Hijab Ban Supreme Court, Karnataka High Court
Hijab Ban Supreme Court, Karnataka High Court 
ಸುದ್ದಿಗಳು

ಹಿಜಾಬ್ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ: ಎಫ್ಐಆರ್ ರದ್ದತಿ ಕೋರಿ ಸುಪ್ರೀಂಗೆ ಮೊರೆ

Bar & Bench

ಹಿಜಾಬ್ ಕುರಿತು ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಪ್ರಕರಣದ ಆರೋಪಿ ಚೆನ್ನೈ ನಿವಾಸಿ ರಹಮತುಲ್ಲಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ [ರಹಮತುಲ್ಲಾ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಇದೇ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ತಮಿಳುನಾಡಿನಲ್ಲಿ ದಾಖಲಾಗಿರುವುದರಿಂದ ಕರ್ನಾಟಕದಲ್ಲಿ ತನ್ನ ವಿರುದ್ಧ ದಾಖಲಿಸಲಾಗಿರುವ ತಮಿಳುನಾಡಿನ ಮಧುರೈ ಪೊಲೀಸ್ ಠಾಣೆಗೆ ಎಫ್‌ಐಆರ್‌ ವರ್ಗಾಯಿಸಬೇಕೆಂದು ಆರೋಪಿ ಕೋರಿದ್ದಾನೆ.

ಬುಧವಾರ ಈ ಅರ್ಜಿ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತು.

ವಕೀಲ ಎ ಲಕ್ಷ್ಮೀನಾರಾಯಣನ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಈ ಅಂಶಗಳನ್ನು ವಿವರಿಸಲಾಗಿದೆ:

(i) ಬೆಂಗಳೂರಿನಲ್ಲಿ ದಾಖಲಿಸಲಾಗಿರುವ ಎರಡನೇ ಎಫ್‌ಐಆರ್‌ನಲ್ಲಿ, ತಮಿಳುನಾಡಿನಲ್ಲಿ ದಾಖಲಾಗಿರುವ ಮೊದಲ ಎಫ್‌ಐಆರ್‌ನ ಅಂಶಗಳೇ ಇದ್ದು ಒಂದೇ ವಿಚಾರವಾಗಿ ಸಮಾನಾಂತರ ತನಿಖೆ ನಡೆಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ಅರ್ಜಿ ಟಿಟಿ ಆಂಥೋನಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ ಹಾಗೂ ಅರ್ನಾಬ್ ಗೋಸ್ವಾಮಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣಗಳ ತೀರ್ಪನ್ನು ಅವಲಂಬಿಸಿದೆ.

(ii) ಸಂವಿಧಾನದ 21ನೇ ವಿಧಿಯಡಿ ಅರ್ಜಿದಾರರ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ. "ಒಂದೇ ಕಾರಣಕ್ಕೆ ಸಂಬಂಧಿಸಿದಂತೆ ಎರಡು ವಿಭಿನ್ನ ತನಿಖಾ ಸಂಸ್ಥೆಗಳು ಎರಡು ವಿಭಿನ್ನ ನ್ಯಾಯವ್ಯಾಪ್ತಿಯಲ್ಲಿ ಎರಡು ಸಮಾನಾಂತರ ತನಿಖೆಗಳನ್ನು ಕೈಗೊಳ್ಳುವುದು ನ್ಯಾಯಯುತ ತನಿಖೆ ಕೋರಿರುವ ಅರ್ಜಿದಾರರ ಹಕ್ಕನ್ನು ಉಲ್ಲಂಘಿಸುತ್ತದೆ" ಎಂದು ಮನವಿಯಲ್ಲಿ ವಾದಿಸಲಾಗಿದೆ.

(iii) ಅರ್ಜಿದಾರರು ವಿವಿಧ ನ್ಯಾಯವ್ಯಾಪ್ತಿಗಳಲ್ಲಿ ವಿವಿಧ ನ್ಯಾಯಾಲಯಗಳನ್ನು ಸಂಪರ್ಕಿಸುವ ಸ್ಥಿತಿಯಲ್ಲಿರುವುದಿಲ್ಲ ಮತ್ತು ಸಂಘರ್ಷಾತ್ಮಕ ಆದೇಶಗಳೂ ಇರಬಹುದು.

ಮಾರ್ಚ್ 15, 2022 ರಂದು ಹಿಜಾಬ್‌ ಕುರಿತಾದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರನ್ನು ಒಳಗೊಂಡ ಪೀಠ ನೀಡಿತ್ತು.

ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ಅಲ್ಲ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್‌ ಆ ಮೂಲಕ ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ರಾಜ್ಯ ಸರ್ಕಾರ ನೀಡಿದ ಅಧಿಕಾರವನ್ನು ಎತ್ತಿಹಿಡಿದಿತ್ತು.