ಮಹಿಳೆಯರ ವಿವಾಹದ ಕನಿಷ್ಠ ವಯೋಮಿತಿಯನ್ನು 18ರಿಂದ 21 ವರ್ಷಕ್ಕೆ ಹೆಚ್ಚಳ ಮಾಡುವ ಮಸೂದೆಯನ್ನು ಹಿಮಾಚಲ ಪ್ರದೇಶ ರಾಜ್ಯದ ವಿಧಾನಸಭೆ ಮಂಗಳವಾರ ಅಂಗೀಕರಿಸಿದೆ.
ಬಾಲ್ಯ ವಿವಾಹ ನಿಷೇಧ ಕಾಯಿದೆ, 2006ಕ್ಕೆ ತಿದ್ದುಪಡಿ ಮಾಡಲು ಬಾಲ್ಯ ವಿವಾಹ ನಿಷೇಧ (ಹಿಮಾಚಲ ಪ್ರದೇಶ ತಿದ್ದುಪಡಿ) ಕಾಯಿದೆ, 2024 ಮುಂದಾಗಿದೆ.
ಬಾಲ್ಯವಿವಾಹ ನಿಷೇಧ ಕಾಯಿದೆ, 2006 ಅನ್ನು ಬಾಲ್ಯವಿವಾಹ ನಿಷೇಧಿಸಲು ಜಾರಿಗೊಳಿಸಲಾಗಿತ್ತು. ಅದರ ಪ್ರಕಾರ ಮಹಿಳೆಯರು ಮತ್ತು ಪುರುಷರ ವಿವಾಹದ ವಯೋಮಿತಿ ಕ್ರಮವಾಗಿ ಕನಿಷ್ಠ 18 ಮತ್ತು ಪುರುಷರಿಗೆ 21 ಆಗಿತ್ತು.
ಲಿಂಗ ಸಮಾನತೆಗಾಗಿ ಮಹಿಳೆಯರ ವಿವಾಹ ವಯೋಮಿತಿಯನ್ನು ಕನಿಷ್ಠ 21 ವರ್ಷಕ್ಕೆ ಏರಿಕೆ ಮಾಡಲು ನೂತನ ಮಸೂದೆ ಯತ್ನಿಸುತ್ತದೆ. ಚಿಕ್ಕವಯಸ್ಸಿಗೇ ವಿವಾಹವಾಗುವುದರಿಂದ ಮಹಿಳೆಯರ ವೃತ್ತಿಪರ ಪ್ರಗತಿ ಮತ್ತು ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂಬ ಕಾರಣಕ್ಕೆ ಮಸೂದೆ ಅಂಗೀಕಾರಗೊಂಡಿದೆ.
ಲಿಂಗ ಸಮಾನತೆ ಮತ್ತು ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶಗಳನ್ನು ಒದಗಿಸುವ ಸಲುವಾಗಿ, ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯಸ್ಸನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಕೂಡ ಮಸೂದೆ ಹೇಳುತ್ತದೆ.
ಮಸೂದೆಯು ಸೆಕ್ಷನ್ 18ಎ ಅನ್ನು ಸಹ ಅಡಕೊಳಿಸಿದ್ದು ಪ್ರಸ್ತುತ ಅಸ್ತಿತ್ವದಲ್ಲಿರುವ ಉಳಿದ ಯಾವುದೇ ಕಾಯಿದೆಗಳು ವ್ಯತಿರಿಕ್ತ ರೀತಿಯಲ್ಲಿ ಅಥವಾ ಅಸಮಂಜಸವಾಗಿದ್ದರೂ ಕೂಡ ಈ ಮಸೂದೆಯೇ ಪ್ರಧಾನವಾಗಿರಲಿದ್ದು ಅಂತಿಮ ಪರಿಣಾಮ ಬೀರಲಿದೆ ಎಂದು ಅದು ಹೇಳುತ್ತದೆ.