ಸುದ್ದಿಗಳು

ಪೆಗಾಸಸ್ ಹಗರಣ: ಮುಕ್ತ ತನಿಖೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಇಬ್ಬರು ಹಿರಿಯ ಪತ್ರಕರ್ತರು

Bar & Bench

ಪೆಗಾಸಸ್ ಬೇಹುಗಾರಿಕೆ ಹಗರಣದ ಬಗ್ಗೆ ಸುಪ್ರೀಂಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ವಿಚಾರಣೆ ಕೋರಿ ಹಿಂದೂ ಗ್ರೂಪ್‌ ಆಫ್‌ ಪಬ್ಲಿಕ್ಷೇಷನ್‌ನ ನಿರ್ದೇಶಕ ಎನ್ ರಾಮ್ ಮತ್ತು ಏಷ್ಯಾನೆಟ್‌ನ ಶಶಿ ಕುಮಾರ್ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಕೇಂದ್ರ ಸರ್ಕಾರ ಅಥವಾ ಅದರ ಯಾವುದೇ ಅಂಗ ಸಂಸ್ಥೆಗಳು ಪೆಗಾಸಸ್‌ ಬೇಹು-ತಂತ್ರಾಂಶದ ಬಗ್ಗೆ ಪರವಾನಗಿ ಪಡೆದಿದ್ದರೆ ಅಥವಾ ಅದನ್ನು ನೇರ ಇಲ್ಲವೇ ಪರೋಕ್ಷವಾಗಿ ಬಳಸಿದ್ದರೆ ಆ ವಿಚಾರವನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

"ಮಿಲಿಟರಿ ದರ್ಜೆಯ ಸ್ಪೈವೇರ್ ಬಳಸಿ ಸಾಮೂಹಿಕವಾಗಿ ಕಣ್ಗಾವಲು ನಡೆಸಿರುವುದು ಅನೇಕ ಮೂಲಭೂತ ಹಕ್ಕುಗಳಿಗೆ ಕುತ್ತು ತಂದಿದೆ. ಜೊತೆಗೆ ನಮ್ಮ ಪ್ರಜಾಪ್ರಭುತ್ವ ಸ್ಥಾಪನೆಯ ನಿರ್ಣಾಯಕ ಆಧಾರ ಸ್ತಂಭಗಳಾಗಿ ಕಾರ್ಯನಿರ್ವಹಿಸುವ ಸ್ವತಂತ್ರ ಸಂಸ್ಥೆಗಳೊಳಗೆ ನುಸುಳಿ, ದಾಳಿ ನಡೆಸಿ, ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗಿದೆ" ಎಂದು ಮನವಿ ತಿಳಿಸಿದೆ.

ಸರ್ಕಾರ ತನ್ನ ಪ್ರತಿಕ್ರಿಯೆಯಲ್ಲಿ ಪೆಗಾಸಸ್‌ ಪರವಾನಗಿ ಪಡೆದಿರುವುದನ್ನು ತಳ್ಳಿ ಹಾಕಿಲ್ಲ. ಈ ಗಂಭೀರ ಆರೋಪಗಳ ಬಗ್ಗೆ ಯಾವುದೇ ವಿಶ್ವಾಸಾರ್ಹ ಮತ್ತು ಸ್ವತಂತ್ರ ತನಿಖೆ ನಡೆಸಲು ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದ್ದು 'ದ ವೈರ್‌' ಸುದ್ದಿ ಜಾಲತಾಣ ಹಾಗೂ ಇತರೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಅದು ಆಧರಿಸಿದೆ.

ಮನವಿಯ ಪ್ರಮುಖ ಅಂಶಗಳು…

  • ಪೆಗಾಸಸ್ ಸ್ಪೈವೇರ್ ಬಳಸಿ ಕಾನೂನುಬಾಹಿರವಾಗಿ ಫೋನ್‌ ಹ್ಯಾಕ್ ಮಾಡುವ ಮೂಲಕ ಪತ್ರಕರ್ತರು, ವೈದ್ಯರು, ವಕೀಲರು, ವಿರೋಧ ಪಕ್ಷದ ರಾಜಕಾರಣಿಗಳು, ಮಂತ್ರಿಗಳು, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಾಮಾಜಿಕ ಹೋರಾಟಗಾರರ ಮೇಲೆ ಕಣ್ಗಾವಲು ನಡೆಸಲಾಗಿದೆಯೇ?

  • ಅಂತಹ ಹ್ಯಾಕಿಂಗ್‌ನ ಪರಿಣಾಮಗಳು ಯಾವುವು? ಭಾರತದಲ್ಲಿ ವಾಕ್‌ ಸ್ವಾತಂತ್ರ್ಯ ಮತ್ತು ಅಭಿಪ್ರಾಯಭೇದದ ಪ್ರಕ್ರಿಯೆಯನ್ನು ತಣ್ಣಗಾಗಿಸುವ ಸಂಸ್ಥೆಗಳು ಮತ್ತು ಸಂಘಟನೆಗಳ ಯತ್ನ ಇದರ ಹಿಂದಿದೆಯೇ?

  • ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭದ್ರತಾ ಪ್ರಯೋಗಾಲಯ ನಡೆಸಿದ ವಿಧಿ ವಿಜ್ಞಾನ ಪರೀಕ್ಷೆಗಳಿಂದ ಪೆಗಾಸಸ್‌ ಭದ್ರತಾ ಉಲ್ಲಂಘನೆ ಮಾಡಿರುವುದು ದೃಢಪಟ್ಟಿದೆ.

  • ಮಿಲಿಟರಿ ದರ್ಜೆಯ ಬೇಹು-ತಂತ್ರಾಂಶವನ್ನು ಬಳಸಿ ಗೂಢಚರ್ಯೆ ನಡೆಸುವುದು ಖಾಸಗಿ ಹಕ್ಕಿನ ಸ್ವೀಕಾರಾರ್ಹವಲ್ಲದ ಉಲ್ಲಂಘನೆಯಾಗಿದೆ.

  • ಖಾಸಗಿತನದ ಹಕ್ಕು ಒಬ್ಬರ ಫೋನ್‌/ ಎಲೆಕ್ಟ್ರಾನಿಕ್‌ ಸಾಧನ ಬಳಕೆ ಮತ್ತು ನಿಯಂತ್ರಣದ ವ್ಯಾಪ್ತಿಯನ್ನೂ ಒಳಗೊಳ್ಳುತ್ತದೆ. ಹ್ಯಾಕಿಂಗ್‌/ ಟ್ಯಾಪಿಂಗ್‌ ಮೂಲಕ ನಡೆಸುವ ಯಾವುದೇ ಪ್ರತಿಬಂಧ ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ.

  • ಪತ್ರಕರ್ತರು, ವೈದ್ಯರು, ವಕೀಲರು, ನಾಗರಿಕ ಸಾಮಾಜಿಕ ಕಾರ್ಯಕರ್ತರು, ಸಚಿವರು ಮತ್ತು ವಿರೋಧ ಪಕ್ಷದ ರಾಜಕಾರಣಿಗಳನ್ನು ಗುರಿಯಾಗಿಸಿ ಹ್ಯಾಕಿಂಗ್‌ ಅಥವಾ ಗೂಢಚರ್ಯೆ ನಡೆಸುವುದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನೊಂದಿಗೆ ಗಂಭೀರ ರೀತಿಯಲ್ಲಿ ರಾಜಿ ಮಾಡಿಕೊಳ್ಳುತ್ತದೆ.

  • ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 5 (2) ರ ನಿಯಮವನ್ನು ಪ್ರಸ್ತುತ ಪ್ರಕರಣದಲ್ಲಿ ಸಂಪೂರ್ಣ ಉಲ್ಲಂಘಿಸಲಾಗಿದೆ. ಇಂತಹ ಕಣ್ಗಾವಲು ಸಂಪೂರ್ಣ ಕಾನೂನುಬಾಹಿರವಾಗಿದೆ.

ಪೆಗಾಸಸ್ ಹಗರಣದ ತನಿಖೆ ನಡೆಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೂರನೇ ಅರ್ಜಿ ಇದಾಗಿದೆ. ವಕೀಲ ಎಂ.ಎಲ್.ಶರ್ಮಾ ಮತ್ತು ರಾಜ್ಯಸಭಾ ಸದಸ್ಯ ಜಾನ್ ಬ್ರಿಟಾಸ್ ಅವರು ಕೂಡ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಾಲಯ ಇನ್ನೂ ಯಾವುದೇ ಅರ್ಜಿಯನ್ನು ಆಲಿಸಿಲ್ಲ.