು ದೇಶದ ಎಲ್ಲಾ ನಾಗರಿಕರಿಗೆ ಸಂಬಂಧಿಸಿದ್ದಾಗಿದೆ. ನಿಮ್ಮ ನಂಬಿಕೆಯನ್ನು ತ್ಯಜಿಸಿ ಕಾಲೇಜಿಗೆ ಬರಬೇಕು ಎಂದು ನಿರ್ದಿಷ್ಟ ವಿದ್ಯಾರ್ಥಿಗಳಿಗೆ ಹೇಳಬಹುದೇ?

  • ಮೋಟರ್‌ ವಾಹನ ಕಾಯಿದೆ ಸೇರಿದಂತೆ ಹಲವು ಕಾನೂನುಗಳಲ್ಲಿ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ಕಲ್ಪಿಸಿರುವ ನಿರ್ದಿಷ್ಟ ನಿಬಂಧನೆಗಳಿವೆ.

Also Read
[ಬ್ರೇಕಿಂಗ್]‌ ಪ್ರಕರಣ ಇತ್ಯರ್ಥವಾಗುವವರೆಗೆ ಧಾರ್ಮಿಕ ಸಂಕೇತ ಬಿಂಬಿಸುವ ಉಡುಪು ಧರಿಸಲು ನಿರ್ಬಂಧ: ಕರ್ನಾಟಕ ಹೈಕೋರ್ಟ್‌

ದೇವದತ್‌ ಕಾಮತ್‌ ವಾದದ ಪ್ರಮುಖ ಅಂಶಗಳು:

  • ಮೂರು ಪ್ರತ್ಯೇಕ ಹೈಕೋರ್ಟ್‌ಗಳು ತಮ್ಮ ತೀರ್ಪಿನಲ್ಲಿ ಹಿಜಾಬ್‌ ಧರಿಸುವುದು 25ನೇ ವಿಧಿಯ ಭಾಗವಲ್ಲ ಎಂದು ಹೇಳಿವೆ ಎಂಬುದನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಆದೇಶ ಮಾಡಿದೆ. ಸರ್ಕಾರದ ಆದೇಶವು ಮೇಲ್ನೋಟಕ್ಕೆ ಸರಿಯಾಗಿಲ್ಲ. ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮೂರೂ ತೀರ್ಪುಗಳು ಸರ್ಕಾರದ ವಿರುದ್ಧವೇ ಇವೆ. ರಾಜ್ಯ ಸರ್ಕಾರ ತಪ್ಪಾಗಿ ಅರ್ಥೈಸಿಕೊಂಡಿದೆ.

  • ಸರ್ಕಾರದ ಆದೇಶವನ್ನು ಪರಿಗಣಿಸಿ ಕಾಲೇಜುಗಳು ಶಿರವಸ್ತ್ರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳುತ್ತಿವೆ. ಸರ್ಕಾರದ ಆದೇಶದ ಅಡಿಪಾಯವೇ ಕುಸಿದಾಗ ಉಳಿದದ್ದು ನಿಲ್ಲುವುದಿಲ್ಲ.

  • ಮೊದಲನೆಯದಾಗಿ ಫಾತಿಮಾ ವರ್ಸಸ್‌ ಕೇರಳ ರಾಜ್ಯ ಪ್ರಕರಣವನ್ನು ಆಧರಿಸಿರುವ ಸರ್ಕಾರದ ಆದೇಶ. ಇಲ್ಲಿ ಶಿಕ್ಷಣ ಸಂಸ್ಥೆಯು ಖಾಸಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಂಸ್ಥೆಯಾಗಿದೆ. ಇದು ಸರ್ಕಾರಿ ಸಂಸ್ಥೆಗೆ ಸಂಬಂಧಿಸಿದ್ದಲ್ಲ. ಪ್ರತ್ಯೇಕ ಮೂಲಭೂತ ಹಕ್ಕು ಹೊಂದಿರುವ ಖಾಸಗಿ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳಿಗೆ ಆ ತೀರ್ಪು ಸಂಬಂಧಿಸಿದ್ದಾಗಿದೆ.

  • ಎರಡನೆಯದು, ಬಾಂಬೆ ಹೈಕೋರ್ಟ್‌ ತೀರ್ಪನ್ನು ಸರ್ಕಾರದ ಆದೇಶದಲ್ಲಿ ಆಧರಿಸಲಾಗಿದೆ. ಇದು ಬಾಲಕಿಯರ ಶಾಲೆಗೆ ಸಂಬಂಧಿಸಿದ್ದು, ಬಾಲಕ-ಬಾಲಕಿಯರ ಶಾಲೆಗೆ ಸಂಬಂಧ ಹೊಂದಿಲ್ಲದಿರುವುದರಿಂದ ಅದು ಇಲ್ಲಿ ಅನ್ವಯಿಸುವುದಿಲ್ಲ.

  • ಮೂರನೆಯದಾಗಿ, ಮದ್ರಾಸ್‌ ಹೈಕೋರ್ಟ್‌ ಹೊರಡಿಸಿರುವ ಮತ್ತೊಂದು ತೀರ್ಪು ಸಂವಿಧಾನದ 25ನೇ ವಿಧಿಗೆ ಸಂಬಂಧಿಸಿದ್ದಲ್ಲ. ಇದು ಶಿಕ್ಷಕರ ಸಮವಸ್ತ್ರಕ್ಕೆ ಸಂಬಂಧಿಸಿದ್ದಾಗಿದೆ. ಶಿಕ್ಷಕರು ಸಮವಸ್ತ್ರ ಧರಿಸಬೇಕು ಎಂದು ಹೇಳುವುದಾಗಿತ್ತು. ಇದರಲ್ಲಿ ಸಂವಿಧಾನದ 25ನೇ ವಿಧಿ, ಶಿರವಸ್ತ್ರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಉಲ್ಲೇಖ ಮಾಡಲಾಗಿಲ್ಲ.

  • ಅನುಕೂಲಕರವಲ್ಲದ ಧಾರ್ಮಿಕ ವಸ್ತುಗಳನ್ನು ಧರಿಸಲು ಒತ್ತಾಯಿಸಬಾರದು ಎಂಬ ಪೀಠದ ಹೇಳಿಕೆಯು ವಿದ್ಯಾರ್ಥಿಗಳ ದೃಷ್ಟಿಯಿಂದ ಸಂವಿಧಾನದ 25ನೇ ವಿಧಿಯ ಅಮಾನತಿಗೆ ಸಮನಾಗಿದೆ. ಆಹಾರ ಮತ್ತು ನೀರಿನ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಲು ನಮಗೆ ಹೇಳಲಾಗುತ್ತಿದೆ. ಶಿಕ್ಷಣ ಮತ್ತು ಆತ್ಮಸಾಕ್ಷಿಯ ನಡುವೆ ಒಂದನ್ನು ಆಯ್ಕೆ ಮಾಡಲು ಸೂಚಿಸಲಾಗುತ್ತಿದೆ.

  • ತರಗತಿ ಆರಂಭವಾಗಬೇಕು ಎಂಬ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದಕ್ಕೆ ನನ್ನ ಸಹಮತವಿದೆ. ಆದರೆ, ಇದು ಸಮವಸ್ತ್ರಕ್ಕೆ ಸಂಬಂಧಿಸಿದ್ದಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಲಿದ್ದಾರೆ. ಸಮವಸ್ತ್ರಕ್ಕೆ ಅನುಗುಣವಾದ ನಿರ್ದಿಷ್ಟ ಬಣ್ಣದ ಹಿಜಾಬ್‌ ಅನ್ನೂ ಧರಿಸಲಿದ್ದಾರೆ. ಹಿಂದೆ ಅವರು ಹಿಜಾಬ್‌ ಧರಿಸುತ್ತಿದ್ದಂತೆ ಧರಿಸಲಿ. ಇದು ಮತ್ತೊಬ್ಬರಿಗೆ ಸಮಸ್ಯೆ ಉಂಟು ಮಾಡುವುದಿಲ್ಲ.

  • ರಾಜ್ಯ ಸರ್ಕಾರವು ಬೆಂಕಿಯ ಜೊತೆ ಆಟವಾಡುತ್ತಿದೆ. ಹಿಜಾಬ್‌, ಧಾರ್ಮಿಕ ವಿಧಾನದ ಭಾಗವಲ್ಲ ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ನಮ್ಮ ಮೂಲಭೂತ ಹಕ್ಕುಗಳು ಶಾಲಾ ಸಮಿತಿಯ ನಿರ್ಧಾರಕ್ಕೆ ಒಳಪಟ್ಟಿವೆಯೇ?

Related Stories

No stories found.
Kannada Bar & Bench
kannada.barandbench.com