ಕೃಷ್ಣ ಜನ್ಮಭೂಮಿಯ ಒಟ್ಟಾರೆ 13.37 ಎಕರೆ ಭೂಮಿಯನ್ನು ಮರು ಸ್ವಾಧೀನಪಡಿಸಿಕೊಳ್ಳುವುದರ ಜೊತೆಗೆ ಅಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ಮಥುರಾ ನ್ಯಾಯಾಲಯದಲ್ಲಿ ಹಿಂದೂ ದೇವರು ಶ್ರೀಕೃಷ್ಣ ವಿರಾಜಮಾನ್ ಹೆಸರಿನಲ್ಲಿ ಮನವಿ ಸಲ್ಲಿಸಲಾಗಿದೆ.
ಮೌಜ ಮಥುರಾ ಬಜಾರ್ ಸಿಟಿಯಲ್ಲಿನ ಕತ್ರ ಕೇಶವ್ ದೇವ್ ಖೇವತ್‌ನಲ್ಲಿರುವ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಅವರನ್ನು ಫಿರ್ಯಾದುದಾರರು ಎಂದು ರಂಜನ್ ಅಗ್ನಿಹೋತ್ರಿ ಮತ್ತು ಇತರೆ ಆರು ಮಂದಿ ಶ್ರೀಕೃಷ್ಣನ ಭಕ್ತರು ಉಲ್ಲೇಖಿಸಿದ್ದಾರೆ. ವಕೀಲರಾದ ಹರಿ ಶಂಕರ್ ಜೈನ್ ಮತ್ತು ವಿಷ್ಣು ಜೈನ್ ಅವರ ಮೂಲಕ ಮನವಿ ಸಲ್ಲಿಸಲಾಗಿದೆ.
ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿ, ನಿರ್ವಹಣಾ ಸಮಿತಿ, ಶಾಹಿ ಈದ್ಗಾ ಮಸೀದಿ ಟ್ರಸ್ಟ್ ಅನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
“ಶ್ರೀಕೃಷ್ಣ ವಿರಾಜಮಾನ್ ದೇವರಿಗೆ ಸೇರಿದ ಮಥುರಾದ ಕತ್ರ ಕೇಶವ್ ದೇವ್ ನಗರದಲ್ಲಿರುವ ಖೇವತ್ ನಂಬರ್ 225ರಲ್ಲಿ ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಒಪ್ಪಿಗೆಯ ಮೇರೆಗೆ ಈದ್ಗಾ ಮಸೀದಿ ಟ್ರಸ್ಟ್ ನ ನಿರ್ವಹಣಾ ಸಮಿತಿಯು ಭೂಮಿ ಒತ್ತುವರಿ ಮಾಡಿಕೊಂಡಿರುವ ಜಾಗ ಮತ್ತು ಅಲ್ಲಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸುವಂತೆ” ಸಿವಿಲ್ ದಾವೆ ಹೂಡಲಾಗಿದೆ.
ಹಿಂದೂ ಕಾನೂನಿನಲ್ಲಿ ಶ್ರೀಕೃಷ್ಣನನ್ನು ಹಾಗೆ ಗುರುತಿಸಲಾಗಿದೆ ಎಂದು ಅರ್ಜಿಯಲ್ಲಿ ಶ್ರೀಕೃಷ್ಣನನ್ನು ಫಿರ್ಯಾದುದಾರ ಎಂದು ಸಂಬೋಧಿಸಿರುವುದಕ್ಕೆ ಸಮರ್ಥನೆ ಒದಗಿಸಲಾಗಿದೆ.
“ಆತ ಅಪ್ರಾಪ್ತನಾಗಿದ್ದು, ನ್ಯಾಯವ್ಯಾಪ್ತಿಗೆ ಒಳಪಡುವ ವ್ಯಕ್ತಿ. ಆತ ಯಾರನ್ನಾದರೂ ಮತ್ತು ಯಾರು ಬೇಕಾದರೂ ಆತನನ್ನು ಆತನ ಧರ್ಮಕರ್ತರು ಅಥವಾ ಆತನ ಅನುಪಸ್ಥಿತಿಯಲ್ಲಿ ವಾದ ಮಿತ್ರರ ಮೂಲಕ ನ್ಯಾಯಾಲಯಕ್ಕೆ ಎಳೆಯಬಹುದು. ಅದು ಆಸ್ತಿಯನ್ನು ಖರೀದಿಸಬಹುದು, ವಶಪಡಿಸಿಕೊಳ್ಳಬಹುದು ಮತ್ತು ಅದನ್ನು ತೋರ್ಪಡಿಸಬಹುದು. ನ್ಯಾಯಾಲಯದ ಮೂಲಕ ತನ್ನ ಅನುಪಸ್ಥಿತಿಯಲ್ಲಿ ಧರ್ಮಕರ್ತರ ಅಥವಾ ವಾದ ಮಿತ್ರರ ಮೂಲಕ ತನ್ನ ಆಸ್ತಿಯನ್ನು ರಕ್ಷಿಸುವ, ಕಳೆದು ಹೋಗಿರುವ ಆಸ್ತಿಯನ್ನು ಮರು ಸ್ವಾಧೀನ ಮಾಡಿಕೊಳ್ಳುವ ಎಲ್ಲಾ ಹಕ್ಕನ್ನು ಅದು ಹೊಂದಿದೆ.”ಅರ್ಜಿಯಲ್ಲಿ ಉಲ್ಲೇಖ
ಈದ್ಗಾ ಮಸೀದಿ ಟ್ರಸ್ಟ್ ನ ನಿರ್ವಹಣಾ ಸಮಿತಿಯು ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಕಾನೂನು ಮತ್ತು ನ್ಯಾಯಾಲಯದ ತೀರ್ಪು ಉಲ್ಲಂಘಿಸಿ, ಕೆಲವು ಮುಸ್ಲಿಮರ ಸಹಾಯದಿಂದ ಕತ್ರ ಕೇಶವ್ ದೇವ್‌ನಲ್ಲಿರುವ ಶ್ರೀಕೃಷ್ಣ ಜನ್ಮಸ್ಥಾನ ಟ್ರಸ್ಟ್ ಮತ್ತು ದೇವರಿಗೆ ಸೇರಬೇಕಾದ ಸ್ಥಳವನ್ನು ವಶಪಡಿಸಿಕೊಂಡು ಕಟ್ಟಡ ನಿರ್ಮಿಸಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
“ಈದ್ಗಾ ಮಸೀದಿ ಟ್ರಸ್ಟ್ ನ ನಿರ್ವಹಣಾ ಸಮಿತಿಯು 12.10.1968ರಲ್ಲಿ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಸೊಸೈಟಿಯ ಜೊತೆ ಅಕ್ರಮ ಸಂಧಾನ ಮಾಡಿಕೊಂಡಿತ್ತು. ಉಭಯ ಸಂಸ್ಥೆಗಳು ನ್ಯಾಯಾಲಯಕ್ಕೆ ದ್ರೋಹ ಬಗೆದಿದ್ದು, ಫಿರ್ಯಾದುದಾರ ದೈವ ಮತ್ತು ಅವರ ಭಕ್ತರು ಪ್ರಶ್ನಾರ್ಹವಾದ ಆಸ್ತಿಯನ್ನು ವಶಪಡಿಸಿಕೊಳ್ಳುವ ಇರಾದೆ ಹೊಂದಿದ್ದಾರೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
"ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿರುವ ಹಿಂದೂ ಕಾನೂನಿನ ಪ್ರಕಾರ ದೇವರಿಗೆ ಸೇರಿದ ಆಸ್ತಿಯು ದೇವರದ್ದಾಗಿಯೇ ಉಳಿಯಲಿದೆ. ದೇವರಿಂದ ವಶಪಡಿಸಿಕೊಳ್ಳಲಾದ ಆಸ್ತಿಯನ್ನು ನಾಶಪಡಿಸಿಲ್ಲವಾದರೆ ಅಥವಾ ಕಳೆದುಕೊಂಡಿಲ್ಲವಾದರೆ ಆಕ್ರಮಣಕಾರು ಅಥವಾ ದಾಳಿಕೋರರಿಂದ ಮುಕ್ತಿಗೊಂಡ ಬಳಿಕ ಆಸ್ತಿಯನ್ನು ಮತ್ತೆ ಪಡೆದುಕೊಳ್ಳಬಹುದು, ಮರು ಸ್ವಾಧೀನ ಮಾಡಿಕೊಳ್ಳಬಹುದಾಗಿದೆ” ಎಂದು ವಿವರಿಸಲಾಗಿದೆ.
ಕ್ರಿಸ್ತ ಶಕ 31.07.1658 ರಿಂದ 3.03.1707 ವರೆಗೆ ಭಾರತದಲ್ಲಿ ಆಳ್ವಿಕೆ ನಡೆಸಿದ್ದ ಇಸ್ಲಾಂನ ಕಟ್ಟಾ ಅನುಯಾಯಿಯಾದ ಮೊಘಲ್ ದೊರೆ ಔರಂಗಜೇಬ್, ಭಾರತದಲ್ಲಿದ್ದ ಹಲವು ಹಿಂದೂ ಧಾರ್ಮಿಕ ಕೇಂದ್ರಗಳು ಹಾಗೂ ದೇವಸ್ಥಾನಗಳನ್ನು ನಾಶ ಮಾಡಲು ಆದೇಶಿಸಿದ್ದ. “ಕ್ರಿಸ್ತ ಶಕ 1669-70ರಲ್ಲಿ ಮಥುರಾದ ಶ್ರೀಕೃಷ್ಣನ ಜನ್ಮಸ್ಥಳವಾದ ಕತ್ರ ಕೇಶವ್ ದೇವ್ ದೇವಸ್ಥಾನವನ್ನೂ ನಾಶ ಮಾಡಲು ಔರಂಗಜೇಬ್ ಆದೇಶಿಸಿದ್ದ. ಈ ಕೆಲಸದಲ್ಲಿ ಔರಂಗಜೇಬ್‌ನ ಸೇನೆ ಭಾಗಶಃ ಯಶಸ್ವಿಯಾಗಿತ್ತು. ಅಲ್ಲಿ ಅಧಿಕಾರದ ದರ್ಪ ತೋರಿ ಕಟ್ಟಡ ನಿರ್ಮಿಸಿ ಅದಕ್ಕೆ ಈದ್ಗಾ ಮಸೀದಿ ಎಂದು ನಾಮಕರಣ ಮಾಡಲಾಗಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಈ ಸಂಬಂಧ ಔರಂಗಜೇಬ್ ಹೊರಡಿಸಿರುವ ಆದೇಶವು 1670ರ ಜನವರಿ-ಫೆಬ್ರುವರಿಯಲ್ಲಿನ ಅಧಿಕೃತ ಆಡಳಿತ ಪ್ರಕಟಣೆಯಲ್ಲಿ (ಅಖ್ಬಾರತ್) ಇದೆ. ಇದನ್ನು ಖ್ಯಾತ ಇತಿಹಾಸಕಾರರಾಗಿದ್ದ ದಿವಂಗತ ಜಾದುನಾಥ್ ಸರ್ಕಾರ್ ಅವರು ಪರ್ಷಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ ಎಂದು ತಮ್ಮ ವಾದಕ್ಕೆ ಪುಷ್ಟಿ ಒದಗಿಸಲಾಗಿದೆ.
“ಜನ್ಮಭೂಮಿ ಟ್ರಸ್ಟ್” ತನ್ನ ಆಸ್ತಿಯನ್ನು ಸಂರಕ್ಷಿಸಿ ಉಳಿಸುವ ಕೆಲಸವನ್ನು ಮಾಡುವಲ್ಲಿ ವಿಫಲವಾಗಿತ್ತು. 1958ರಿಂದ ಟ್ರಸ್ಟ್ ನಿಷ್ಕ್ರಿಯವಾಗಿದೆ ಎಂದು ಶ್ರೀಕೃಷ್ಣ ದೇವರು ಮನವಿಯಲ್ಲಿ ವಿವರಿಸಿದ್ದಾರೆ.
ಸೇತ್ ಜುಗಲ್ ಕಿಶೋರ್ ಬಿರ್ಲಾ ಅವರು ಶ್ರೀ ಕೃಷ್ಣ ಜನ್ಮಭೂಮಿ ಟ್ರಸ್ಟ್ ರಚಿಸಿದ್ದರು. 1860ರಲ್ಲಿ ಕಾಯಿದೆ ಸಂಖ್ಯೆ 21ರ ಅಡಿ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಎಂಬ ಹೆಸರಿನಲ್ಲಿ ಅದು ನೋಂದಣಿಯಾಗಿದೆ. ಸಂಘದ ಅಧ್ಯಕ್ಷ ಮತ್ತು ಇತರ ಬಾಧ್ಯಸ್ಥರು ಮತ್ತು ಸದಸ್ಯರನ್ನು ಫಿರ್ಯಾದುದಾರರನ್ನಾಗಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸೇತ್ ಜುಗಲ್ ಕಿಶೋರ್ ಬಿರ್ಲಾ ಅವರು ಮೇಲೆ ಉಲ್ಲೇಖಿಸಿದ ಆಸ್ತಿಯ ಹಕ್ಕು ಬಾಧ್ಯತೆಗಳನ್ನು 21.2.1951ರಂದು ಟ್ರಸ್ಟ್ ಕರಾರು ಪತ್ರದಲ್ಲಿ ಫಿರ್ಯಾದುದಾರರಿಗೆ ದತ್ತಿ ಬರೆದಿದ್ದಾರೆ.
ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘ ಮತ್ತು ಶಾಹಿ ಈದ್ಗಾ ಟ್ರಸ್ಟ್ ನಡುವೆ 1968ರಲ್ಲಿ ಆಗಿರುವ ಸಂಧಾನದ ಕರಾರನ್ನು ವಜಾಗೊಳಿಸಲು ಕೋರಿರುವ ಮನವಿಯು “ಉತ್ತರ ಮತ್ತು ದಕ್ಷಿಣ ಭಾಗದ ಹೊರಗಡೆ ನೆಲೆಸಿರುವ ಮುಸ್ಲಿಮ ಸಮುದಾಯಗಳನ್ನು ಸ್ಥಳಾಂತರಿಸಿ ಅದನ್ನು ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘಕ್ಕೆ ಶಾಹಿ ಈದ್ಗಾ ಮಸೀದಿ ಟ್ರಸ್ಟ್ ಒಪ್ಪಿಸಬೇಕು. ಈ ಸ್ಥಳದ ಮಾಲೀಕತ್ವವು ಮೊದಲ ಪಾರ್ಟಿಗೆ ಸಂಬಂಧಿಸಿದ್ದಾಗಿದ್ದು, ಮಾಲೀಕತ್ವದ ಬಗ್ಗೆ ಮಾತನಾಡಬಾರದು. ಉತ್ತರ ಭಾಗಕ್ಕೆ ಇರುವ ಗೋಡೆಯೊಳಗಿನ ಸ್ಥಳದ ಮಾಲೀಕತ್ವದ ಬಗ್ಗೆ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಘಕ್ಕೆ ಸಂಬಂಧವಿರುವುದಿಲ್ಲ, ಈ ಆಸ್ತಿಯು ಎರಡನೇ ಪಾರ್ಟಿಗೆ ಸಂಬಂಧಿಸಿದ್ದಾಗಿರುತ್ತದೆ” ಎಂದು ಹೇಳಲಾಗಿದೆ.
ಕತ್ರ ಕೇಶವ್ ದೇವ್‌ನಲ್ಲಿರುವ 13.37 ಎಕರೆ ಜಮೀನು ಭಗವಾನ್ ಶ್ರೀಕೃಷ್ಣ ವಿರಾಜಮಾನ್‌ಗೆ ಸೇರಿದ್ದಾಗಿದ್ದು, ಇದರ ಮೇಲೆ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ, ಈದ್ಗಾ ಮಸೀದಿ ಟ್ರಸ್ಟ್ ಅಥವಾ ಮುಸ್ಲಿಂ ಸಮುದಾಯದ ಯಾವುದೇ ಸದಸ್ಯರಿಗೆ ಅಧಿಕಾರವಿಲ್ಲ ಎಂಬುದು ಸುಸ್ಪಷ್ಟವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಸಂಧಾನ ಕರಾರು ಒಪ್ಪಿಕೊಂಡಿರುವ 1974ರ ತೀರ್ಪು ಶ್ರೀಕೃಷ್ಣ ವಿರಾಜಮಾನ್‌ಗೆ ಅನ್ವಯವಾಗುವುದಿಲ್ಲ ಎಂದು ಘೋಷಿಸಬೇಕಾಗಿ ಅರ್ಜಿಯಲ್ಲಿ ಮನವಿ ಮಾಡಲಾಗಿದ್ದು, ಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆಯೂ ಮನವಿ ಮಾಡಲಾಗಿದೆ.