ಭಾರತವು ಹಿಂದೂ ರಾಷ್ಟ್ರ ಅಥವಾ ಇಸ್ಲಾಮಿಕ್‌ ಗಣರಾಜ್ಯವಲ್ಲ: ಹೈಕೋರ್ಟ್‌ಗೆ ಹಿರಿಯ ವಕೀಲ ಧರ್‌ ವಿವರಣೆ

ಸರ್ಕಾರವು ಸಾಂವಿಧಾನಿಕ ನೈತಿಕತೆಯನ್ನು ಉಲ್ಲೇಖಿಸಿ ಆಯ್ಕೆಯನ್ನು ನಿರ್ಬಂಧಿಸುತ್ತಿದೆ. ಇದು ಸುಪ್ರೀಂನ ಆಯ್ಕೆಗಳ ಪರವಾದ ತೀರ್ಪುಗಳ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಹಿರಿಯ ವಕೀಲ ದೇವದತ್‌ ಕಾಮತ್‌ ಹೇಳಿದರು.
Quran, Hijab and Karnataka High Court

Quran, Hijab and Karnataka High Court

ಭಾರತವು ಹಿಂದೂ ರಾಷ್ಟ್ರವೂ ಅಲ್ಲ, ಇಸ್ಲಾಮಿಕ್‌ ಗಣರಾಜ್ಯವೂ ಅಲ್ಲ. ಆದರೆ, ಇದು ಪ್ರಜಾಸತ್ತಾತ್ಮಕ, ಸಾರ್ವಭೌಮ, ಜಾತ್ಯತೀತ, ಗಣರಾಜ್ಯವಾಗಿದ್ದು, ಇಲ್ಲಿ ಕಾನೂನು ಜಯ ಸಾಧಿಸಬೇಕು ಎಂದು ಹಿರಿಯ ವಕೀಲ ಎ ಎಂ ಧರ್‌ ಅವರು ಗುರುವಾರ ಸುಪ್ರೀಂ ಕೋರ್ಟ್ ಮುಂದೆ ವಾದ ಮಂಡಿಸಿದರು.

ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರ ಪೂರ್ಣ ಪೀಠವು ಒಂಭತ್ತನೇ ದಿನವಾದ ಗುರುವಾರ ಸಹ ಮುಂದುವರೆಸಿತು.

ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಪ್ರತಿನಿಧಿಸಿದ್ದ ಎ ಎಂ ಧರ್‌ ಅವರು ಹಿಜಾಬ್‌ ಧರಿಸುವುದು ಇಸ್ಲಾಮ್‌ನಲ್ಲಿ ಕಡ್ಡಾಯ. ಮುಸ್ಲಿಮ್‌ ವಿದ್ಯಾರ್ಥಿನಿ ಹಿಜಾಬ್‌ ಧರಿಸಿದ ಮಾತ್ರಕ್ಕೆ ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಹಾನಿಯಾಗುವುದಿಲ್ಲ ಎಂದರು. “ಇದು ಹಿಂದೂ ರಾಷ್ಟ್ರ ಅಥವಾ ಇಸ್ಲಾಮ್‌ ಗಣರಾಜ್ಯವಲ್ಲ. ಇದು ಪ್ರಜಾಸತ್ತಾತ್ಮಕ, ಸಾರ್ವಭೌಮ ಜಾತ್ಯತೀತ ಗಣರಾಜ್ಯವಾಗಿದ್ದು, ಇಲ್ಲಿ ಕಾನೂನು ಉಳಿಯಬೇಕು” ಎಂದರು.

“ರಾಮ ಅಥವಾ ಯಾವುದೇ ಹಿಂದೂ ದೇವತೆಯ ಚಿತ್ರ ಅಪವಿತ್ರಗೊಳಿಸಿದರೆ ಅದು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯಾಗಲಿದೆ. ನೀವು ಇತರ ಧರ್ಮದ ಚಿತ್ರ ಅಪವಿತ್ರಗೊಳಿಸಿದರೆ, ಅದು ಭಾವನೆಗೆ ಧಕ್ಕೆ ಉಂಟು ಮಾಡುವುದರಿಂದ ಅದು ಸಾರ್ವಜನಿಕ ಸುವ್ಯವಸ್ಥೆಯಾಗುತ್ತದೆ. ಆದರೆ, ತಲೆಗೆ ಶಿರವಸ್ತ್ರ ಹಾಕುವುದರಿಂದ ಸಾರ್ವಜನಿಕ ಸುವ್ಯವಸ್ಥೆ ಸಮಸ್ಯೆ ಹೇಗೆ ಉದ್ಭವಿಸುತ್ತದೆ” ಎಂದು ವಾದಿಸಿದರು.

ಪ್ರತಿವಾದಿಗಳ ವಾದಕ್ಕೆ ಪ್ರತ್ಯುತ್ತರ ನೀಡಿದ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು “ರಾಜ್ಯ ಸರ್ಕಾರವು ಸಾಂವಿಧಾನಿಕ ನೈತಿಕತೆಯನ್ನು ಉಲ್ಲೇಖಿಸಿ ಆಯ್ಕೆಯನ್ನು ನಿರ್ಬಂಧಿಸಲು ಮುಂದಾಗುತ್ತಿದೆ. ಇದು ಸುಪ್ರೀಂ ಕೋರ್ಟ್‌ನ ಆಯ್ಕೆಗಳ ಪರವಾದ ತೀರ್ಪುಗಳಿಗೆ ವಿರುದ್ಧವಾಗಿದೆ” ಎಂದರು.

ಶಬರಿಮಲೆ ಮತ್ತು ತ್ರಿವಳಿ ತಲಾಕ್‌ ತೀರ್ಪುಗಳಲ್ಲಿ ಉಲ್ಲೇಖಿಸಿರುವಂತೆ ಹಿಜಾಬ್‌ ಧರಿಸುವ ಆಚರಣೆಯು ಸಾಂವಿಧಾನಿಕ ನೈತಿಕತೆಯಲ್ಲಿ ಉತ್ತೀರ್ಣವಾಗಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ವಾದಿಸಿದ್ದನ್ನು ಇಲ್ಲಿ ನೆನೆಯಬಹುದು.

“ಸಾಂವಿಧಾನಿಕ ನೈತಿಕತೆಯು ಮೂಲಭೂತ ಹಕ್ಕಿನ ಮೇಲಿನ ನಿರ್ಬಂಧವಲ್ಲ. ಇದು ಸರ್ಕಾರದ ಅಧಿಕಾರದ ಮೇಲಿನ ನಿರ್ಬಂಧವಾಗಿದೆ. ಎಲ್ಲಾ ತೀರ್ಪುಗಳು (ಸಾಂವಿಧಾನಿಕ ನೈತಿಕತೆ ಉಲ್ಲೇಖಿಸಿದ) ಶಬರಿಮಲೆ, ನವತೇಜ್ ಎಲ್ಲವೂ ಆಯ್ಕೆಯ ಪರವಾಗಿವೆ. ಇಂದು, ಆಯ್ಕೆಯನ್ನು ಮಣಿಸಲು ಸಾಂವಿಧಾನಿಕ ನೈತಿಕತೆಯನ್ನು ತರುತ್ತಿದ್ದಾರೆ” ಎಂದು ಗುದ್ದು ನೀಡಿದರು.

ಪ್ರತಿವಾದಿಯೊಬ್ಬರ ಪರವಾಗಿ ವಾದಿಸಿದ ಹಿರಿಯ ವಕೀಲ ಗುರು ಕೃಷ್ಣಕುಮಾರ್‌ ಅವರು “ಜಾತ್ಯತೀತ ಶಿಕ್ಷಣ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಂಸ್ಥೆಗೆ ಬರುವ ವಿದ್ಯಾರ್ಥಿಯ ವಿಚಾರದಲ್ಲಿ ತಾರತಮ್ಯ ಹೋಗಲಾಡಿಸಲು ಜಾರಿಗೊಳಿಸುವ ಯಾವುದೇ ನಿರ್ಬಂಧವನ್ನು ಸಂವಿಧಾನದ 25ನೇ ವಿಧಿಯಡಿ ಪ್ರಶ್ನಿಸಲಾಗದು” ಎಂದರು.

ಸಮವಸ್ತ್ರದ ಉದ್ದೇಶವು ವಿದ್ಯಾರ್ಥಿಯ ಹಿನ್ನೆಲೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು - ಅವರ ಜಾತಿ, ಬಣ್ಣ, ಪಂಥ, ಧರ್ಮಗಳು ಅಮುಖ್ಯವಾಗುತ್ತವೆ. ಇಂಥ ಪ್ರಕರಣಗಳನ್ನು ನಿರ್ಧರಿಸುವಾಗ ಅಗತ್ಯ ಧಾರ್ಮಿಕ ಆಚರಣೆ ಅಡಿ ಕೋರಿಕೆ ಸಲ್ಲಿಸಿದಾಗ ಸಾಂವಿಧಾನಿಕ ನ್ಯಾಯಾಲಯವು ಧಾರ್ಮಿಕ ವ್ಯಾಪ್ತಿಯನ್ನು ಬಳಕೆ ಮಾಡಬಾರದು. ಶಿಕ್ಷಣ ಪಡೆಯುವ ಉದ್ದೇಶದಿಂದ ಜಾತ್ಯತೀತ ಚಟುವಟಿಕೆಯ ಭಾಗವಾಗಿ ಸರ್ಕಾರವು ಆದೇಶ ಮಾಡಿದೆಯೇ ವಿನಾ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸಲು ಅಲ್ಲ” ಎಂದರು.

ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಕೀರ್ತಿ ಸಿಂಗ್‌ ಅವರ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ ಎಂದು ವಾದ ಆಲಿಸಲು ಪೀಠವು ನಿರಾಕರಿಸಿತು.

ಧರ್‌ ವಾದ ಪ್ರಮುಖ ಅಂಶಗಳು

  • ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಾಗಿದೆ. ಇದು ಅಲ್ಲಾಹ್‌ನ ಕಡೆಯ ಆಜ್ಞೆಯಾಗಿದೆ. ಇದು ನಾಲ್ಕನೇ ಹಿಜ್ರಿಯಲ್ಲಿ ಬಂದಿದೆ. ಆ ಹೊತ್ತಿಗೆ ಕುರಾನ್ ಬಹುತೇಕ ಪೂರ್ಣಗೊಂಡಿತ್ತು.

  • ನಾವು ಎದೆಯನ್ನು ಮುಚ್ಚಬೇಕು, ಅದು ಕಡ್ಡಾಯವಾಗಿದೆ. ಇದು ನಮಗೆ ಜೀವನ್ಮರಣದ ಪ್ರಶ್ನೆ. ಜಾತ್ಯತೀತವಾದ ಯಾವುದನ್ನೂ ನಾಶಮಾಡಲು ನಾವು ಬಯಸುವುದಿಲ್ಲ. ಶಿಕ್ಷಣ ಪಡೆಯುವುದೂ ಇಸ್ಲಾಮ್‌ನ ಅಗತ್ಯ ಭಾಗ.

  • ಸಂವಿಧಾನದ 25ನೇ ಅಡಿಯಲ್ಲಿ ನಮಗೆ ರಕ್ಷಣೆ ಇದೆ. ಸಂವಿಧಾನದ ಪೀಠಿಕೆಯಲ್ಲಿ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆಚರಣೆಗೆ ಸ್ವಾತಂತ್ರ್ಯ ಕಲ್ಪಿಸಲಾಗಿದೆ.

  • ಇಷ್ಟೊಂದು ದೊಡ್ಡದಾದ ರಾಷ್ಟ್ರದಲ್ಲಿ ಶಿರವಸ್ತ್ರ ಸಣ್ಣ ವಿಚಾರ. ನಮ್ಮ ಹೃದಯ ಮುಕ್ತ ಮತ್ತು ವಿಸ್ತಾರವಾಗಿರಬೇಕು. ಶಿರವಸ್ತ್ರವು ಮಹಿಳೆಯ ಘನತೆಯನ್ನು ಹೆಚ್ಚಿಸುವುದರ ಜೊತೆಗೆ ಶುದ್ದೀಕರಣ ಮತ್ತು ನಮ್ರತೆ ನೀಡುತ್ತದೆ.

  • ಶಿರವಸ್ತ್ರ ಹಾಕುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಸಮಸ್ಯೆಯಾಗುವುದಿಲ್ಲ. ಇದರಿಂದ ಯಾವುದೇ ಅನೈತಿಕತೆಯೂ ಆಗದು.

  • ಮಧ್ಯಂತರ ಆದೇಶವು ಅಸಾಂವಿಧಾನಿಕವಾಗಿದ್ದು, ಇದು ಮೂಲಭೂತ ಹಕ್ಕುಗಳನ್ನು ಅಮಾನತು ಮಾಡಿದೆ. ಇದು ಜೀವನ್ಮರಣದ ಪ್ರಶ್ನೆ. ನಮ್ಮ ತತ್ವಗಳ ಜೊತೆ ನಾವು ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲದೇ ಇರುವುದರಿಂದ ನಾವು ಶಿಕ್ಷಣ ಬಿಡಬೇಕಾಗುತ್ತದೆ.

ಕಾಮತ್‌ ವಾದದ ಪ್ರಮುಖ ಅಂಶಗಳು

  • ಕಾಲೇಜಿಗೆ ಸೇರಿದಾಗಿನಿಂದಲೂ ಶಿರವಸ್ತ್ರ ಹಾಕುತ್ತಿದ್ದು, ಸರ್ಕಾರದ ಆದೇಶ (ಜಿಒ) ಬಂದ ಮೇಲೆ ನಮ್ಮನ್ನು ನಿರ್ಬಂಧಿಸಲಾಗಿದೆ ಎಂಬ ನಮ್ಮ ಕೋರಿಕೆಗೆ ರಾಜ್ಯ ಸರ್ಕಾರದಿಂದ ಯಾವುದೇ ತೆರನಾದ ಪ್ರತಿಕ್ರಿಯೆ ಅಥವಾ ಪ್ರತಿವಾದ ಬಂದಿಲ್ಲ.

  • ಪ್ರಾಥಮಿಕವಾಗಿ ಸರ್ಕಾರದ ಆದೇಶ ಪ್ರಶ್ನಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಕಾಮತ್‌, ಹಿಜಾಬ್‌ಗೆ ಸಂಬಂಧಿಸಿದಂತೆ ಸರ್ಕಾರದ ಆದೇಶದಲ್ಲಿ (ಜಿಒ) ಉಲ್ಲೇಖಿಸಿರುವ 3 ತೀರ್ಪುಗಳು ಆದೇಶದ ಉದ್ದೇಶವಲ್ಲ (ಹಿಜಾಬ್ ಅನ್ನು ಉಲ್ಲೇಖಿಸುವ ತೀರ್ಪುಗಳು) ಎಂದು ಎಜಿ ಸ್ಪಷ್ಟಪಡಿಸಿದ್ದಾರೆ. ಇದು ಜಿಒ ಸಿದ್ಧಪಡಿಸಿದವರ ಅತಿಯಾದ ಉತ್ಸಾಹದ ಪರಿಣಾಮವಾಗಿರಬಹುದು ಮತ್ತು ಅದು ಅಗತ್ಯವಿಲ್ಲದಿರಬಹುದು ಎಂದಿದ್ದಾರೆ. ಹೀಗಾಗಿ, ಜಿಒದ ಈ ಭಾಗ ಹೋಗಬೇಕು.

  • ತೀರ್ಪುಗಳು ಅಪ್ರಸ್ತುತವಾಗಿದ್ದರೆ, ಹಿಜಾಬ್ ಮೂಲಭೂತ ಹಕ್ಕುಗಳ ಒಂದು ಭಾಗವಲ್ಲ ಎಂಬ ಈ ಪ್ರಾಥಮಿಕ ತಿಳುವಳಿಕೆಯನ್ನು ತಲುಪಲು ಏನು ಆಧಾರವಿದೆ?

  • ಕಾಲೇಜುಗಳಲ್ಲಿ ಸಮವಸ್ತ್ರ ನಿರ್ಧರಿಸಲು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಅಧಿಕಾರ ನೀಡಲಾಗಿದೆ. ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂಬ ರಾಜ್ಯ ಸರ್ಕಾರದ ನಿಲುವು ಉಲ್ಲೇಖಿಸಿದ ಕಾಮತ್‌, “ಸರ್ಕಾರ ಆದೇಶದ ಮೂಲಕ ಮೇಲಿನ ಪ್ರಾಧಿಕಾರವು ಅಧೀನ ಪ್ರಾಧಿಕಾರಕ್ಕೆ ನಿಮಗನ್ನಿಸಿದ ಹಾಗೆ ಮಾಡಿ, ಆದರೆ, ಹಿಜಾಬ್‌ ಸಂವಿಧಾನದ 25ನೇ ವಿಧಿಯ ಭಾಗವಲ್ಲ ಎನ್ನುತ್ತದೆ. ಇದಕ್ಕೆ ಅವಕಾಶವಿಲ್ಲ.

  • ಕಾಲೇಜು ಅಭಿವೃದ್ಧಿ ಸಮಿತಿಗೆ ಶಾಸನಾತ್ಮಕ ಮತ್ತು ಕಾರ್ಯಾಂಗದ ಅಧಿಕಾರ ನೀಡುವುದನ್ನು ಪ್ರಶ್ನಿಸಿದ ಕಾಮತ್‌ 2014ರ ಸುತ್ತೋಲೆಯನ್ನು ನಾವು ಪ್ರಶ್ನಿಸಿಲ್ಲ ಎಂದು ವಾದಿಸಿದ್ದಾರೆ. ನಾನು ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ. ಸುತ್ತೋಲೆಯಲ್ಲಿ ಉಲ್ಲೇಖಿಸಿರುವಂತೆ ಎಲ್ಲಿಯವರೆಗೆ ಸಿಡಿಸಿ ಮಾರ್ಗದರ್ಶಕ ಮಂಡಲವಾಗಿ ಉಳಿಯುತ್ತದೆಯೋ ಅಲ್ಲಿಯವರೆಗೆ ನನಗೆ ಸಮಸ್ಯೆ ಇಲ್ಲ. ಕಾಲೇಜಿಗೆ ಸಿಡಿಸಿ ಮಾರ್ಗದರ್ಶನ ನೀಡಲಿ, ಶಾಸಕರು ಮಾರ್ಗದರ್ಶನ ಮಾಡಬಹುದು. ಆದರೆ, ಸಿಡಿಸಿಗೆ ಶಾಸನಬದ್ಧ ಕಾರ್ಯದ ಅಧಿಕಾರ ನೀಡುವುದು ಸಮಸ್ಯೆಗೆ ನಾಂದಿ ಎಂದರು.

  • ಇದಕ್ಕೆ ಸಿಜೆ ಅವಸ್ಥಿ ಅವರು “ಸಮವಸ್ತ್ರ ಇರುವ ಕಾಲೇಜಿನಲ್ಲಿ ಹಿಜಾಬ್‌ ಧರಿಸುತ್ತೇವೆ ಎಂದು ಒತ್ತಿ ಹೇಳುವುದು ಸರಿಯೇ? ಎಂದರು. ಇದಕ್ಕೆ ಕಾಮತ್‌ ಅವರು ನಾನು ಇದೇ ಪ್ರಶ್ನೆಯನ್ನು ತುಸು ಭಿನ್ನವಾಗಿ ಕೇಳಿಕೊಳ್ಳುತ್ತೇನೆ. ನನ್ನ ಹಕ್ಕು ಎಲ್ಲಿದೆ ಎಂದು ನೀವು ನನ್ನನ್ನು ಪ್ರಶ್ನಿಸುತ್ತೀರಿ, ನಾನು ಇದನ್ನೇ ನನ್ನ ಹಕ್ಕಿನ ನಿರ್ಬಂಧ ಎಲ್ಲಿದೆ ಎಂದು ಕೇಳಿಕೊಳ್ಳುತ್ತೇನೆ. ಏಕೆಂದರೆ 25(2) ಯಾವುದನ್ನು ನಿರ್ಬಂಧಿಸಬಹುದು ಎಂಬುದರ ಕುರಿತು ಸ್ಪಷ್ಟವಾಗಿದೆ. ಹಿಜಾಬ್‌ ಧರಿಸುವ ಹಕ್ಕು ಕುರಾನ್‌ನಿಂದ ಬಂದಿದೆ ಎಂದರು.

  • ಅಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ನನ್ನ ಮೂಲಭೂತ ಹಕ್ಕಿನ ಮೇಲಿನ ನಿರ್ಬಂಧವಲ್ಲ. ಇಆರ್‌ಪಿ ಎನ್ನುವುದು ಧಾರ್ಮಿಕ ಆಚರಣೆಯಲ್ಲಿ ಹಸ್ತಕ್ಷೇಪ ಮಾಡುವ ಸರ್ಕಾರದ ಅಧಿಕಾರದ ಮೇಲಿನ ನಿರ್ಬಂಧವಾಗಿದೆ. ಇಲ್ಲಿ ಪರಿಗಣನೆಗೆ ಉದ್ಭವಿಸುವ ಪ್ರಶ್ನೆ - ನಿರ್ಬಂಧ ಎಲ್ಲಿದೆ? ಎಂಬುದಾಗಿದೆ.

  • ಕರ್ನಾಟಕ ಶಿಕ್ಷಣ ಕಾಯಿದೆಯು ಸಂವಿಧಾನದ 25(2)ನೇ ವಿಧಿಯ ಉದ್ದೇಶಕ್ಕಾಗಿರುವ ಸಮಾಜ ಕಲ್ಯಾಣ ಅಥವಾ ಸುಧಾರಣೆಯ ಅಳತೆಗೋಲಲ್ಲ.

  • ಒಂದು ವೇಳೆ ಈ ನಿಯಮದಿಂದಾಗಿ ಅರ್ಜಿದಾರರು ಪ್ರಭುತ್ವ ನೀಡುವ ಶಿಕ್ಷಣ ಪಡೆಯುವುದರಿಂದ ವಂಚಿತರಾದರೆ ಆಗ ಅದನ್ನು ಸಂವಿಧಾನದ 21ಎ ವಿದಿಯಡಿ ಪ್ರಶ್ನಿಸಬಹುದಾಗಿದೆ.

  • ಹಿಜಾಬ್‌ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಹಿಜಾಬ್‌ ಇಆರ್‌ಪಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಿರ್ಬಂಧ ಹಾಕುವ ಸರ್ಕಾರದ ಆದೇಶವು ಕಾನೂನುಬಾಹಿರ ಎಂದೂ ಹೇಳುತ್ತಿದ್ದೇನೆ. ಸೂಕ್ತ ನಿರ್ಬಂಧದ ಅನುಪಸ್ಥಿತಿಯಲ್ಲಿ ನ್ಯಾಯಾಲಯವು ಇಆರ್‌ಪಿಗೆ ಕಟ್ಟುನಿಟ್ಟಾಗಿ ಹೋಗುವ ಅಗತ್ಯವಿಲ್ಲ. ಆದರೆ, ಪೀಠ ಅದನ್ನು ಮಾಡಿದರೆ, ಅದು ಇಆರ್‌ಪಿ ಎಂದು ನಾನು ಹೇಳುತ್ತೇನೆ.

  • ಸರ್ಕಾರವು ಉತ್ತಮ ಸಂವಿಧಾನವನ್ನು ಜಾರಿಗೊಳಿಸಲು ಮುಂದಾಗಿರುವ ರೀತಿ ಸಂಪೂರ್ಣವಾಗಿ ಹತಾಶೆಗೊಳಿಸುವಂತಿದೆ. ಆದರೆ, ಈಗ ನಾವು ಸಾಂವಿಧಾನಿಕ ನ್ಯಾಯಾಲಯದ ಕೈಯಲ್ಲಿದ್ದೇವೆ. ನಾವು ಸಂವಿಧಾನ ಕೆಲಸ ಮಾಡುವಂತೆ ಮಾಡುತ್ತೇವೆ ಮತ್ತು ನ್ಯಾಯವು ಮೇಲುಗೈ ಸಾಧಿಸುತ್ತದೆ ಎಂದು ನನಗೆ ಖಾತರಿ ಇದೆ ಎಂದು ವಾದವನ್ನು ಅಂತ್ಯಗೊಳಿಸಿದರು.

Also Read
[ಹಿಜಾಬ್‌ ವಿಚಾರಣೆ] ಶಾಸಕರು ಒಂದು ಪಕ್ಷಕ್ಕೆ ಸೀಮಿತವಾಗಿ ಅಭಿವೃದ್ದಿ ಸಮಿತಿಯಲ್ಲಿ ಕೂರುವುದಿಲ್ಲ: ಸಮಿತಿಯ ವಿವರಣೆ

ನಾಳೆ ತೀರ್ಪು ಕಾಯ್ದಿರಿಸಲಾಗುವುದು

ಪಕ್ಷಕಾರರೆಲ್ಲರೂ ನಾಳೆಯೇ ವಾದ ಪೂರ್ಣಗೊಳಿಸಬೇಕು. ಎರಡು ಮೂರು ದಿನಗಳಲ್ಲಿ ಎಲ್ಲರೂ ಲಿಖಿತ ವಾದವನ್ನು ಸಲ್ಲಿಸಬೇಕು. ನಾಳೆಯೇ ತೀರ್ಪು ಕಾಯ್ದಿರಿಸಲಾಗುವುದು ಎಂದು ಪೀಠವು ಸ್ಪಷ್ಟಪಡಿಸಿದ್ದು, ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿದೆ.

Related Stories

No stories found.
Kannada Bar & Bench
kannada.barandbench.com