ಕಾನೂನು ಶಿಕ್ಷಣದಲ್ಲಿ ಪರೋಪಕಾರದ ಕುರಿತು ಇತ್ತೀಚೆಗೆ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ವಿದ್ಯಾರ್ಥಿಗಳಿಗೆ ಒದಗಿಸುವ ದತ್ತಿ ಮತ್ತು ವಿದ್ಯಾರ್ಥಿವೇತನಗಳು ಯುವ ವಿದ್ಯಾರ್ಥಿಗಳನ್ನು ದೀರ್ಘಾವಧಿಗೆ ಪ್ರೋತ್ಸಾಹಿಸುತ್ತವೆ ಎಂದರು.
ಒ ಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ಹಿರಿಯ ನ್ಯಾಯವಾದಿ ಡಾ. ಅಭಿಷೇಕ್ ಮನು ಸಿಂಘ್ವಿ ಅವರ ದತ್ತಿ ಅನಾವರಣ ಮತ್ತು "ಹವಾಮಾನ ಬದಲಾವಣೆ ಮತ್ತು ಜಾಗತಿಕ ನ್ಯಾಯ: ನಮ್ಮ ಗ್ರಹದ ಭವಿಷ್ಯ" ವಿಷಯದ ಕುರಿತು ಅಧ್ಯಕ್ಷೀಯ ಭಾಷಣದ ವೇಳೆ ಅವರು ಮಾತನಾಡಿದರು.
“ಸಿಂಘ್ವಿ ಅವರ ದೃಷ್ಟಿಕೋನ ಮತ್ತು ಅವರು ಸಮಾಜಕ್ಕೆ ನೀಡಿರುವ ಕೊಡುಗೆಯ ಅತ್ಯುತ್ತಮ ಧ್ಯೋತಕ ಈ ದತ್ತಿನಿಧಿ. ಉದಾರ ಮತ್ತು ದೂರದೃಷ್ಟಿಯ ಈ ಪರೋಪಕಾರ ಕಾರ್ಯ ಸಮಾನತೆಯ ಮನೋಭಾವದಿಂದ ಪ್ರೇರಿತವಾಗಿದೆ. ದೇಶದ ಪ್ರಮುಖ ಜ್ವಾಜಲ್ಯಮಾನ ಕಾನೂನು ತಜ್ಞರೊಬ್ಬರ ಹೆಸರಿನಲ್ಲಿ ವಿದ್ಯಾರ್ಥಿ ವೇತನ ಸ್ವೀಕರಿಸುವುದು ಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕಾರಿಯಾಗುತ್ತದೆ. ಇದು ನಮ್ಮ ಸಾರ್ವಜನಿಕ ಸ್ಥಳಗಳಲ್ಲಿ ತಾರ್ಕಿಕತೆಯ ಮನೋಭಾವವನ್ನು ಬೆಳೆಸುತ್ತದೆ. ಅಲ್ಲದೆ ಕಲಿಕೆಗೆ ಅಮೂಲ್ಯ ಚಿಮ್ಮುಹಲಗೆಯಾಗುತ್ತದೆ ಎಂಬುದನ್ನು ಇದು ಋಜುವಾತುಪಡಿಸಿದೆ” ಎಂದರು.
ಕಾನೂನು ಶಿಕ್ಷಣಕ್ಕೆ ಪ್ರವೇಶವನ್ನು ಹೆಚ್ಚಿಸುವ ಮಹತ್ವದ ಕುರಿತಂತೆಯೂ ಅವರು ಈ ಸಂದರ್ಭದಲ್ಲಿ ಮಾತನಾಡಿದರು. “ಕಾನೂನು ಅಧ್ಯಯನ ಎಂದರೆ ಸಾಮಾಜಿಕ ಏಣಿಶ್ರೇಣಿಯನ್ನು ಪ್ರಶ್ನಿಸುವ ಸ್ಥಳಗಳು. ನಾವು ಕಾನೂನು ಶಿಕ್ಷಣ ಪಡೆಯಲು ಅವಕಾಶ ಹೆಚ್ಚಿಸಬೇಕೆ? ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ವಕೀಲರಿದ್ದರೆ ಒಳ್ಳೆಯದೆ? ಕಾನೂನು ಅಧ್ಯಯನಕ್ಕೆ ಹೆಚ್ಚು ಅವಕಾಶ ಒದಗಿಸುವಲ್ಲಿ ಯಶಸ್ವಿಯಾಗಬೇಕಾದರೆ ಯಾವುದು ಮುಖ್ಯವಾಗುತ್ತದೆ? ಅಂತಹ ಯುವ ವಕೀಲರ ಕೌಶಲ್ಯಗಳನ್ನು ನಾವು ವಿಶಾಲ ರಾಷ್ಟ್ರೀಯ ಯೋಜನೆಗೆ ಬಳಸಿಕೊಳ್ಳಬಹುದೇ? ನಮ್ಮದು ಅತ್ಯಂತ ದೊಡ್ಡ, ವೈವಿಧ್ಯಮಯ ಮತ್ತು ಅಸಮಾನ ದೇಶ. ಶತಮಾನಗಳಿಂದ ಅಡಿಯಾಳಾಗಿರುವ ಸಮುದಾಯಗಳಿದ್ದು ಅವು ಇಂದಿಗೂ ಸಮಾಜದಂಚಿನಲ್ಲಿವೆ. ಕಾನೂನಿನ ಅಧ್ಯಯನ ನಮ್ಮ ಸಾಮಾಜಿಕ ಸನ್ನಿವೇಶದೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಈ ಅತ್ಯಂತ ಮಹತ್ವದ ಸ್ಥಾನಕ್ಕೆ ಪ್ರವೇಶವನ್ನು ಮಿತಿಗೊಳಿಸುವುದು ದೊಡ್ಡ ಜನಸಮುದಾಯಕ್ಕೆ ತಮ್ಮ ಹಕ್ಕುಗಳನ್ನು ನಿರಾಕರಿಸಿದಂತಾಗುತ್ತದೆ. ಕಾನೂನು ಶಿಕ್ಷಣಕ್ಕೆ ಆದ್ಯತೆ ನೀಡುವುದು ನಮ್ಮ ಗುರಿಯಾಗುವುದಾದರೆ ಗಣ್ಯ ಸಂಸ್ಥೆಗಳಿಗೆ ಹೆಚ್ಚಿನ ಮಣೆ ಹಾಕುವುದರಿಂದ ನಮ್ಮ ಗುರಿ ಸಾಧಿಸಿದಂತಾಗುವುದಿಲ್ಲ ”ಎಂದು ಅವರು ಹೇಳಿದರು.
ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಹವಾಯಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮೈಕೆಲ್ ಡಿ ವಿಲ್ಸನ್ "ಹವಾಮಾನ ಬಿಕ್ಕಟ್ಟಿಗೆ ಕಾನೂನು ಸಮುದಾಯದ ಪ್ರತಿಕ್ರಿಯೆ ಎಂದಿಗೂ ನೋಡಿಲ್ಲ ಎಂಬಷ್ಟು ಅಸಾಧಾರಣವಾಗಿದೆ! ನಾವು ಹವಾಮಾನ ತುರ್ತು ಪರಿಸ್ಥಿತಿಯಲ್ಲಿದ್ದೇವೆ. ಪತನದ ಮೊದಲು ನಾವು ಇದನ್ನು ಎದುರಿಸಬೇಕಾಕಿದ್ದು ಸಮಯದ ಮಿತಿ ಇದೆ. ನಾವೀಗ ಅಂತಿಮ ಹಂತದಲ್ಲಿದ್ದೇವೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಅಸ್ತಿತ್ವದ ಬಿಕ್ಕಟ್ಟು ಎದುರಿಸಲು ನಮಗೆ ಕೇವಲ 30-40 ವರ್ಷಗಳು ಉಳಿದಿವೆ, ”ಎಂದು ಹೇಳಿದರು.
ರೂ 2 ಕೋಟಿ ಮೊತ್ತದ ಸಿಂಘ್ವಿ, ದತ್ತಿ ನಿಧಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದೊಂದಿಗಿನ ಒಪ್ಪಂದಕ್ಕೆ ಡಾ. ಸಿಂಘ್ವಿ ಸಹಿ ಹಾಕಿ ಮಾತನಾಡಿದರು. ಒ ಪಿ ಜಿಂದಾಲ್ ವಿಶ್ವವಿದ್ಯಾಲಯದ ಸಂಸ್ಥಾಪಕ ಉಪ ಕುಲಪತಿ ಡಾ.ಸಿ ರಾಜಕುಮಾರ್, ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಡಾ. ಜಯಂತ್ ಕೆ ಕೃಷ್ಣನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.