ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿ ಈಚೆಗೆ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ತಮಿಳುನಾಡಿನ ಮದುರೈ ಮೂಲದ ವ್ಯಕ್ತಿಯೊಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಕೀಲ ಸುಧಾ ಕಟ್ವಾ ಅವರು ನೀಡಿರುವ ದೂರನ್ನು ಆಧರಿಸಿ ಬೆಂಗಳೂರಿನ ವಿಧಾನಸೌಧ ಠಾಣೆ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಅನಾಮಿಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 506(1), 505(1)(c), 505(1)(B), 153A,109, 504, 505(2) ಅಡಿ ಪ್ರಕರಣ ದಾಖಲಿಸಲಾಗಿದೆ.
“ಶನಿವಾರ ಬೆಳಿಗ್ಗೆ ತಮ್ಮ ಸಹೋದ್ಯೋಗಿ ವಕೀಲ ಎಸ್ ಉಮಾಪತಿ ಅವರ ಮೊಬೈಲ್‌ಗೆ ನಾಲ್ಕು ನಿಮಿಷದ ತಮಿಳು ಭಾಷೆಯಲ್ಲಿರುವ ವಿಡಿಯೊ ಸಂದೇಶ ಬಂದಿದ್ದು, ಅದರಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ. ಅಲ್ಲದೇ, ಅವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಲಾಗಿದೆ. ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆ ಧಕ್ಕೆ ತರುವ ಮತ್ತು ವಿವಿಧ ಗುಂಪುಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುವ ಮಾತುಗಳನ್ನು ವಿಡಿಯೊದಲ್ಲಿರುವ ವ್ಯಕ್ತಿ ಆಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು” ಎಂದು ಸುಧಾ ಕೋರಿದ್ದಾರೆ.
ಇದರ ಜೊತೆಗೆ, ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ಕೊಲೆ, ಕ್ರಿಮಿನಲ್ ಬೆದರಿಕೆ, ನಿಂದನಾತ್ಮಕ ಭಾಷೆ ಬಳಕೆ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಚ್ಯುತಿ, ಮುಖ್ಯ ನ್ಯಾಯಮೂರ್ತಿ ಮತ್ತು ಇತರರ ಘನತೆಗೆ ಚ್ಯುತಿಯಾಗುವ ರೀತಿಯಲ್ಲಿ ಆರೋಪಿ ನಡೆದುಕೊಂಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರಿಗೆ ವಕೀಲ ಎಸ್ ಉಮಾಪತಿ ಅವರು ಮನವಿ ಸಲ್ಲಿಸಿದ್ದಾರೆ.
ಆಕ್ಷೇಪಾರ್ಹ ವಿಡಿಯೊದಲ್ಲಿ ವಾಯು ವಿಹಾರಕ್ಕೆ ತೆರಳಿದ್ದಾಗ ರಸ್ತೆಯಲ್ಲಿ ಕೊಲೆಯಾಗಿದ್ದ ಜಾರ್ಖಂಡ್‌ನ ಧನ್‌ಬಾದ್ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರ ಪ್ರಕರಣವನ್ನು ಆರೋಪಿಯು ಉಲ್ಲೇಖಿಸಿದ್ದಾರೆ. ಇದೇ ಪರಿಸ್ಥಿತಿ ಸಿಜೆ ರಿತುರಾಜ್ ಅವಸ್ಥಿಗೆ ಎದುರಾಗಲಿದೆ. ಅವರು ಎಲ್ಲಿ ವಾಯು ವಿಹಾರಕ್ಕೆ ತೆರಳುತ್ತಾರೆ ಎಂಬುದು ತಿಳಿದಿದೆ. ಸಿಜೆ ಅವಸ್ಥಿ ಅವರು ಅಲಾಹಾಬಾದ್ ಹೈಕೋರ್ಟ್‌ನಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದು, ಈಚೆಗೆ ಕುಟುಂಬ ಸಮೇತ ಉಡುಪಿ ಮಠಕ್ಕೆ ಭೇಟಿ ನೀಡಿದ್ದರು ಎಂದು ವಿಡಿಯೊದಲ್ಲಿ ಆರೋಪಿ ಹೇಳಿದ್ದಾನೆ ಎಂದು ವಿವರಿಸಲಾಗಿದೆ.
ನ್ಯಾಯಮೂರ್ತಿಗಳ ವಿರುದ್ಧ ಏಕವಚನ ಪದ ಬಳಕೆ ಮಾಡುವುದಲ್ಲದೇ ಯಾವುದಾದರೂ ಪ್ರಕರಣ ದಾಖಲಿಸುವಂತೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ನ್ಯಾಯಾಲಯದ ತೀರ್ಪನ್ನು ಆಕ್ಷೇಪಾರ್ಹ ಪದ ಬಳಕೆಯ ಮೂಲಕ ಉಲ್ಲೇಖಿಸಿದ್ದಾರೆ. ನಾಲ್ಕು ನಿಮಿಷಗಳ ವಿಡಿಯೊದಲ್ಲಿ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್ ಬಗ್ಗೆ ಗಂಭೀರ ಆರೋಪಗಳನ್ನು ಆರೋಪಿ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಆಕ್ಷೇಪಾರ್ಹ ವಿಡಿಯೊ ಮೂಲಕ ಆರೋಪಿಯು ನ್ಯಾಯದಾನ ವ್ಯವಸ್ಥೆಯ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕಿರುವುದಲ್ಲದೇ ಸಮಾಜದಲ್ಲಿ ದ್ವೇಷ ಹರಡಲು ಮತ್ತು ನ್ಯಾಯಾಂಗ ಹಾಗೂ ಕಾನೂನು ಸಮುದಾಯವನ್ನು ಗುರಿಯಾಗಿಸಿ ದಾಳಿ ಮಾಡಿದ್ದಾರೆ. ಹೀಗಾಗಿ, ಆರೋಪಿಯ ವಿರುದ್ಧ ನ್ಯಾಯದಾನ ವ್ಯವಸ್ಥೆಯ ಘನತೆಯನ್ನು ಎತ್ತಿ ಹಿಡಿಯುವ ದೃಷ್ಟಿಯಿಂದ ಸೂಕ್ತ ಕ್ರಮಕೈಗೊಳ್ಳುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಮಾಡಲಾಗಿದೆ.
ಈ ಸಂಬಂಧ “ಬಾರ್ ಅಂಡ್ ಬೆಂಚ್”ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರು “ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಕ್ರಮಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.