Karnataka High Court, Hijab Row

 
ಸುದ್ದಿಗಳು

ಹಿಜಾಬ್‌ ನಿಷೇಧ: ಹನ್ನೊಂದು ದಿನ ಪಕ್ಷಕಾರರ ವಾದ ಆಲಿಸಿ ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್‌

ಅರ್ಜಿದಾರರ ಪರ ಹಿರಿಯ ವಕೀಲರಾದ ಯೂಸುಫ್‌ ಮುಚ್ಚಾಲ, ಪ್ರೊ. ರವಿವರ್ಮ ಕುಮಾರ್‌, ವಕೀಲ ಮೊಹಮ್ಮದ್‌ ತಾಹೀರ್‌, ಪ್ರತಿವಾದಿಗಳ ಪರ ಸುಭಾಷ್‌ ಝಾ ಅವರು ಇಂದು ವಾದ ಮಂಡಿಸಿದರು.

Bar & Bench

ಹಿಜಾಬ್‌ ನಿಷೇಧಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮನವಿಗಳ ಕುರಿತು ಸತತ ಹನ್ನೊಂದು ದಿನಗಳ ಕಾಲ ಸುದೀರ್ಘ ವಾದ ಆಲಿಸಿದ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ತೀರ್ಪು ಕಾಯ್ದಿರಿಸಿದೆ.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ನಡೆಸಿ, ತೀರ್ಪು ಕಾಯ್ದಿರಿಸಿದೆ. ಎಲ್ಲಾ ಪಕ್ಷಕಾರರಿಗೂ ಲಿಖಿತ ವಾದ ನೀಡುವಂತೆ ಸೂಚಿಸಿದೆ.

ಅಂತಿಮ ದಿನವಾದ ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆ ಹಿರಿಯ ವಕೀಲ ಯೂಸುಫ್‌ ಮುಚ್ಚಾಲ ಅವರು ಅರ್ಜಿದಾರರ ಪರವಾಗಿ ಪ್ರತ್ಯುತ್ತರ ವಾದ ಮಂಡಿಸಿದರು.

  • ಒಂದು ಬಟ್ಟೆಯ ತುಂಡಿನಿಂದ ಶಿರ ಮುಚ್ಚಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ನಾವು ಕೇಳಿಕೊಂಡಿದ್ದೇವೆ. ಇದನ್ನು ನಿರ್ಬಂಧಿಸುವ ಹಕ್ಕು ಕಾಲೇಜಿಗೆ ಇಲ್ಲ.

  • ಅಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯನ್ನು ಆತ್ಮಸಾಕ್ಷಿಯ ಸ್ವಾತಂತ್ರ್ಯದಿಂದ ಆಮದು ಮಾಡಿಕೊಳ್ಳಲಾಗದು.

  • ಹದಿತ್‌ನಲ್ಲೂ ಮುಖ ಮುಚ್ಚಿಕೊಳ್ಳುವ ಅಗತ್ಯವಿಲ್ಲ. ಆದರೆ, ಹಿಜಾಬ್‌ ಧರಿಸಬೇಕು ಎಂದು ಹೇಳಲಾಗಿದೆ. ಇದನ್ನು ಒಪ್ಪಿಕೊಳ್ಳಲಾಗಿದೆ. ತನ್ನ ಪ್ರತಿಕ್ರಿಯೆಯಲ್ಲಿ ಸರ್ಕಾರವು ಅದನ್ನು ಒಪ್ಪಿಕೊಂಡಿದೆ.

  • ಕುರಾನ್‌ನಲ್ಲಿ ಕಡ್ಡಾಯ ಎಂದು ಹೇಳಿದ್ದರೂ ಅಗತ್ಯವಾಗಬೇಕೆಂದೇನೂ ಇಲ್ಲ ಎಂದು ಅಡ್ವೊಕೇಟ್‌ ಜನರಲ್‌ ಹೇಳಿದ್ದಾರೆ. ಇದು ಶಾಹೀರಾ ಬಾನು ಪ್ರಕರಣಕ್ಕೆ ವಿರುದ್ಧವಾಗಿದೆ.

ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಪ್ರತ್ಯುತ್ತರ

  • ವಿಧಾನಸಭಾ ಕ್ಷೇತ್ರದ ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) ಅಧ್ಯಕ್ಷರಾಗಿರುತ್ತಾರೆ. ಸಮಿತಿಯ 12 ಮಂದಿಯ ಪೈಕಿ 11 ಮಂದಿಯನ್ನು ಶಾಸಕರು ನಾಮನಿರ್ದೇಶನ ಮಾಡುತ್ತಾರೆ. ಇದು ಶಾಸಕರಿಗೆ ನೀಡಲಾಗಿರುವ ಸಂಪೂರ್ಣ ಹಕ್ಕು. ಕಾಲೇಜನ್ನು ಶಾಸಕರಿಗೆ ಹರಿವಾಣದಲ್ಲಿರಿಸಿ ಕೊಟ್ಟಂತೆ.

  • ಶಾಸಕರಲ್ಲಿ ನಂಬಿಕೆ ಇಟ್ಟು ಕಾರ್ಯಾಂಗದ ಅಧಿಕಾರ ನೀಡುವುದನ್ನು ಒಪ್ಪಲಾಗದು. ಶಾಸಕರ ವಿಚಾರದಲ್ಲಿ ಯಾವುದೇ ಹೊಣೆಗಾರಿಕೆ ಇಲ್ಲ. ಅವರ ಮೇಲೆ ಯಾವುದೇ ನಿಯಂತ್ರಣವಿಲ್ಲ. ಒಂದೊಮ್ಮೆ ಸಮಿತಿಯು ನಿಧಿ ದುರ್ಬಳಕೆ ಮಾಡಿಕೊಂಡರೆ, ಸಿಡಿಸಿಗೆ ಹೊಣೆಗಾರಿಕೆ ನಿಗದಿಪಡಿಸುವವರು ಯಾರು?

ಪಾರ್ಟಿ ಇನ್‌ ಪರ್ಸನ್‌ ಡಾ. ವಿನೋದ್‌ ಕುಲಕರ್ಣಿ ಪ್ರತ್ಯುತ್ತರ

  • ಕುರಾನ್‌ನಲ್ಲಿ ಹಿಜಾಬ್‌ ಧರಿಸಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಹಿಜಾಬ್‌ ಧರಿಸುವುದು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ವಿರುದ್ಧ ಎಂದು ವಾದಿಸಲಾಗಿದೆ. ಹಿಜಾಬ್‌ ನಿಷೇಧದಿಂದ ಸಮಾಜದ ಹೆಣಿಗೆಯಲ್ಲಿ ಕ್ಷೋಭೆ ಕಾಣಬಹುದಾಗಿದೆ.

  • ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿರುವುದರಿಂದ ಹಿಜಾಬ್‌ ಧರಿಸುವ ಮುಸ್ಲಿಮ್‌ ಹೆಣ್ಣು ಮಕ್ಕಳ ಮಾನಸಿಕ ಆರೋಗ್ಯದಲ್ಲಿ ಏರುಪೇರಾಗಿದೆ. 1,400 ವರ್ಷಗಳಿಂದ ಹಿಜಾಬ್‌ ಧಾರಣೆಯು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಯಾಗಿದೆ.

ಮಾಧ್ಯಮ ನಿರ್ಬಂಧ ಕೋರಿದ್ದ ಮನವಿ ವಜಾ

ಹಿರಿಯ ವಕೀಲ ಎಸ್‌ ಬಾಲಕೃಷ್ಣನ್‌ ಅವರು ಹಿಜಾಬ್‌ ಧರಿಸಿರುವ ಹೆಣ್ಣು ಮಕ್ಕಳು ಮತ್ತು ಶಿಕ್ಷಕಿಯರ ವಿಡಿಯೊ ಮತ್ತು ಫೋಟೊ ತೆಗೆಯದಂತೆ ಮಾಧ್ಯಮಗಳನ್ನು ನಿರ್ಬಂಧ ವಿಧಿಸಬೇಕು ಎಂದು ಕೋರಿದರು. “ಮಾಧ್ಯಮಗಳು ಇದನ್ನು ನಿರಂತರವಾಗಿ ಮಾಡುತ್ತಿವೆ. ವಿದ್ಯಾರ್ಥಿಗಳನ್ನು ಅವಮಾನಿಸಿ, ಅಪರಾಧೀಕರಿಸಲಾಗುತ್ತಿದೆ. ಇಲ್ಲಿ ಅವರ ಖಾಸಗೀತನದ ವಿಚಾರವಿದೆ. ಶಿಕ್ಷಕಿಯರು ಬುರ್ಕಾ ತೆಗೆಯುವುದನ್ನು ವಿಡಿಯೊ/ಚಿತ್ರ ತೆಗೆದು ಪ್ರಸಾರ/ಪ್ರಕಟ ಮಾಡಲಾಗಿದೆ. ವಿದ್ಯಾರ್ಥಿನಿಯೊಬ್ಬರನ್ನು ಓಡುವಾಗ ಆಕೆಯ ಹಿಂದೆ ಓಡೋಡಿ ವಿಡಿಯೊ ಮಾಡಿರುವ ವಿಡಿಯೊಗಳು ಇವೆ. ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಹಿಜಾಬ್‌ ತೆರೆಯುವಾಗ ಮಾಧ್ಯಮಗಳು ಅವುಗಳನ್ನು ಸೆರೆ ಹಿಡಿಯುತ್ತಿವೆ” ಎಂದರು. ಇದಕ್ಕೆ ಪೀಠವು ಸೂಕ್ತ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸುವಂತೆ ಸೂಚಿಸಿ, ಅರ್ಜಿ ವಜಾ ಮಾಡಿತು.

ವಕೀಲ ಸುಭಾಷ್‌ ಝಾ ಅವರು ದೇಶದ ರಕ್ಷಣೆ, ಭದ್ರತೆ ಮತ್ತು ಸಮಗ್ರತೆಯ ವಿಚಾರಗಳನ್ನು ಒಳಗೊಂಡಿದ್ದ ಮನವಿಯನ್ನು ಉಲ್ಲೇಖಿಸಿ ವಾದಿಸಿದರು. ಪ್ರತಿಯೊಂದು ಹೈಕೋರ್ಟ್‌ ಮುಂದೆ ಈ ವಿಚಾರವನ್ನು ತರಲಾಗಿದ್ದು, ಇದು ನ್ಯಾಯಾಲಯದ ಸಮಯದ ಕ್ರಿಮಿನಲ್‌ ವ್ಯರ್ಥವಾಗಿದೆ. ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿದರು.