ವಕೀಲರ ಸಂಘ ಆರೋಪಿ ಪ್ರತಿನಿಧಿಸುವುದಿಲ್ಲ ಎಂಬುದನ್ನು ಸಾಂವಿಧಾನಿಕ ಆಡಳಿತ ಎನ್ನಬಹುದೇ? ನಿವೃತ್ತ ನ್ಯಾ. ರವೀಂದ್ರನ್‌

ನ್ಯಾಯಾಲಯಗಳು ನಿರ್ದೇಶನಗಳನ್ನು ನೀಡುವಾಗ ಕಳಕಳಿ ಹೊಂದಿರಬೇಕು. ಕಾರ್ಯಾಂಗಕ್ಕೂ ತನ್ನದೇ ಆದ ಜವಾಬ್ದಾರಿಗಳಿವೆ. ಸಾಂವಿಧಾನಿಕ ಆಡಳಿತದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ನ್ಯಾಯಮೂರ್ತಿಗಳಿಗೆ ಸಲಹೆ ನೀಡಿದ ನ್ಯಾ. ರವೀಂದ್ರನ್‌.
Supreme Court Retired Justice R V Raveendran
Supreme Court Retired Justice R V Raveendran

“ನಿರ್ದಿಷ್ಟ ಆರೋಪಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಕೆಲವು ವಕೀಲರ ಸಂಘಗಳು ಹೇಗೆ ನಿಲುವಳಿ ಪಾಸು ಮಾಡುತ್ತವೆ ಎಂಬುದು ನನಗೆ ತಿಳಿದಿಲ್ಲ. ಇದು ಆಶ್ಚರ್ಯಕರ ಬೆಳವಣಿಗೆ. ಇದನ್ನು ಸಾಂವಿಧಾನಿಕ ಆಡಳಿತ ಎನ್ನಬಹುದೇ” ಎಂದು ಪೆಗಸಸ್‌ ಹಗರಣದ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯ ನೇಮಿಸಿರುವ ಸಮಿತಿಯ ನೇತೃತ್ವ ವಹಿಸಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್‌ ವಿ ರವೀಂದ್ರನ್‌ ವಿಷಾದ ವ್ಯಕ್ತಪಡಿಸಿದರು.

"ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರ ಹಿಂಪಡೆದ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಮೈಸೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್‌ ಅವರು ʼಕಾಶ್ಮೀರ ಮುಕ್ತಗೊಳಿಸಿʼ ಎಂಬ ಭಿತ್ತಿಪತ್ರ ಹಿಡಿದುಕೊಂಡಿದ್ದರು. ಇದಕ್ಕೆ ಮೈಸೂರು ಪೊಲೀಸರು ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನಳಿನಿ ಅವರಿಗೆ ಯಾರೂ ವಕಾಲತ್ತು ವಹಿಸಬಾರದು ಎಂದು ಮೈಸೂರು ವಕೀಲರ ಸಂಘ ನಿರ್ಣಯ ಕೈಗೊಂಡಿತ್ತು ಎಂಬುದನ್ನು ಇಲ್ಲಿ ನೆನೆಯಬಹುದು.

ಕರ್ನಾಟಕ ಹೈಕೋರ್ಟ್‌, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಬೆಂಗಳೂರು ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ʼಸಂವಿಧಾನ ದಿನಾಚರಣೆʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ನ್ಯಾಯಾಲಯಗಳು ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸುವವರೆಗೆ ಆತ ಮುಗ್ಧನಾಗಿರುತ್ತಾನೆ. ಆದರೆ, ನ್ಯಾಯಾಲಯವು ಅಪರಾಧವನ್ನು ನಿರ್ಧರಿಸುವುದಕ್ಕೂ ಮುಂಚಿತವಾಗಿ ನಿರ್ದಿಷ್ಟ ಆರೋಪಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿ ಆತನನ್ನು ಅಪರಾಧಿಯಾಗಿಸಲಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.

“ವೈದ್ಯರೊಬ್ಬರು ನಿರ್ದಿಷ್ಟ ವರ್ಗದ ರೋಗಿಗಳಿಗೆ ಚಿಕಿತ್ಸೆ ನೀಡಿ ಮತ್ತೊಂದು ವರ್ಗಕ್ಕೆ ಚಿಕಿತ್ಸೆ ನೀಡುವುದಿಲ್ಲ ಎಂದರೆ ಏನು ಮಾಡುವುದು. ಆರೋಪಿಯನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಲು ಇಷ್ಟವಿಲ್ಲ ಎಂದರೆ ವಕೀಲರು ಹಿಂದೆ ಸರಿಯಬಹುದು. ಆದರೆ, ವಕೀಲರ ಸಂಘವು ಇಂಥ ಆರೋಪಿಯನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಗೆ ಹೇಳಲಾಗುತ್ತದೆ? ಆರೋಪಿ ಎಷ್ಟೇ ಕೆಟ್ಟವನಾಗಿದ್ದರೂ ಹೀಗೆ ಮಾಡಬಹುದೇ? ಹೀಗೆ ಮಾಡುವುದು ವಕೀಲಿಕೆ ಎನಿಸಿಕೊಳ್ಳುವುದಿಲ್ಲ. ಕಾನೂನು ಪಾಲನೆ ಎಂದರೆ ಇದಲ್ಲ. ಸಾಂವಿಧಾನಿಕ ಗುರಿಗಳನ್ನು ಸಾಧಿಸುವ ರೀತಿ ಇದಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ವಕೀಲರು ನ್ಯಾಯಾಂಗದ ಭಾಗ. ಹೊರಗಿನ ಶಕ್ತಿಗಳಿಂದ ನ್ಯಾಯಾಂಗ ಮತ್ತು ನ್ಯಾಯಮೂರ್ತಿಗಳನ್ನು ರಕ್ಷಿಸಿ, ಬೆಂಬಲಿಸುವುದು ವಕೀಲರ ಕರ್ತವ್ಯ. ಈ ಮೂಲಕ ಸಾಂವಿಧಾನಿಕ ಘನತೆಯನ್ನು ಎತ್ತಿ ಹಿಡಿಯಬೇಕು” ಎಂದು ಅವರು ವಕೀಲರಿಗೆ ಕಿವಿಮಾತು ಹೇಳಿದರು.

ನ್ಯಾಯಾಂಗದ ಪಾತ್ರ

“ಪ್ರಾಮಾಣಿಕ, ನಿಷ್ಪಕ್ಷಪಾತ, ಸ್ವತಂತ್ರ ನ್ಯಾಯಮೂರ್ತಿಗಳು ಸಂವಿಧಾನ ಎತ್ತಿ ಹಿಡಿಯುವವರಾಗಿರುವುದಿಲ್ಲ. ಇದರ ಜೊತೆಗೆ ನ್ಯಾಯದಾನ, ಸಾಂವಿಧಾನಿಕ ಗುರಿ ಮತ್ತು ನೀತಿ, ಕಾನೂನಿಗೆ ಅನುಗುಣವಾಗಿ ನ್ಯಾಯಸಮ್ಮತ ಮತ್ತು ಸಮಾನತೆಯ ದೃಷ್ಟಿಯಿಂದ ನ್ಯಾಯದಾನ ಮಾಡುವುದಕ್ಕೆ ನ್ಯಾಯಮೂರ್ತಿಗಳು ಬದ್ಧವಾಗಿರಬೇಕು. ತನ್ನ ಮುಂದೆ ಬರುವ ಪ್ರತಿ ಪ್ರಕರಣದಲ್ಲಿ ನ್ಯಾಯದಾನ ಮಾಡುತ್ತಿದ್ದೇನೆಯೇ, ನನ್ನ ತೀರ್ಪುಗಳ ಮೂಲಕ ಸಾಂವಿಧಾನಿಕ ನೀತಿಗಳನ್ನು ಎತ್ತಿ ಹಿಡಿಯುತ್ತಿದ್ದೇನೆಯೇ ಎಂಬ ಪ್ರಶ್ನೆಗಳನ್ನು ತೀರ್ಪು ಹೊರಡಿಸುವುದಕ್ಕೂ ಮುನ್ನ ತಮಗೆ ತಾವೇ ಹಾಕಿಕೊಳ್ಳಬೇಕು” ಎಂದು ವಿಶ್ಲೇಷಿಸಿದರು.

“ಪ್ರಕರಣಗಳ ವಿಲೇವಾರಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ ಅತ್ಯುತ್ತಮ ಸಾಧನೆ ಹೊಂದಿದೆ. ಆದರೆ, ಎಂಟು ಸಾವಿರಕ್ಕೂ ಹೆಚ್ಚು ಇತರೆ ಪ್ರಥಮ ಮೇಲ್ಮನವಿ ಪ್ರಕರಣಗಳು (ಎಂಎಫ್‌ಎ) ಬಾಕಿ ಇವೆ. ಇವುಗಳಲ್ಲಿ ಬಹುತೇಕ ಪ್ರಕರಣಗಳು ಅಪಘಾತಕ್ಕೆ ಸಂಬಂಧಿಸಿದ್ದಾಗಿವೆ. ಈ ಲೆಕ್ಕ ಮಾಡಲಿಕ್ಕೆ ಕ್ಯಾಲ್ಕ್ಯುಲೇಟರ್‌ ಮತ್ತು ಗುಮಾಸ್ತ ಇದ್ದರೆ ಸಾಕು. ಆದರೂ ಏಕೆ ಎಂಟು ಸಾವಿರ ಎಂಎಫ್‌ಎ ಪ್ರಕರಣ ಬಾಕಿ ಉಳಿದಿವೆ? ನಮ್ಮ ಪ್ರಯತ್ನವು ನ್ಯಾಯದಾನ ಕೇಂದ್ರಿತವಾಗಿರಬೇಕೆ ವಿನಾ ಪ್ರಕರಣಗಳನ್ನು ವಿಲೇವಾರಿ ಮಾಡುವುದಲ್ಲ. ಎಲ್ಲಾ ಪ್ರಕರಣಗಳನ್ನು ಸಮಾನತೆಯಿಂದ ಕಾಣಬೇಕು. ಅದುವೇ ಸಾಂವಿಧಾನಿಕ ನಿಯಮಗಳನ್ನು ಎತ್ತಿ ಹಿಡಿಯುವ ಪ್ರಕ್ರಿಯೆ” ಎಂದರು.

“ನ್ಯಾಯಾಲಯಗಳು ನಿರ್ದೇಶನಗಳನ್ನು ನೀಡುವಾಗ ಕಳಕಳಿ ಹೊಂದಿರಬೇಕು. ಕಾರ್ಯಾಂಗಕ್ಕೂ ತನ್ನದೇ ಆದ ಜವಾಬ್ದಾರಿಗಳಿವೆ. ಸಾಂವಿಧಾನಿಕ ಆಡಳಿತದಲ್ಲಿ ಮಧ್ಯಪ್ರವೇಶ ಮಾಡಬಾರದು. ವಿನಾ ಕಾರಣ ಮಿತಿಮೀರಿ ಹೆಜ್ಜೆ ಇಡಬಾರದು” ಎಂದು ನ್ಯಾಯಮೂರ್ತಿಗಳಿಗೆ ಸಲಹೆ ನೀಡಿದರು.

ಕಾನೂನು ಸೇವಾ ಪ್ರಾಧಿಕಾರದ ಪಾತ್ರ

“ಗಿಡ ನೆಡುವುದು ಮಹತ್ತರ ಕಾರ್ಯವಾಗಿರಬಹುದು. ಆದರೆ, ಅದು ಕಾನೂನು ಸೇವೆಯಲ್ಲ. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ವಿತರಿಸುವುದು ಸದಾಶಯದ ಕೆಲಸವಾಗಿರಬಹುದು. ಆದರೆ, ಅದಕ್ಕೂ ಕಾನೂನು ಸೇವೆಗೂ ಯಾವುದೇ ಸಂಬಂಧವಿಲ್ಲ. ನಿಮಗೆ ನೀಡಲಾಗಿರುವ ಕಾನೂನು ನೆರವು, ಜಾಗೃತಿ ಮತ್ತು ಪರ್ಯಾಯ ವಿವಾದ ಪರಿಹಾರ ಕ್ರಮಗಳ ಮೂಲಕ ನ್ಯಾಯಾಲಯದ ಹೊರೆಯನ್ನು ತಗ್ಗಿಸುವ ಮೂಲಕ ಸಾಂವಿಧಾನಿಕ ಗುರಿಗಳನ್ನು ಸಾಧಿಸುವ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರ ಮಾಡಬೇಕು” ಎಂದು ಸಲಹೆ ನೀಡಿದರು.

ನ್ಯಾಯದಾನ ಪ್ರಕ್ರಿಯೆಯ ಒಳ-ಹೊರಗು

“ಇಡೀ ದೇಶದಲ್ಲಿ ಸುಮಾರು 20 ಸಾವಿರ ನ್ಯಾಯಮೂರ್ತಿಗಳಿದ್ದಾರೆ. 4 ಕೋಟಿ ಪ್ರಕರಣಗಳಿದ್ದು, 3.5 ಕೋಟಿ ಪ್ರಕರಣಗಳು ವಿಚಾರಣಾಧೀನ ನ್ಯಾಯಾಲಯದಲ್ಲಿವೆ. ಹೈಕೋರ್ಟ್‌ಗಳಲ್ಲಿ 50 ಲಕ್ಷ ಪ್ರಕರಣಗಳಿವೆ. ಸುಪ್ರೀಂ ಕೋರ್ಟ್‌ನಲ್ಲಿ 50 ಸಾವಿರ ಪ್ರಕರಣಗಳಿವೆ. ಈ 4 ಕೋಟಿ ಪ್ರಕರಣಗಳ ಪೈಕಿ ವಿಚಾರಣಾಧೀನ ನ್ಯಾಯಾಲಯದಲ್ಲಿ 1.25 ಸಿವಿಲ್‌ ಮತ್ತು 2.75 ಕ್ರಿಮಿನಲ್‌ ಪ್ರಕರಣಗಳಾಗಿವೆ. 3 ಲಕ್ಷ ಅಧಿಕ ಮಂದಿ ವಿಚಾರಣಾಧೀನ ಕೈದಿಗಳಿದ್ದು, ತೀರ್ಪಿಗಾಗಿ ಕಾಯುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಶೇ. 80ರಷ್ಟು ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ ಎಂದು ಅಂಕಿ-ಸಂಖ್ಯೆ ಬಿಚ್ಚಿಟ್ಟರು.

ʼಸೆಷನ್ಸ್‌ ನ್ಯಾಯಾಲಯಗಳಲ್ಲಿ ಮೇಲ್ಮನವಿಗಳು ತೀರ್ಮಾನವಾಗಲು ದಶಕಗಳೇ ಬೇಕು. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಮೇಲ್ಮನವಿಗಳ ನಿರ್ಣಯವಾಗಲು ಎರಡು ದಶಕಗಳೇ ಬೇಕು. ಸಿವಿಲ್‌ ಪ್ರಕರಣಗಳಲ್ಲಿ ಮೊದಲ ಮತ್ತು ಎರಡನೇ ಮೇಲ್ಮನವಿ ದಾಖಲಿಸಿಕೊಂಡ ನ್ಯಾಯಮೂರ್ತಿಗಳು ಅವು ವಿಚಾರಣೆಗೆ ಬರುವ ವೇಳೆಗೆ ಅವರು ಇರುವುದೇ ಇಲ್ಲ. ಇದು ಇಡೀ ಪ್ರಕ್ರಿಯೆಯ ಹಿನ್ನೆಲೆ. ಈ ಆಧಾರದಲ್ಲಿ ನ್ಯಾಯಮೂರ್ತಿಗಳು, ನ್ಯಾಯಾಂಗ, ಕಾನೂನು ಸೇವಾ ಪ್ರಾಧಿಕಾರದ ಪಾತ್ರ ಮುಖ್ಯವಾಗುತ್ತದೆ. ಇಲ್ಲಿ ಸಾಂವಿಧಾನಿಕ ಆಡಳಿತ, ಪ್ರಜಾಸತ್ತಾತ್ಮಕ ಆಡಳಿತ, ಕಾನೂನು ಅತಿಮುಖ್ಯವಾಗುತ್ತದೆ” ಎಂದರು.

Also Read
ಪೆಗಸಸ್‌ ಬೇಹುಗಾರಿಕೆ ಹಗರಣದ ತನಿಖೆಗೆ ನಿವೃತ್ತ ನ್ಯಾ. ರವೀಂದ್ರನ್‌ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿದ ಸುಪ್ರೀಂ

“ಮುಗ್ಧರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ವಕೀಲರು ಮತ್ತು ನ್ಯಾಯಮೂರ್ತಿಗಳ ಮೇಲಿದೆ. ಇದನ್ನು ಖಾತರಿಪಡಿಸದಿದ್ದರೆ ನ್ಯಾಯದಾನ, ಸ್ವಾತಂತ್ರ್ಯ, ಸಮಾನತೆ ತಮ್ಮ ಅರ್ಥ ಕಳೆದುಕೊಳ್ಳಲಿವೆ. ನ್ಯಾಯಮೂರ್ತಿಗಳು ಮತ್ತು ವಕೀಲರ ವಿಳಂಬ ನೀತಿಯಿಂದ ಬಹುದೊಡ್ಡ ಸಂಖ್ಯೆಯ ಜನರು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದರೆ, ಅವರಿಗೆ ಪರಿಹಾರ ದೊರೆಯದಿದ್ದರೆ, ಅವರ ಬದುಕಿನ ಬಹುತೇಕ ಸಮಯ ಕಂಬಿಯ ಹಿಂದೆ ಕಳೆದು ಹೋಗುತ್ತದೆ. ಅಂತಿಮವಾಗಿ ಅವರು ನಿರಪರಾಧಿಗಳಾಗಿ ಹೊರಬಂದಾಗಿ ಏನೂ ಉಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯಲ್ಲಿ ಯುಟಿಆರ್‌ಸಿ ಸಮಿತಿಗಳನ್ನು ರಚಿಸಿ ವಿಚಾರಣಾಧೀನ ಕೈದಿಗಳಿಗೆ ನೆರವಾಗುವ ಕೆಲಸ ಮಾಡಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ” ಇದು ಒಳ್ಳೆಯ ಬೆಳವಣಿಗೆ ಎಂದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಬಿ ವೀರಪ್ಪ, ಎಸ್‌ ಸುಜಾತಾ, ಜಿ ನರೇಂದರ್‌, ಪಿ ಎಸ್‌ ದಿನೇಶ್‌ ಕುಮಾರ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿ ಭೂಷಣ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌, ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಎಚ್‌ ಶಶಿಧರ್‌ ಶೆಟ್ಟಿ, ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇ ಗೌಡ ಮತ್ತಿತರರು ಇದ್ದರು.

Related Stories

No stories found.
Kannada Bar & Bench
kannada.barandbench.com