Hijab, Supreme Court
Hijab, Supreme Court 
ಸುದ್ದಿಗಳು

ಹಿಜಾಬ್‌ ನಿಷೇಧ ಪ್ರಕರಣ: ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌; ಪ್ರಕರಣ ಮುಂದೂಡಲು ನಕಾರ

Bar & Bench

ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸೋಮವಾರ ನಡೆಸಿದ ಸುಪ್ರೀಂ ಕೋರ್ಟ್‌ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿಮಾಡಿದೆ [ಫಾತಿಮಾ ಬುಶ್ರಾ ವರ್ಸಸ್‌ ಕರ್ನಾಟಕ ಸರ್ಕಾರ].

ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾ. ಹೇಮಂತ್‌ ಗುಪ್ತಾ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರಿದ್ದ ಪೀಠವು ಪ್ರಕರಣದ ವಿಚಾರಣೆಯ ಮುಂದೂಡಿಕೆಗೆ ಕೋರಿದ ಪಕ್ಷಕಾರರ ವರ್ತನೆಯ ಬಗ್ಗೆಯೂ ಸಿಡಿಮಿಡಿಗೊಂಡಿತು.

ಮುಂದೂಡಿಕೆಯ ಕೋರಿಕೆಯ ಹಿಂದಿನ ಉದ್ದೇಶವನ್ನು ಅನುಮಾನಿಸಿದ ಪೀಠವು, "ನಾವು ಫೋರಂ ಶಾಪಿಂಗ್‌ಗೆ (ಅನುಕೂಲಕರ ನ್ಯಾಯಾಲಯದ ಮುಂದೆ ಪಕ್ಷಕಾರರು ಎಡತಾಕುವ ಪ್ರಕ್ರಿಯೆ] ಅನುಮತಿಸುವುದಿಲ್ಲ. ನೀವು ಇಷ್ಟು ದಿನ ಪ್ರಕರಣವನ್ನು ಶೀಘ್ರ ಪಟ್ಟಿ ಮಾಡಲು ಕೋರುತ್ತಿದ್ದಿರಿ, ಈಗ ಮುಂದೂಡಲು ಕೋರುತ್ತಿದ್ದೀರಿ. ನಾವು ಇದನ್ನು ಅನುಮತಿಸುವುದಿಲ್ಲ," ಎಂದು ನ್ಯಾಯಾಲಯ ಹೇಳಿತು. ಈ ಹಿಂದೆ ಪ್ರಕರಣವನ್ನು ಶೀಘ್ರ ಪಟ್ಟಿ ಮಾಡುವಂತೆ ಆರು ಬಾರಿ ಪಕ್ಷಕಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದರು.

ಅಂತಿಮವಾಗಿ ನೋಟಿಸ್‌ ಜಾರಿಗೆ ಸೂಚಿಸಿ ಸೆಪ್ಟೆಂಬರ್ 5, ಸೋಮವಾರಕ್ಕೆ ಪ್ರಕರಣವನ್ನು ವಿಚಾರಣೆಗೆ ಮುಂದೂಡಿತು.

ಹಿಜಾಬ್‌ ಧಾರಣೆಯು ಇಸ್ಲಾಂನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಅದಕ್ಕೆ ಆತ್ಮಸಾಕ್ಷಿ ಸ್ವಾತಂತ್ರ್ಯದ ರಕ್ಷೆಯೂ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು.

ಶಾಲಾ ಸಮವಸ್ತ್ರ ಸೂಚಿಸುವುದರಿಂದ ಅಭಿವ್ಯಕ್ತಿ ಮತ್ತು ಖಾಸಗಿ ಸ್ವಾತಂತ್ರ್ಯ ಉಲ್ಲಂಘನೆಯಾಗುವುದಿಲ್ಲ. ಅದು ಸಮಂಜಸ ನಿರ್ಬಂಧವಾಗಿದ್ದು, ಅದಕ್ಕೆ ಸಾಂವಿಧಾನಿಕ ಅನುಮತಿ ಇದೆ. ಆದೇಶ ಹೊರಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಹೀಗಾಗಿ, ಸರ್ಕಾರದ ಆದೇಶ ಸಿಂಧುವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ಕೆ ಎಂ ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿತ್ತು.

ಹೈಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ಅರ್ಜಿದಾರರು, ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಖಾಸಗಿತನದ ಹಕ್ಕಿನ ವ್ಯಾಪ್ತಿಗೆ ಹಿಜಾಬ್‌ ಧಾರಣೆ ಹಕ್ಕು ಬರುತ್ತದೆ ಎಂಬದನ್ನು ಪರಿಗಣಿಸುವಲ್ಲಿಯೂ ಕರ್ನಾಟಕ ಹೈಕೋರ್ಟ್‌ ಎಡವಿದೆ ಎಂದಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯಿದೆ 1983ರ ಮತ್ತು ಅದರ ಅಡಿ ರೂಪಿಸಲಾಗಿರುವ ನಿಯಮಗಳ ಅಡಿ ಕಡ್ಡಾಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು ಎಂಬ ನಿಯಮವಿಲ್ಲ. “ಶಿಕ್ಷಣ ಕಾಯಿದೆಯು ವಿದ್ಯಾರ್ಥಿಗಳಿಗೆ ಬದಲಾಗಿ ಸಂಸ್ಥೆಗಳಲ್ಲಿ ಸುಧಾರಣೆ ತರುವ ಉದ್ದೇಶ ಹೊಂದಿದೆ. ಕಾಯಿದೆ ಸೆಕ್ಷನ್‌ 3 ಮತ್ತು 7ರಲ್ಲಿ ಶಿಕ್ಷಣ, ಪಠ್ಯಕ್ರಮ, ಭಾಷಾ ಮಾಧ್ಯಮ ಇತ್ಯಾದಿ ಸುಧಾರಣೆಗೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಕಲ್ಪಿಸಲಾಗಿದೆ. ಅದಾಗ್ಯೂ, ಈ ಯಾವುದೇ ನಿಬಂಧನೆಗಳು ವಿದ್ಯಾರ್ಥಿಗಳಿಗೆ ಸಮವಸ್ತ್ರ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿಲ್ಲ” ಎಂದು ಮನವಿಯಲ್ಲಿ ಹೇಳಲಾಗಿದೆ.