AAB
AAB 
ಸುದ್ದಿಗಳು

[ಹಿಜಾಬ್‌ ತೀರ್ಪು] ನ್ಯಾಯಮೂರ್ತಿಗಳಿಗೆ ಬೆದರಿಕೆ ವಿರೋಧಿಸಿ ಮಾರ್ಚ್‌ 23ರಂದು ವಕೀಲರ ಸಂಘದಿಂದ ಪ್ರತಿಭಟನೆ

Bar & Bench

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧವನ್ನು ಎತ್ತಿ ಹಿಡಿಯುವ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಕೆಲವು ಮುಸ್ಲಿಂ ಸಂಘಟನೆಗಳ ನಾಯಕರು ಜೀವ ಬೆದರಿಕೆ ಹಾಕಿರುವುದನ್ನು ಬೆಂಗಳೂರು ವಕೀಲರ ಸಂಘ ಸೋಮವಾರ ಖಂಡಿಸಿದೆ.

ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ ಪದಾಕಾರಿಗಳ ತುರ್ತು ಸಾಮಾನ್ಯ ಸಭೆಯಲ್ಲಿ ಈ ಕುರಿತು ಖಂಡನಾ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಅಲ್ಲದೇ, ನ್ಯಾಯಮೂರ್ತಿಗಳಿಗೆ ಒಡ್ಡಿರುವ ಬೆದರಿಕೆ ವಿರೋಧಿಸಿ ಮಾರ್ಚ್‌ 23, ಬುಧವಾರದಂದು ಮಧ್ಯಾಹ್ನ 12.30ಕ್ಕೆ ಹೈಕೋರ್ಟ್ ಮುಂಭಾಗ ವಕೀಲರ ಪ್ರತಿಭಟನೆಯನ್ನು ನಡೆಸಲು ಸಹ ಸಂಘ ನಿರ್ಣಯಿಸಿದೆ. ನ್ಯಾಯಾಂಗದ ಘನತೆ ಮತ್ತು ಅದರಡಿ ಕಾರ್ಯನಿರ್ವಹಿಸುವ ನ್ಯಾಯಮೂರ್ತಿಗಳು ಹಾಗೂ ವಕೀಲರನ್ನು ರಕ್ಷಿಸಲು ಮುಂದಾಗುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಲು ಕೂಡ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನ್ಯಾಯಾಂಗದ ಅಡಿ ಕಾರ್ಯನಿರ್ವಹಿಸುವ ಎಲ್ಲ ವಕೀಲರ ರಕ್ಷಣೆಗೆ ಕಾಯಿದೆಯನ್ನು ರೂಪಿಸುವಂತೆ ಆಗ್ರಹಿಸಲು ಸಹ ವಕೀಲರ ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ತಿಳಿಸಿದ್ದಾರೆ.